ಉತ್ತರ ಕನ್ನಡ ಜಿಲ್ಲೆಯಲ್ಲಿ ಯುವ ನಿಧಿಗೆ ನೋಂದಣಿ ಮಾಡಿಸಿದ ಅಭ್ಯರ್ಥಿಗಳೆಷ್ಟು? ಅಂಕಿ ಅಂಶ ವಿವರ
ಕಾರವಾರ, ಜನವರಿ 05: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ನೊಂದಣಿ ಮಾಡಬೇಕು. ಯೋಜನೆಯ ಸೌಲಭ್ಯವನ್ನು ಒದಗಿಸುವಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳು ಮತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದ್ದಾರೆ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಯುವನಿಧಿ ಯೋಜನೆಯ ನೊಂದಣಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2022-23 ರಲ್ಲಿ ಪದವಿ/ಡಿಪ್ಲೋಮಾ ಪಡೆದ ವಿದ್ಯಾರ್ಥಿಗಳು ( ಅಂದರೆ 2023 ನೇ ವರ್ಷದಲ್ಲಿ ಉತ್ತೀರ್ಣರಾದವರು ) ಯುವ ನಿಧಿ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಲು ಅರ್ಹರಾಗಿದ್ದಾರೆ.

ಪದವೀಧರರಿಗೆ 3,000 ರೂಪಾಯಿ ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ 1500 ರೂಗಳ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ವರೆಗೆ ನೀಡುವ ಯುವನಿಧಿ ಯೋಜನೆಯ ಕುರಿತಂತೆ ಜಿಲ್ಲೆಯ ಎಲ್ಲಾ ನಗರಸ್ಥಳೀಯ ಸಂಸ್ಥೆಗಳು, ತಾಲೂಕುಗಳು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೆಚ್ಚಿನ ಅರಿವು ಮೂಡಿಸುವುದರ ಜೊತೆಗೆ ಜಿಲ್ಲೆಯ ಗರಿಷ್ಠ ಸಂಖ್ಯೆಯ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯವನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ 32 ಪದವಿ ಕಾಲೇಜುಗಳು ಹಾಗೂ 8 ಡಿಪ್ಲೋಮಾ ಕಾಲೇಜುಗಳಿದ್ದು, ಈ ಸಂಸ್ಥೆಗಳಲ್ಲಿ 2022-23 ರಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಪ್ರತಿಯೊಬ್ಬರಿಗೂ ದೂರವಾಣಿ ಮೂಲಕ ಸಂಪರ್ಕಿಸಿ , ಯೋಜನೆಯ ಬಗ್ಗೆ ಮಾಹಿತಿ ನೀಡಿ ನೊಂದಣಿ ಮಾಡುವಂತೆ ಹಾಗೂ ಎಲ್ಲಾ ಗ್ರಾಮ ಪಂಚಾಯತ್‌ಗಳು, ತಹಶೀಲ್ದಾರ್ ಕಚೇರಿಗಳ ವ್ಯಾಪ್ತಿಯಲ್ಲಿ ಯೋಜನೆಯ ಕುರಿತಂತೆ ಪ್ರಚಾರ ಫಲಕಗಳನ್ನು ಅಳವಡಿಸುವುದರ ಜೊತೆಗೆ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ತಿಳಿಸಿದರು.
ಜನವರಿ 12 ಕ್ಕೆ ಯುವನಿಧಿ ಯೋಜನೆಯು ಮುಖ್ಯಂತ್ರಿಗಳಿಂದ ಉದ್ಘಾಟನೆಯಾಗಲಿದ್ದು, ಅಂದು ರಾಜ್ಯದಲ್ಲಿ ನೊಂದಣಿ ಮಾಡಿರುವ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ. ಜಿಲ್ಲೆಯಲ್ಲಿ ಇದುವರೆಗೆ 752 ಮಂದಿ ಮಾತ್ರ ಯೋಜನೆಗೆ ನೊಂದಣಿ ಮಾಡಿದ್ದು, ಜಿಲ್ಲೆಯ ಅರ್ಹ ಎಲ್ಲಾ ಫಲಾನುಭವಿಗಳಿಗೂ ಈ ಯೋಜನೆಯ ಪ್ರಯೋಜನ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುವಂತೆ ಹೇಳಿದರು.
ಈ ಯೋಜನೆಗೆ ಅಭ್ಯರ್ಥಿಗಳು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಪದವಿ/ಡಿಪ್ಲೋಮಾ ಪಡೆದವರು, ಕನಿಷ್ಠ 6 ವರ್ಷ ರಾಜ್ಯದ ನಿವಾಸಿಗಳಾಗಿರುವವರು ಮಾತ್ರ ಅರ್ಹರಿದ್ದು, ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿ/ ಡಿಪ್ಲೋಮಾ ಉತ್ತೀರ್ಣದ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಾಗಿದ್ದು, ಯೋಜನೆಯ ನೊಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ ಎಂದರು.
ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಸಂಸ್ಥೆಯಲ್ಲಿ 2022-23 ರಲ್ಲಿ ಪದವಿ/ಡಿಪ್ಲೋಮಾ ಪಡೆದ ವಿದ್ಯಾರ್ಥಿಗಳಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡುವ ಮೂಲಕ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಯುವಜನತೆಗೆ ಇದರ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಬಂಧಪಟ್ಟ ಆಧಿಕಾರಿಗಳಿಗೆ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಅರ್ಹ ಎಲ್ಲಾ ಪದವಿ/ಡಿಪ್ಲೋಮಾ ಪದವೀಧರರು ಸರ್ಕಾರದ ಯೋಜನೆಯ ನೆರವು ಪಡೆಯುವಂತೆ ತಿಳಿಸಿದರು.












Click it and Unblock the Notifications