• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಕೀಯ ಚರ್ಚೆಗೆ ಗ್ರಾಸವಾದ ‘ಕೊರೊನಾ ಮಾತ್ರೆ’; ಹೇಳಿಕೆ ಕೊಟ್ಟು ಪೇಚಿಗೆ ಸಿಲುಕಿದ ಸೈಲ್?

|

ಕಾರವಾರ, ಜುಲೈ 21: ಕೊರೊನಾ ಸೋಂಕು ಇಂದು ವಿಶ್ವದಾದ್ಯಂತ ತನ್ನ ಅಟ್ಟಹಾಸ ಮೆರೆದಿದೆ. ರೋಗದ ಕಡಿವಾಣಕ್ಕೆ ವಿಶ್ವದ ನಾನಾ ದೇಶಗಳಲ್ಲಿ ಇನ್ನೂ ಔಷಧಿ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಇದರ ನಡುವೆ, ಕಾರವಾರದಲ್ಲಿ ಕೊರೊನಾ ಸೋಂಕು ಹೋಗಲಾಡಿಸಲು ರೆವಿರೋಲ್ ಎನ್ನುವ ಆಯುಷ್ ಮಾತ್ರೆ ಸಹಕಾರಿಯಾಗಲಿದೆ ಎನ್ನುವ ಮಾಜಿ ಶಾಸಕ ಸತೀಶ್ ಸೈಲ್ ‌ರವರ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

   Drone Prathap ಜೀವನಾಧಾರಿತ ಸಿನಿಮಾ ಎಲ್ಲಿಗೆ ಬಂತು ? | Oneindia Kannada

   ಕಾರವಾರ ತಾಲೂಕಿನ ಹಳಗಾ ಗ್ರಾಮದ ಆಯುಷ್ ವೈದ್ಯರೊಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಇವರನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ವಾರ್ಡ್ ಗೆ ದಾಖಲಿಸಲಾಗಿತ್ತು. ಆದರೆ, ಈ ವೇಳೆ ಅವರು ತಾಲೂಕಿನ ಶಿರವಾಡ ಗ್ರಾಮದ ರೆವಿಂಟೋ ಲೈಫ್ ‌ಸೈನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ತಯಾರಿಸಿದ್ದ ರೆವಿರೋಲ್ ಮಾತ್ರೆಗಳನ್ನು ನಿಯಮಿತವಾಗಿ ಸೇವನೆ ಮಾಡಿದ್ದರಿಂದ ಗುಣಮುಖರಾಗಿದ್ದಾರೆ ಎಂದು ಸತೀಶ್ ಸೈಲ್ ಹೇಳಿಕೆ ನೀಡಿದ್ದರು. ಅಲ್ಲದೇ, ಜಿಲ್ಲೆಯಾದ್ಯಂತ ಈ ಮಾತ್ರೆಗಳನ್ನು ಉಚಿತವಾಗಿ ವಿತರಣೆ ಮಾಡುವುದಾಗಿಯೂ ಕಂಪೆನಿಯ ಮಾಲೀಕರು ಭರವಸೆ ನೀಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದರು. ಆದರೆ, ಇದೇ ವಿಚಾರ ಈಗ ಸಾಕಷ್ಟು ವಿರೋಧಕ್ಕೂ ಕಾರಣವಾಗಿದ್ದು, ಮಾಜಿ ಶಾಸಕ ಸೈಲ್ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ.

    ದ್ವೇಷದಿಂದ ಮೈ ಪರಚಿಕೊಳ್ಳುತ್ತಿದ್ದಾರೆ: ಸೈಲ್

   ದ್ವೇಷದಿಂದ ಮೈ ಪರಚಿಕೊಳ್ಳುತ್ತಿದ್ದಾರೆ: ಸೈಲ್

   ಕಾರವಾರದಲ್ಲಿ ಜನಸಾಮಾನ್ಯರ ಕಷ್ಟದಲ್ಲಿ ನಾನು ಹೋರಾಡುತ್ತಿರುವುದರ ಪರಿ ನೋಡಿ ಸಹಿಸಿಕೊಳ್ಳಲಾಗದ ಜನರು ಆಯುಷ್ ಔಷಧದ ನೆಪ ಹಿಡಿದು ನನ್ನನ್ನು ಟೀಕಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಸತೀಶ ಸೈಲ್ ಹೇಳಿದ್ದಾರೆ.

