ಕಾರವಾರ: ವೈದ್ಯರ ನಿರ್ಲಕ್ಷ್ಯಕ್ಕೆ, ಜ್ವರದಿಂದ ಬಳಲುತ್ತಿದ್ದ ನವ ವಿವಾಹಿತೆ ಸಾವು
ಕಾರವಾರ, ಮೇ 29: ಜ್ವರ ಎಂದು ಖಾಸಗಿ ಆಸ್ಪತ್ರೆಗೆ ತೆರಳಿದ ನವ ವಿವಾಹಿತೆಯೋರ್ವಳು ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಿರುವ ಗಂಭೀರ ಆರೋಪ ಕೇಳಿಬಂದಿದ್ದು, ಘಟನೆ ಬಳಿಕ ಮೃತ ಮಹಿಳೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಸ್ಪತ್ರೆ ಹಾಗೂ ಪೊಲೀಸ್ ಠಾಣೆ ಎದುರು ಜಮಾಯಿಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಭಾನುವಾರ ನಡೆದಿದೆ.
ಕಡವಾಡ ಮೂಲದ ಸನಾ ಮಾಂಜ್ರೇಕರ್(24) ಮೃತ ದುರ್ದೈವಿ. ಕಡವಾಡ ನಿವಾಸಿ ಸ್ವಪ್ನಿಲ್ ಮಾಂಜ್ರೇಕರ್ ಜೊತೆ ಮೇ.10 ರಂದು ವಿವಾಹವಾಗಿದ್ದರು. ಕಳೆದ 8 ದಿನದ ಹಿಂದೆ ಜ್ವರ ಕಾಣಿಸಿಕೊಂಡಿತ್ತಾದರೂ ಚಿಕಿತ್ಸೆ ಬಳಿಕ ಕಡಿಮೆಯಾಗಿದೆ. ಆದರೆ ಕಳೆದ ಎರಡು ದಿನದ ಹಿಂದೆ ಮತ್ತೆ ಜ್ವರ, ತಲೆನೋವು ಕಾಣಿಸಿಕೊಂಡಿದ್ದು, ನಗರದ ಕಾಜುಭಾಗದಲ್ಲಿರುವ ಸಾವಂತ್ ಆಸ್ಪತ್ರೆಗೆ ಸಂಜೆ ವೇಳೆಗೆ ದಾಖಲಿಸಲಾಗಿದೆ. ವೈದ್ಯರು ತಪಾಸಣೆ ಕೂಡ ನಡೆಸಿ ಗ್ಲೂಕೋಸ್ ಹಚ್ಚಿದ್ದು ಸಂಜೆ ವೇಳೆಗೆ ಸುಧಾರಿಸಿಕೊಂಡಿದ್ದಳು. ಆದರೆ ರಾತ್ರಿ ಊಟದ ವೇಳೆಗೆ ಆಸ್ಪತ್ರೆಯಲ್ಲಿದ್ದ ಇಬ್ಬರು ನರ್ಸ್ 4 ಇಂಜೆಕ್ಷನ್ ನೀಡಿದ್ದರಿಂದ ಅಸ್ವಸ್ಥಗೊಂಡಿದ್ದಾಳೆ ಎನ್ನಲಾಗಿದೆ.
ವೈದ್ಯರ- ನರ್ಸ್ ನಿರ್ಲಕ್ಷ್ಯವೇ ಸಾವಿಗೆ ಕಾರಣ?
ಮಹಿಳೆ ಉಸಿರಾಟದ ಸಮಸ್ಯೆ ಎದುರಾದಾಗ ಡಾಕ್ಟರ್ ಗೆ ತಿಳಿಸಿದ್ದು, ಬಳಿಕ ಆಗಮಿಸಿದ ಅವರು ಚಿಕಿತ್ಸೆ ನೀಡಿದ್ದರಾದರೂ ಪ್ರಯೋಜನವಾಗದೆ ಇದ್ದಾಗ ಖಾಸಗಿ ಆಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಜೊತೆಯಲ್ಲಿದ್ದ ನಮಗೆ ಏನಾಗುತ್ತಿದೆ ಎಂಬುದರ ಬಗ್ಗೆ ಸ್ವಲ್ಪವೂ ಮಾಹಿತಿ ನೀಡಿಲ್ಲ. ನಮ್ಮಲ್ಲಿ ಐಸಿಯು ಇಲ್ಲದ ಕಾರಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿದೆ. ನಾವೂ ಕೂಡ ಬರುತ್ತೇವೆ ಎಂದು ಹೇಳಿ ಆಸ್ಪತ್ರೆ ಸಿಬ್ಬಂದಿ ಕಳುಹಿಸಿಕೊಟ್ಟಿದ್ದಾರೆ. ಆದರೆ ಅವರು ಯಾರು ಬಂದಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಗ್ಗೆ 4 ಗಂಟೆ ವೇಳೆಗೆ ಸಾವನ್ನಪ್ಪಿದ್ದಾಳೆ. ಇದಕ್ಕೆ ಸಾವಂತ್ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್ ಗಳ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ.

Recommended Video
ಮೃತ ಮಹಿಳೆಗೆ ತಾಯಿ ಇಲ್ಲ. ತಂದೆ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದು ಸಂಬಂಧಿಕರೇ ಸೇರಿ 19 ದಿನದ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಮನೆಯಲ್ಲಿ ಎಲ್ಲರು ಖುಷಿಯಾಗಿಯೇ ಇದ್ದರು. ಜ್ವರ ಎಂದು ಬಂದವಳಿಗೆ ವೈದ್ಯರು ಹಾಗೂ ನರ್ಸ್ ಸರಿಯಾಗಿ ಚಿಕಿತ್ಸೆ ನೀಡದ ಕಾರಣ ಸಾವಾಗಿದೆ. ಆದರೆ ಇದೀಗ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ. ನಿರ್ಲಕ್ಷ್ಯವಹಿಸಿದವರ ರಕ್ಷಣೆ ಮಾಡುತ್ತಿದ್ದಾರೆ. ಕೂಡಲೇ ಸಾವಿಗೆ ಕಾರಣಿಕರ್ತರಾದವರನ್ನು ಬಂಧಿಸುವಂತೆ ಆಗ್ರಹಿಸಿ ಮೃತಳ ಪತಿ, ಕುಟುಂಬಸ್ಥರು ಸಾವಂತ ಆಸ್ಪತ್ರೆ ಹಾಗೂ ನಗರ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications