ಕಾರವಾರ: ಭೀಕರ ದೋಣಿ ದುರಂತ 9 ಮಂದಿ ಸಾವು
ಕಾರವಾರ, ಜನವರಿ 21: ಕಾರವಾರದಲ್ಲಿ ಭಾರಿ ದೋಣಿ ದುರಂತವೊಂದು ಸಂಭವಿಸಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ಇದೆ.
ಕಾರವಾರದ ಬಳಿಯ ಅರಬ್ಬಿ ಸಮುದ್ರದಲ್ಲಿ ಪ್ರಯಾಣಿಕರ ಸಣ್ಣ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮುಗಿಚಿಕೊಂಡಿದೆ. ಅದರ ಅಡಿಗೆ ಸಿಕ್ಕ ಪ್ರಯಾಣಕರು ಅಸುನೀಗಿದ್ದಾರೆ.
ದೋಣಿಯ ಒಳಗೆ ಒಟ್ಟು 26 ಮಂದಿ ಇದ್ದರು, ಅದರಲ್ಲಿ ಕೆಲವರನ್ನು ರಕ್ಷಿಸಲಾಗಿದೆ. 8 ಶವಗಳನ್ನು ಹೊರತೆಗೆಯಲಾಗಿದ್ದು, ಇಒಂದು ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

ಕಾರವಾರ ಕಡಲತಡಿಯಿಂದ ಆರು ಕಿ.ಮೀ ದೂರ ಇರುವ ಕೂರ್ಮಗಡ ಎಂಬ ದ್ವೀಪದಲ್ಲಿ ನಡೆಯುತ್ತಿದ್ದ ಜಾತ್ರೆಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ದೋಣಿಯಲ್ಲಿ ಸಾಮರ್ಥ್ಯಕ್ಕಿಂತಲೂ ಹೆಚ್ಚು ಜನರಿದ್ದರು. ಜೊತೆಗೆ ಸಮುದ್ರದಲ್ಲಿ ಅಲೆಗಳ ಅಬ್ಬರ ಬಹು ಜೋರಾಗಿತ್ತು. ಹಾಗಾಗಿ ದೋಣಿಯು ಅಲೆಗಳ ಅಬ್ಬರ ತಡೆಯಲಾರದೆ ಮುಗುಚಿಕೊಂಡಿದೆ.

ಕಡಲು ರಕ್ಷಣಾ ದಳ, ಪೊಲೀಸರು ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಈಗಾಗಲೇ ಕೆಲವರನ್ನು ರಕ್ಷಿಸಲಾಗಿದೆ. ಇನ್ನಷ್ಟು ಮಂದಿ ಕಾಣೆ ಆಗಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ.

ಉಡುಪಿ ಜಿಲ್ಲಾಧಿಕಾರಿ ನಕುಲ್, ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಧಾವಿಸಿದ್ದಾರೆ. ಕಂದಾಯ ಇಲಾಖೆ ಸಚಿವ ದೇಶಪಾಂಡೆ ಸಹ ಕಾರವಾರದತ್ತ ತೆರಳುತ್ತಿರುವುದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ.












Click it and Unblock the Notifications