   ಅಧಿಕಾರಿಗಳಿಗೆ ಹೆಣ ಹಿಡಿದು ಊರೆಲ್ಲ ತಿರುಗಾಡೋ ಪರಿಸ್ಥಿತಿ; ಎಲ್ಲೇ ಹೂತರೂ ವಿರೋಧ

   ನಾಡಿನ ಹೆಸರಾಂತ ಸಂಸ್ಥೆಗಳು ಕೂಡ ಕೊರೊನಾ ಗುಣಪಡಿಸುವ ಔಷಧಿಯನ್ನು ತಾವು ತಯಾರಿಸಿರುವುದಾಗಿ ಪ್ರಕಟಣೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿವೆ. ಅವುಗಳ ಸಾಧನೆಗಳನ್ನು ಪ್ರಸಿದ್ಧ ರಾಜಕೀಯ ನಾಯಕರೂ ಪ್ರಶಂಸಿಸಿದ್ದಾರೆ. ಜನಪರ ಕಾಳಜಿ ತಮಗಿದೆ ಎಂದು ಬಿಂಬಿಸಲು ಹೊರಟಿರುವ ಕಾರವಾರದ ಯಾವ ನಾಯಕರು ಅಥವಾ ರಾಜಕೀಯ ಪಕ್ಷಗಳು ಈ ಪ್ರಶಂಸೆಗಳನ್ನು ಟೀಕೆ ಮಾಡಲಿಲ್ಲ. ಆದರೆ, ಕಾರವಾರದ ಸಂಸ್ಥೆ ತಯಾರಿಸಿದ ರೇವಿರೋಲ್ ಮಾತ್ರೆಯಿಂದ ಕೊರೊನಾ ಪೀಡಿತ ವೈದ್ಯರೊಬ್ಬರು ಗುಣಮುಖರಾಗಿದ್ದಾರೆ ಎಂದು ನಾನು ಅಭಿನಂದಿಸಿದಾಗ ವಿರೋಧಿಗಳು ನನ್ನ ಮೇಲಿನ ದ್ವೇಷದಿಂದ ಮೈ ಪರಚಿಕೊಂಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.

    ಕೆಡಿಪಿ ಸಭೆಯಲ್ಲಿ ಶಾಸಕಿ ರೂಪಾಲಿ ಕಿಡಿ

   ಕೆಡಿಪಿ ಸಭೆಯಲ್ಲಿ ಶಾಸಕಿ ರೂಪಾಲಿ ಕಿಡಿ

   ರೆವಿರೋಲ್ ಆಯುಷ್ ಮಾತ್ರೆಯ ಸೇವನೆಯಿಂದ ಕೊರೊನಾ ಸೋಂಕಿತನಿಗೆ ನೆಗೆಟಿವ್ ಬಂದಿದೆ ಎನ್ನುವ ಮಾಜಿ ಶಾಸಕರ ಹೇಳಿಕೆಯ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಅವರು ಸಚಿವ ಶಿವರಾಮ್ ಹೆಬ್ಬಾರ್ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿ ಕಿಡಿಕಾರಿದ್ದಾರೆ ಎನ್ನಲಾಗಿದೆ.

   ಜಗತ್ತಿನಲ್ಲಿ ಕೊರೊನಾ ಸೋಂಕಿಗೆ ಯಾವುದೇ ಲಸಿಕೆ ಕಂಡು ಹಿಡಿದಿಲ್ಲ. ಈ ಸಂದರ್ಭದಲ್ಲಿ ಮಾಜಿ ಶಾಸಕರೊಬ್ಬರು ಐಸಿಎಂಆರ್ ದೃಢೀಕರಣ ಮಾಡದ ಮಾತ್ರೆಯನ್ನು ಔಷಧಿ ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ. ಇದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ವೈದ್ಯಕೀಯ ಕಾಲೇಜಿನ ನಿರ್ದೇಶಕರು ಸ್ಪಷ್ಟತೆ ಕೊಡಬೇಕು. ಇಲ್ಲದಿದ್ದರೆ ಸುಳ್ಳು ಪ್ರಚಾರ ಮಾಡುತ್ತಿರುವವರ ಮೇಲೆ ಕ್ರಮಕ್ಕೆ ಮುಂದಾಗಬೇಕು. ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ರೂಪಾಲಿ ನಾಯ್ಕ ಒತ್ತಾಯಿಸಿದ್ದಾರೆ.

