ಬೀದಿಗೆ ಬಂದ ಗೋಕರ್ಣದ ವಸ್ತ್ರಸಂಹಿತೆ; ಗೊಂದಲಕ್ಕೆ ತೆರೆ ಎಳೆದ ಜಿಲ್ಲಾಡಳಿತ
ಕಾರವಾರ, ನವೆಂಬರ್, 14: ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ವಸ್ತ್ರಸಂಹಿತೆ ವಿಚಾರ ಇದೀಗ ಬೀದಿಗೆ ಬಂದಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಬಂದು ಆತ್ಮಲಿಂಗದ ದರ್ಶನ ಪಡೆಯುತ್ತಿದ್ದರು. ಇದೀಗ ದೇವಾಲಯದ ಒಳಗೆ ಮಾತ್ರ ಸೀಮಿತವಾಗಿದ್ದ ವಸ್ತ್ರಸಂಹಿತೆಯನ್ನು ದೇವಸ್ಥಾನ ಎದುರಿನ ರಸ್ತೆಗೂ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಜಿಲ್ಲಾಡಳಿತ ಬೀದಿಯಲ್ಲಿ ಅಂಟಿಸಿದ ಬ್ಯಾನರ್‌ಗಳನ್ನು ತೆರವುಗೊಳಿಸಿ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದೆ.
ದಕ್ಷಿಣ ಕಾಶಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಬರುತ್ತಾರೆ. ಜೊತೆಗೆ ದೇಶ ವಿದೇಶದಿಂದ ಬರುವ ಪ್ರವಾಸಿಗರ ನೆಚ್ಚಿನ ಧಾರ್ಮಿಕ ತಾಣವೂ ಆಗಿದೆ. ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರನ ಆತ್ಮಲಿಂಗ ಸ್ಪರ್ಶ ಮಾಡಿ ಪುಣ್ಯ ಪಡೆಯುವುದಕ್ಕಾಗಿಯೇ ದೇಶ ವಿದೇಶದಿಂದಲೂ ಭಕ್ತರು ಆಗಮಿಸುತ್ತಾರೆ.
ಹೀಗೆ ಬಂದವರು ಆತ್ಮಲಿಂಗದ ದರ್ಶನ ಪಡೆದಾಗ ಪುನಿತರಾಗುತ್ತಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ದೇವಸ್ಥಾನದ ಆಡಳಿತ ಮಂಡಳಿಯಿಂದ ನಿಯಮಗಳು ಆಗಾಗ ಬದಲಾಗುತ್ತಿದ್ದು, ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ದೇವಸ್ಥಾನ ಪ್ರವೇಶಿಸುವ ಪುರುಷ ಭಕ್ತರಿಗೆ ಪಂಚೆ, ಶಲ್ಯ ಕಡ್ಡಾಯ ಮಾಡಿದ ಆಡಳಿತ ಮಂಡಳಿ ಮಹಿಳೆಯರಿಗೆ ಸೀರೆ, ಚೂಡಿದಾರವನ್ನು ಕಡ್ಡಾಯ ಮಾಡಿತ್ತು.

ಮಂಡಳಿ ವಿರುದ್ಧ ವಿರುದ್ಧ ಭಕ್ತರು ಕಿಡಿ
ಆದರೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ದೇವಸ್ಥಾನದ ರಥ ಬೀದಿಯಿಂದ ಪಶ್ಚಿಮ ದ್ವಾರದವರೆಗೆ ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸಲು ನಿಷೇಧಿಸಿ ಆದೇಶ ಹೊರಡಿಸಿ ನಾಮಫಲಕ ಹಾಕಿದೆ. ಆದರೆ ಇದಕ್ಕೆ ಇದೀಗ ಸ್ಥಳೀಯರು ಸೇರಿದಂತೆ ಭಕ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಗೋಕರ್ಣದ ಮುಖ್ಯ ಕಡಲತೀರ ಸೇರಿದಂತೆ ಇತರೆ ಭಾಗಕ್ಕೂ ತೆರಳಬೇಕಿದ್ದರೇ ಇದೇ ರಸ್ತೆಯಲ್ಲಿಯೇ ತೆರಳಬೇಕು. ಹೀಗಿರುವಾಗ ಸಾರ್ವಜನಿಕ ಪ್ರದೇಶಗಳಿಗೂ ವಸ್ತ್ರಸಂಹಿತೆ ನಿಯಮ ತಂದಿರುವುದಕ್ಕೆ ವ್ಯಾಪಕ ಅಕ್ರೋಶ ವ್ಯಕ್ತವಾಗಿತ್ತು.

