ಬೀದಿ ನಾಯಿಗಳನ್ನು ಕಾಡಿಗೆ ಬಿಟ್ಟ ಹಳಿಯಾಳ ಪುರಸಭೆ: ಪ್ರಾಣಿಪ್ರಿಯರ ಆಕ್ರೋಶ
ಕಾರವಾರ, ಸೆಪ್ಟೆಂಬರ್, 26: ಹಳಿಯಾಳ ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿತ್ತು. ಇವುಗಳಿಂದ ಆಗುವ ತೊಂದರೆ ತಪ್ಪಿಸಲು ಸ್ಥಳೀಯ ಆಡಳಿತ ಮುಂದಾಗಿದ್ದು, ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಹಳಿಯಾಳ ಹಾಗೂ ಯಲ್ಲಾಪುರ ಗಡಿಭಾಗದ ಕಾಡಂಚಿನಲ್ಲಿ ಬಿಟ್ಟು ಹೋಗಿದೆ. ಇದರಿಮದ ನಾಯಿಗಳು ಕಾಡು ಪ್ರಾಣಿಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚಾಗಿದೆ.
ಹಳಿಯಾಳ ಪಟ್ಟಣದ ಬೀದಿಗಳಲ್ಲಿ ಜನ ಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದ ಸುಮಾರು 80 ರಿಂದ 100 ನಾಯಿಗಳನ್ನು ಟಾಟಾ ಎಸ್ ವಾಹನದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ನಂತರ ಅವುಗಳನ್ನು ರಾಷ್ಟ್ರೀಯ ಹೆದ್ದಾರಿ ಹಳಿಯಾಳ ಕ್ರಾಸ್ ಸಮೀಪದ ಒಳ ರಸ್ತೆಯಲ್ಲಿ ಬಿಟ್ಟು ತೆರಳಿದ್ದಾರೆ. ಹಿಂಸಾತ್ಮಕವಾಗಿ ಅರಣ್ಯಕ್ಕೆ ಸ್ಥಳಾಂತರ ಮಾಡಿರುವ ಪುರಸಭೆ ವಿರುದ್ಧ ಇದೀಗ ಆಕ್ರೋಶ ಭುಗಿಲೆದ್ದಿದೆ. ಅಲ್ಲದೆ ಹಳಿಯಾಳದ ಯೋಗರಾಜ ಎಸ್.ಕೆ., ಮನೇಕಾ ಗಾಂಧಿಯವರ ಪೀಪಲ್ ಫಾರ್ ಅನಿಮಲ್, ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಬೀದಿ ನಾಯಿಗಳನ್ನು ಹಿಂಸಾತ್ಮಕವಾಗಿ ವಾಹನದಲ್ಲಿ ಸಾಗಿಸಿರುವ ಕುರಿತು ದೂರು ನೀಡಿದ್ದಾರೆ.
ಕರಾವಳಿಯಲ್ಲಿ ಮರಳುಗಾರಿಕೆಗೆ ನಿಷೇಧ: ನಿಲ್ಲದ ಅಕ್ರಮ ಮರಳು ಸಾಗಾಟ ದಂಧೆ
ಪುರಸಭೆ ನಿಲುವಿಗೆ ಭುಗಿಲೆದ್ದ ಆಕ್ರೋಶ
ಇನ್ನು ಯಲ್ಲಾಪುರ ಪಟ್ಟಣದ ಸುತ್ತಮುತ್ತ ಇತ್ತೀಚೆಗೆ ಚಿರತೆ, ಕರಡಿ ಹಾವಳಿಗಳು ಹೆಚ್ಚಾಗಿದ್ದು, ಪಟ್ಟಣದ ಅಂಚಿನ ಅರಣ್ಯ ಪ್ರದೇಶದಲ್ಲಿ ಬಿಟ್ಟಿರುವ ಬೀದಿ ನಾಯಿಗಳು ಆಹಾರವಾಗುವ ಸಾಧ್ಯತೆ ಇದೆ. ಅಲ್ಲದೆ ಇಂತಹ ನಾಯಿಗಳನ್ನು ಬೇಟೆಯಾಡುವ ಸಲುವಾಗಿ ಚಿರತೆ, ಕರಡಿಗಳು ಪಟ್ಟಣ ಹಾಗೂ ಜನ ವಾಸ್ತವ್ಯ ಪ್ರದೇಶದವರೆಗೂ ಬರುವ ಸಾಧ್ಯತೆ ಇದೆ. ಜೊತೆಗೆ ಅರಣ್ಯದ ಸಹವಾಸವೇ ಗೊತ್ತಿಲ್ಲದ ಬೀದಿ ನಾಯಿಗಳು ಎಲ್ಲೆಂದರಲ್ಲಿ ಸುತ್ತಿ ಆಹಾರ, ನೀರು ಸಿಗದೇ ಹಸಿವಿನಿಂದ ಸಾಯುವ ಸ್ಥಿತಿಯೂ ನಿರ್ಮಾಣವಾಗಬಹುದು ಎಂದು ಪ್ರಾಣಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಪಷ್ಟ ಮಾಹಿತಿ ನೀಡುವಂತೆ ಪುರಸಭೆಗೆ ನೋಟಿಸ್