    ಮಾಜಿ ಸಚಿವ ಅಸ್ನೋಟಿಕರ್ ಅಸಮಾಧಾನ

   ಮಾಜಿ ಸಚಿವ ಅಸ್ನೋಟಿಕರ್ ಅಸಮಾಧಾನ

   ಜನರು ಕಷ್ಟದಲ್ಲಿ ಕೊರೊನಾ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದು, ಆತಂಕದಲ್ಲಿದ್ದಾರೆ. ಜನರ ಜೀವನದ ಜೊತೆ ಯಾರೂ ಚೆಲ್ಲಾಟ ಆಡಬಾರದು ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸತೀಶ್ ಸೈಲ್ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಆನಂದ್, ಮಾಜಿ ಶಾಸಕ ಸೈಲ್ ರೆವಿರೋಲ್ ಮಾತ್ರೆಗಳನ್ನು ಉಪಯೋಗಿಸಿ ಎಂದು ಸಲಹೆ ಕೊಡಬಹುದಿತ್ತು. ಆದರೆ ಇದರಿಂದಲೇ ಕೊರೊನಾ ಕಡಿವಾಣ ಆಗುತ್ತದೆ ಎನ್ನುವ ಹೇಳಿಕೆಯ ಹಿಂದೆ ವ್ಯಾವಹಾರಿಕ ಹಿನ್ನಲೆ ಇದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದ್ದಾರೆ.

   ಕೊರೊನಾ ಕರಿನೆರಳಲ್ಲಿ ಭಟ್ಕಳದ ಪ್ರಸಿದ್ಧ ಮಾರಿ ಜಾತ್ರೆ ಆರಂಭ

   ಜನಪ್ರತಿನಿಧಿಯಾಗಿದ್ದ ಸೈಲ್ ಇಂತಹ ಹೇಳಿಕೆ ಕೊಟ್ಟರೆ ಇದನ್ನು ನಂಬಿ ಮಾತ್ರೆ ತೆಗೆದುಕೊಂಡು ಮನೆಯಲ್ಲಿಯೇ ಸೋಂಕಿತರು ಕುಳಿತರೆ ಯಾರು ಹೊಣೆ? ಇದರಿಂದ ಸೋಂಕು ಹರಡುವಿಕೆ ಹೆಚ್ಚಾಗಬಹುದು. ಮುಂದಾಗುವ ಅನಾಹುತಕ್ಕೆ ಸೈಲ್ ಕಾರಣವಾಗುತ್ತಾರೆಯೇ? ಎಂದು ಅಸ್ನೋಟಿಕರ್ ಕಿಡಿಕಾರಿದ್ದಾರೆ. ಸತೀಶ್ ಸೈಲ್ ನೀಡಿರುವ ಹೇಳಿಕೆ ಕ್ರಿಮಿನಿಲ್ ಅಫೆನ್ಸ್ ಆಗಲಿದ್ದು, ತಮ್ಮ ಹೇಳಿಕೆಯನ್ನು ಅವರು ಹಿಂದೆ ಪಡೆಯಲಿ ಎಂದು ಆಗ್ರಹಿಸಿದ್ದಾರೆ.

    ಅಧಿಕೃತ ಔಷಧಿ ಕಂಡುಹಿಡಿದಿಲ್ಲ: ಸಚಿವ ಹೆಬ್ಬಾರ್

   ಅಧಿಕೃತ ಔಷಧಿ ಕಂಡುಹಿಡಿದಿಲ್ಲ: ಸಚಿವ ಹೆಬ್ಬಾರ್

   ಕೊರೊನಾ ಸೋಂಕಿಗೆ ಅಧಿಕೃತವಾದ ಔಷಧಿಯನ್ನು ಇನ್ನೂ ಕಂಡುಹಿಡಿದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಕೂಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಹೇಳಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಮಾಣೀಕರಿಸಿದ ನಂತರವೇ ಯಾವುದೇ ಔಷಧಿ ಅಧಿಕೃತ ಔಷಧಿಯಾಗುವುದು. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವಿವಿಧ ಕಂಪನಿ ಮಾತ್ರೆಗಳನ್ನು ಕೋವಿಡ್-19ಗೆ ಮದ್ದು ಎಂದು ಬಿಂಬಿಸಲಾಗುತ್ತಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದರ ಬಗ್ಗೆ ನಿಗಾ ವಹಿಸಿ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಕೊರೊನಾ ವಾರ್ಡಿನಲ್ಲಿ ಆಯುಷ್ ಔಷಧಿ ನೀಡಿಲ್ಲ: ಡಿಎಚ್ ‌ಒ ಸ್ಪಷ್ಟನೆ

   ಕೊರೊನಾ ವಾರ್ಡಿನಲ್ಲಿ ಆಯುಷ್ ಔಷಧಿ ನೀಡಿಲ್ಲ: ಡಿಎಚ್ ‌ಒ ಸ್ಪಷ್ಟನೆ

   ಕೊರೊನಾ ವಾರ್ಡಿನಲ್ಲಿ ಯಾವುದೇ ಆಯುಷ್ ಮಾತ್ರೆಗಳನ್ನು ಸೋಂಕಿತರಿಗೆ ನೀಡಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಸ್ಪಷ್ಟಪಡಿಸಿದ್ದಾರೆ.