ದೇವಸ್ಥಾನದಿಂದ ನಾಮಫಲಕ ಅಳವಡಿಕೆ
ಇನ್ನು ಸಾರ್ವಜನಿಕರು ತಿರುಗಾಡುವ ಪ್ರದೇಶದಲ್ಲಿ ಈ ನಾಮಫಲಕಗಳನ್ನು ಹಾಕಲಾಗಿತ್ತು. ಈ ರಿತಿ ಸಾರ್ವಜನಿಕ ರಸ್ತೆಗೂ ವಸ್ತ್ರ ನಿಯಮ ಜಾರಿ ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಭಕ್ತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಇರುವ ಒಂದು ರಸ್ತೆಗೂ ವಸ್ತ್ರ ಸಂಹಿತೆ ಜಾರಿ ಮಾಡಿದರೆ ಜನರು ಎಲ್ಲಿ ಓಡಾಡಬೇಕು? ಎಂದು ಪ್ರಶ್ನಿಸಿದ್ದರು. ದೇವಸ್ಥಾನದ ಒಳಭಾಗದಲ್ಲಿಯೂ ಕಳೆದ ಕೆಲವು ವರ್ಷದಿಂದ ಇತ್ತೀಚೆಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ದೇವಾಲಯಕ್ಕೆ ಬರುವವರು ಎಲ್ಲರೂ ಪಂಚೆಯನ್ನು ತರುವುದಿಲ್ಲ. ಬಡ ಭಕ್ತರಿಗೆ ಹೊರೆ ಆಗಲಿರುವ ಕಾರಣ ಕೂಡಲೇ ವಸ್ತ್ರ ಸಂಹಿತೆ ತೆರವುಗೊಳಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದರು.

ಬ್ಯಾನರ್ ತೆರವಿಗೆ ಜಿಲ್ಲಾಧಿಕಾರಿ ಸೂಚನೆ
ಇನ್ನು ಸಮಿತಿಯ ಅಧ್ಯಕ್ಷರ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ಬಾರದೇ ಸಮಿತಿ ಸದಸ್ಯರು ಮಾಡಿದ ತೀರ್ಮಾನದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಇದೀಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಕುಮಟಾ ಉಪ ವಿಭಾಗಾಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ಬ್ಯಾನರ್ ತೆರವುಗೊಳಿಸುವ ಮೂಲಕ ವಸ್ತ್ರಸಂಹಿತೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ವಸ್ತ್ರ ಸಂಹಿತೆ ಬಗ್ಗೆ ಭಕ್ತರು ಹೇಳಿದ್ದೇನು?
ಒಟ್ಟಾರೆ ಸಾರ್ವಜನಿಕ ಸ್ಥಳಗಳಿಗೂ ಹೇರಿದ್ದ ವಸ್ತ್ರ ಸಂಹಿತೆ ನಿಯಮವನ್ನು ಹಿಂದೆ ಪಡೆದ ದೇವಸ್ಥಾನದ ಉಸ್ತುವಾರಿ ಆಡಳಿತ ಸಮಿತಿ ಫಲಕಗಳನ್ನು ತೆರವುಗೊಳಿಸಿದೆ. ಆದರೆ ದೇವಸ್ಥಾನದ ಒಳ ಆವರಣದಲ್ಲಿ ತನ್ನ ವಸ್ತ್ರ ನಿಯಮ ಮುಂದುವರೆಸಿದ್ದು, ಜಿಲ್ಲಾಡಳಿತ ಹಾಗೂ ಸುಪ್ರೀಂ ಕೋರ್ಟ್‌ನಿಂದ ನಿಯೋಜನೆಗೊಂಡ ಸಮಿತಿ ಅಧ್ಯಕ್ಷರು ಈ ಬಗ್ಗೆ ಗಮನಹರಿಸಿ ವಸ್ತ್ರ ನಿಯಮ ತೆಗೆದುಹಾಕಬೇಕು ಎಂಬುದು ಭಕ್ತರ ಆಗ್ರಹವಾಗಿದೆ.












Click it and Unblock the Notifications