ಅಂತೂ ಕೇಶ ಮುಂಡನಕ್ಕೆ ಸಜ್ಜಾದ ಕುಮಾರಣ್ಣನ ಅಭಿಮಾನಿ
ಕಾರವಾರ, ಮೇ 22: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವವರೆಗೆ ಕೇಶ ಮುಂಡನ ಮಾಡುವುದಿಲ್ಲ ಎಂದು ಹರಕೆ ಹೊತ್ತಿದ್ದ ಕುಮಾರಸ್ವಾಮಿಯವರ ಅಭಿಮಾನಿ, ಇದೀಗ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಕೇಳಿ ಕೇಶ ಮುಂಡನ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.
ಜೆಡಿಎಸ್ ತಾಲೂಕು ಅಧ್ಯಕ್ಷರು ಆಗಿರುವ ಇಲ್ಲಿನ ಸದಾಶಿವಗಡದ ನಿವಾಸಿ ಅಜಿತ್ ಪೊಕಳೆ ಕಟ್ಟಾ ಕುಮಾರಸ್ವಾಮಿ ಅಭಿಮಾನಿ. ಚುನಾವಣೆ ಪೂರ್ವದಲ್ಲಿ ಅವರು, ಕುಮಾರಸ್ವಾಮಿ ಈ ಬಾರಿ ಮುಖ್ಯಮಂತ್ರಿಯಾಗುತ್ತಾರೆ.
ಅವರ ನೇತೃತ್ವದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವವರೆಗೆ ಕೇಶ ಮುಂಡನ ಮಾಡಿಸುವುದಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿ 2017 ರ ಡಿಸೆಂಬರ್ 4 ರಂದು ಹರಕೆ ಹೊತ್ತಿದ್ದರು.

ಈಗ ಅದರಂತೆ ಅವರು ನಡೆದುಕೊಂಡಿದ್ದಾರೆ. "ಧರ್ಮಸ್ಥಳದ ಮಂಜುನಾಥ ದೇವರಿಗೆ ಹರಕೆ ಹೇಳಿಕೊಂಡಿದ್ದ ನಾನು, ಅಂದಿನಿಂದ ಇಂದಿನವರೆಗೂ ಕ್ಷೌರ ಹಾಗೂ ಮುಖಕ್ಷೌರ ಮಾಡಿಸಿಕೊಂಡಿಲ್ಲ. ಮಂಜುನಾಥನ ಕೃಪೆಯಿಂದ ನನ್ನ ಆಸೆ ಇನ್ನೆರೆಡು ದಿನಗಳಲ್ಲಿ ಈಡೇರಲಿದೆ.

ಕುಮಾರಣ್ಣ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅದರ ನಂತರ 322 ಕಿ.ಮೀ. ದೂರದ ಧರ್ಮಸ್ಥಳಕ್ಕೆ ಅಂದಾಜು ಎರಡು ವಾರಗಳವರೆಗೆ ಪಾದಯಾತ್ರೆ ಹೊರಡುವ ಮೂಲಕ ಹರಕೆ ತೀರಿಸಿ ಬರುತ್ತೇನೆ" ಎಂದು ಅಜಿತ್ ಹೇಳಿಕೊಂಡಿದ್ದಾರೆ.












Click it and Unblock the Notifications