   ಕೊರೊನಾ ವಾರ್ಡಿನಲ್ಲಿದ್ದ ಆಯುಷ್ ವೈದ್ಯ ರೆವಿರೋಲ್ ಮಾತ್ರೆ ತೆಗೆದುಕೊಂಡು ಗುಣಮುಖರಾಗಿದ್ದಾರೆಂದು ಮಾಜಿ ಶಾಸಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು. ಆದರೆ, ಕೊರೊನಾ ವಾರ್ಡಿನಲ್ಲಿ ಕೇವಲ ಅಲೋಪಥಿ ಔಷಧಿಗಳನ್ನು ಮಾತ್ರ ಸೋಂಕಿತರಿಗೆ ನೀಡಲಾಗಿದೆ. ಆಯುಷ್ ಔಷಧಿಗಳನ್ನು ವಾರ್ಡಿನಲ್ಲಿ ನಾವು ನೀಡುತ್ತಿಲ್ಲ. ಇದು ಸುಳ್ಳು ಹೇಳಿಕೆ ಎಂದಿದ್ದಾರೆ.

    ಏನಿದು ರೆವಿರೋಲ್ ಮಾತ್ರೆ?

   ಏನಿದು ರೆವಿರೋಲ್ ಮಾತ್ರೆ?

   ರೆವಿರೋಲ್, ಉದ್ಯಮಿ ಡಾ.ಜೀತೇಂದ್ರ ಶೆಟ್ಟಿ ಅವರ ರೆವಿಂಟೋ ಲೈಫ್ ‌ಸೈನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾತ್ರೆಯಾಗಿದ್ದು, ಈ ಕಂಪೆನಿಯು ಕಾರವಾರ ತಾಲೂಕಿನ ಶಿರವಾಡ ಗ್ರಾಮದಲ್ಲಿದೆ. ಸೌಂದರ್ಯ, ಆರೋಗ್ಯ ವರ್ಧಕ ಸೇರಿದಂತೆ ವಿವಿಧ ಆಯುರ್ವೇದಿಕ್ ಔಷಧಿಗಳನ್ನು ತಯಾರಿಸುವ ಈ ಕಂಪೆನಿಯು, ರೆವಿರೋಲ್ ಮಾತ್ರೆ ಹಾಗೂ ಔಷಧಿಯನ್ನೂ ತಯಾರಿಸಿದೆ. ಈ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿರುವಂತೆ, ಬ್ಯಾಕ್ಟೀರಿಯಾ ಹಾಗೂ ಸೂಕ್ಷ್ಮಾಣು ಜೀವಿಗಳ ವಿರುದ್ಧ ಹೋರಾಡುತ್ತದೆ. ಜತೆಗೆ, ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ ಎನ್ನಲಾಗಿದೆ. ಈ ಔಷಧಿಗೆ 125 ರೂ. ಹಾಗೂ ಒಂದು ಟ್ಯಾಬ್ಲೆಟ್ ಪೊಟ್ಟಣಕ್ಕೆ 800 ರೂ. ಬೆಲೆ ಇದೆ. ಆದರೆ, ಕಂಪೆನಿಯು ವೆಬ್‌ಸೈಟ್‌ನಲ್ಲಿ ಎಲ್ಲಿಯೂ ಇದು ಕೊರೊನಾ ಗುಣಪಡಿಸುತ್ತದೆ ಅಥವಾ ಕೊರೊನಾಕ್ಕಾಗಿಯೇ ಔಷಧಿ ಎಂದು ಹೇಳಿಕೊಂಡಿಲ್ಲ. ಇದು, ಕೋವಿಡ್ ‌ನಿಂದ ರಕ್ಷಣಾತ್ಮಕ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಬರೆದುಕೊಂಡಿದೆ.

   English summary
   Former MLA Satish Sile statement regarding coronavirus pill Revirol, created debate
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X