ಹಳಿಯಾಳ ಪಟ್ಟಣದ ಬೀದಿನಾಯಿಗಳನ್ನು ಕಾಡಿನಲ್ಲಿ ಬಿಟ್ಟಿರುವ ಕುರಿತು ಹಳಿಯಾಳ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿಗಳು ಪುರಸಭೆಗೆ ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯವಾಣಿಗೆ ಹಳಿಯಾಳ ಪಟ್ಟಣದ ಸ್ಥಳೀಯ ನಿವಾಸಿಗರು ದೂರು ಸಲ್ಲಿಸಿದ್ದಾರೆ. ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಸಾಗಾಣಿಕೆ ಮಾಡಿ ಕಾಡಿನಲ್ಲಿ ಬಿಟ್ಟಿರುವ ವಿಡಿಯೋ ವೈರಲ್ ಆಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ಅನ್ನು ಉಲ್ಲಂಘನೆ ಮಾಡಿದ್ದು, ಸ್ಪಷ್ಟವಾಗಿ ಕಾಣುತ್ತಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಪ್ರಾಣಿಗಳಿಗೆ ಸಂಪೂರ್ಣ ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಸಂವಿಧಾನದ ಸೆಕ್ಷನ್ 03 ಮತ್ತು 11 ಅನ್ನು ಆರ್ಟಿಕಲ್‌ನಡಿಯಲ್ಲಿ ತಿಳಿಸಲಾಗಿರುತ್ತದೆ. ಬೀದಿ ನಾಯಿಗಳಿಗೆ, ದನಗಳಿಗೆ ಪಟ್ಟಣ ಪಂಚಾಯತ್ ವತಿಯಿಂದ ನೀರು ಮತ್ತು ಆಹಾರವನ್ನು ಒದಗಿಸಿ ಅವುಗಳಿಗೆ ಆಶ್ರಯ ನೀಡುವ ಜವಾಬ್ದಾರಿ ಇರುತ್ತದೆ. ಪಶು ಇಲಾಖೆ ಈ ದೂರಿನ ವಿಷಯದ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಬೇಕಾಗಿದ್ದು, ಕೂಡಲೆ ಸ್ಪಷ್ಟ ಮಾಹಿತಿಯನ್ನು ಪಶು ಇಲಾಖೆಯ ಕಛೇರಿಗೆ ನೀಡುವಂತೆ ಹಳಿಯಾಳ ಪುರಸಭೆಗೆ ನೋಟಿಸ್ ಜಾರಿ ನೀಡಲಾಗಿದೆ.

ಹಿಂಸಾತ್ಮಕವಾಗಿ ನಾಯಿಗಳ ಸಾಗಾಟ
ಇನ್ನು ನಾಯಿಯನ್ನು ಸಾಗಿಸಲು ಗುತ್ತಿಗೆ ಪಡೆದವರು, 10 ನಾಯಿಗಳನ್ನಷ್ಟೆ ಸಾಗಿಸಬಹುದಾಗಿದ್ದ ಟಾಟಾ ಏಸ್ ವಾಹನದಲ್ಲಿ 80 ರಿಂದ 100 ನಾಯಿಗಳನ್ನು ಹಿಂಸಾತ್ಮಕವಾಗಿ ಯಲ್ಲಾಪುರ ಪಟ್ಟಣದ ಹೊರಗೆ ಎಸೆದು ಹೋಗಿದ್ದಾರೆ. ಅದರಲ್ಲಿ ಕೆಲವು ನಾಯಿಗಳು ರೋಗಗ್ರಸ್ಥವಾಗಿದ್ದು, ಇನ್ನು ಕೆಲವು ನಾಯಿಗಳು ಆರೋಗ್ಯಕರವಾಗಿರುವುದು ಕಂಡುಬರುತ್ತಿವೆ. ಅಲ್ಲದೆ ರೋಗಗ್ರಸ್ಥ ನಾಯಿಗಳಿಗೆ ವ್ಯಾಕ್ಸಿನೇಷನ್ ಅಥವಾ ಯಾವುದೇ ಔಷಧೋಪಚಾರವನ್ನು ನಡೆಸಿಲ್ಲ ಎಂದು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಡಿಸಿದ್ದಾರೆ. ಇನ್ನು ಇದೀಗ ಯಲ್ಲಾಪುರ ಸಮೀಪ ಆಗಿರುವುದರಿಂದ ಕೆಲ ನಾಯಿಗಳು ಯಲ್ಲಾಪುರಕ್ಕೆ ಆಗಮಿಸಿದ್ದು, ಪಟ್ಟಣದಲ್ಲಿ ಎಲ್ಲೆಂದರಲ್ಲಿ ನಾಯಿಗಳು ಕಂಡುಬರುತ್ತಿವೆ. ಇದರಿಂದ ಯಲ್ಲಾಪುರದಲ್ಲೂ ಬೀದಿನಾಯಿಗಳ ಕಾಟ ಹೆಚ್ಚಾಗುವ ಆತಂಕ ಎದುರಾಗಿದೆ.