ಉತ್ತರಕನ್ನಡದಲ್ಲಿ ಮುಂದುವರಿದ ಮಳೆ: ಗುಡ್ಡ ಕುಸಿತ; ನೆರೆ ಆತಂಕದಲ್ಲಿ ನದಿ ತೀರದ ಮಂದಿ
ಕಾರವಾರ, ಜುಲೈ 7: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಇಂದೂ ಕೂಡ ಮುಂದುವರಿದಿದೆ. ಗಾಳಿ ಸಹಿತ ಭಾರಿ ಮಳೆಗೆ ಜಿಲ್ಲೆಯ ವಿವಿಧೆಡೆ ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದು ಹಾನಿಯಾಗಿದ್ದು, ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಮಲೆನಾಡಿನ ತುಸು ಜೋರಾಗಿದ್ದು ಶಿರಸಿ, ಸಿದ್ದಾಪುರ ಭಾಗಗಳಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಕರಾವಳಿಯಲ್ಲಿ ಬಿಟ್ಟು ಬಿಟ್ಟು ಭಾರಿ ಮಳೆಯಾಗಿದೆ. ಭಾರಿ ಮಳೆಗೆ ಬುಧವಾರ ಭಟ್ಕಳದಲ್ಲಿ ಮನೆ ಗೋಡೆ ಬಿದ್ದು ಮಹಿಳೆಯೋರ್ವಳು ಗಾಯಗೊಂಡಿದ್ದು, ಹೊನ್ನಾವರದಲ್ಲಿ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗಿದೆ. ಇನ್ನು ಶಿರಸಿ ಹಾಗೂ ಅಂಕೊಲಾದಲ್ಲಿಯೂ ಮಳೆಯಿಂದ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಇನ್ನು ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಶರಾವತಿ, ಗಂಗಾವಳಿ, ಅಘನಾಶಿನ, ವರದಾ, ಕಾಳಿ ನದಿಗಳು ತುಂಬಿ ಹರಿಯಲಾರಂಭಿಸಿದ್ದು, ಶರಾವತಿ ನದಿ ತೀರದ ಗುಂಡಬಾಳ ಭಾಗದಲ್ಲಿ ತೋಟ, ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಈಗಾಗಲೇ ನದಿ ಪಾತ್ರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಜಿಲ್ಲಾಡಳಿತದ ಸೂಚನೆ ನೀಡಿದೆ.

ಗುಡ್ಡ ಕುಸಿದ ಹಿನ್ನಲೆಯಲ್ಲಿ ಸಂಚಾರ ಅಸ್ತವ್ಯಸ್ತ
ಇನ್ನು ಭಾರಿ ಮಳೆಯಿಂದಾಗಿ ಹೊನ್ನಾವರದ ಹೊಸಾಕುಳಿ ಪಂಚಾಯತ್ ವ್ಯಾಪ್ತಿಯ ಗುಡ್ಡೆಬಾಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾತಿ 66 ರಲ್ಲಿ ಗುಡ್ಡ ಕುಸಿತವಾಗಿದೆ. ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುಡ್ಡ ಕುಸಿತವಾಗಿದೆ. ಇನಗನು ಹೆದ್ದಾರಿ ಮೇಲೆ ಗುಡ್ಡ ಕುಸಿದ ಹಿನ್ನಲೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು, ಗ್ರಾಮ ಪಂಚಾಯತಿ ವತಿಯಿಂದ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ನದಿಯಲ್ಲಿ ಸಿಲುಕಿದ್ದ ಐವರ ರಕ್ಷಣೆ
ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮದ ಗಂಗಾವಳಿ ನದಿ ದಾಟುವಾಗ ಬೋಟ್ ಕೆಟ್ಟು ನದಿ ಮದ್ಯ ಸಿಲುಕಿದ್ದ ಐದು ಮಂದಿ ಗ್ರಾಮಸ್ಥರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಕಳೆದ ಭಾರಿ ಪ್ರವಾಹದ ವೇಳೆ ಸೇತುವೆ ಕೊಚ್ಚಿ ಹೋಗಿ ಪ್ರತಿನಿತ್ಯದಂತೆ ಬೋಟ್ ಮೂಲಕ ಗುಳ್ಳಾಪುರದಿಂದ ಡೋಂಗ್ರಿಗೆ ನದಿ ದಾಟುತ್ತಿದ್ದಾಗ ಘಟನೆ ನಡೆದಿದೆ. ತಾಂತ್ರಿಕ ದೋಷದಿಂದ ನದಿಯ ಮಧ್ಯದಲ್ಲಿಯೇ ಬೋಟ್ ನಿಂತಿದ್ದು, ಬೋಟ್ ನಲ್ಲಿದ್ದ ಜನರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ವಿವಿಧ ಭಾಗಗಳಲ್ಲಿ ಮಳೆಯ ಪ್ರಮಾಣ
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣದ ಪೈಕಿ ಅಂಕೋಲಾದಲ್ಲಿ 144.6 ಮಿ.ಮೀ, ಭಟ್ಕಳ 70. ಮಿ.ಮೀ, ದಾಂಡೇಲಿ 84.6 ಮಿ.ಮೀ ಹಳಿಯಾಳ 56.4 ಮಿ.ಮೀ, ಹೊನ್ನಾವರ 59.5 ಮಿ.ಮೀ, ಕಾರವಾರ 99.4 ಮಿ.ಮಿ, ಕುಮಟಾ 96.6 ಮಿ.ಮೀ, ಮುಂಡಗೋಡ 24.2 ಮಿ.ಮೀ, ಸಿದ್ದಾಪುರ 148 ಮಿ.ಮೀ ಶಿರಸಿ 13.5 ಮಿ.ಮೀ, ಜೋಯಡಾ 70 ಮಿ.ಮೀ, ಯಲ್ಲಾಪುರ 94.6 ಮಿ.ಮೀ. ಮಳೆಯಾಗಿದ್ದು ಜಿಲ್ಲೆಯಲ್ಲಿ ಒಟ್ಟು 1078.3 ಮಿ.ಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ನೀರಿನ ಮಟ್ಟ ಹೇಗಿದೆ
ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಕದ್ರಾದಲ್ಲಿ 34.50ಮೀ (ಗರಿಷ್ಟ), 30.60 ಮೀ (2022), 16,830.00 ಕ್ಯೂಸೆಕ್ಸ್ ಒಳಹರಿವು, 16,720.00 ಕ್ಯೂಸೆಕ್ಸ್ ಹೊರ ಹರಿವು ಇದೆ. ಕೊಡಸಳ್ಳಿ ಜಲಾಶಯದಲ್ಲಿ 75.50 ಮೀ (ಗರಿಷ್ಟ), 69.10 ಮೀ. (2022), 8511.00 ಕ್ಯೂಸೆಕ್ಸ್ ಒಳ ಹರಿವು, 3811.00 ಹೊರಹರಿವು , ಸೂಪಾ ಜಲಾಶಯ 564.00 ಮೀ (ಗರಿಷ್ಠ), 523.50 ಮೀ (2022), ಒಳ ಹರಿವು 34849.00 ಕ್ಯೂಸೆಕ್ಸ್ , ಹೊರ ಹರಿವು 8131.427 ಕ್ಯೂಸೆಕ್ಸ್ ಇದೆ.












Click it and Unblock the Notifications