DK Shivakumar: ಮುರುಡೇಶ್ವರ ಬೀಚ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಫುಲ್ ಜಾಲಿ..ಜಾಲಿ!
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿದ್ದು, ಫುಲ್ ಜಾಲಿ ಮೂಡ್‌ಗೆ ಜಾರಿದ್ದಾರೆ. ಅಲ್ಲಿನ ಪ್ರಮುಖ ದೇವಸ್ಥಾನಗಳಿಗೆ ತಮ್ಮ ಪತ್ನಿ ಜೊತೆಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪುರಾಣ ಪ್ರಸಿದ್ಧ ಮುರುಡೇಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಶಿವನ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದಾರೆ.
ಇಂದು ಮುರುಡೇಶ್ವರದ ಸಮೀಪ ಇರುವ ನೇತ್ರಾಣಿ ದ್ವೀಪಕ್ಕೆ ತಮ್ಮ ಪತ್ನಿ ಶ್ರೀಮತಿ ಉಷಾ ಹಾಗೂ ಮೀನುಗಾರಿಕಾ ಸಚಿವರಾದ ಮಂಕಾಳ ಎಸ್.ವೈದ್ಯ ಅವರೊಂದಿಗೆ ಭೇಟಿ ನೀಡಿದ್ದಾರೆ. ನಿಸರ್ಗಕ್ಕೆ ಹತ್ತಿರವಾಗಿರುವ ಈ ಐಲ್ಯಾಂಡ್‌ಗೆ ಪಾರಿವಾಳ ದ್ವೀಪ ಎನ್ನುವ ಹೆಸರೂ ಕೂಡ ಇದೆ. ಕರ್ನಾಟಕದಲ್ಲಿ ಸ್ಕೂಬಾ ಡೈವಿಂಗ್‌ಗೆ ಅತ್ಯುತ್ತಮ ಸ್ಥಳವಾದ ನೇತ್ರಾಣಿ ದ್ವೀಪವು ಪಾರಿವಾಳಗಳಿಗೆ ಆಶ್ರಯ ತಾಣವೂ ಹೌದು. ಪ್ರಶಾಂತವಾದ ಈ ದ್ವೀಪ ಮನಸ್ಸಿಗೆ ಆಹ್ಲಾದಕರ ಅನುಭವ ನೀಡಿತು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸಮುದ್ರಕ್ಕೆ ಎಂತಹ ಆಯಾಸ, ಬೇಸರವನ್ನೂ ದೂರ ಮಾಡುವ ಶಕ್ತಿ ಇದೆಯಂತೆ. ಇದು ನಿಜ ಕೂಡ ಹೌದು. ನಿರಂತರ ಕಾರ್ಯಕ್ರಮಗಳ ಮಧ್ಯೆ ಇಂದು ಮುರುಡೇಶ್ವರ ಬೀಚ್‌ಗೆ ಪತ್ನಿ ಉಷಾ ಅವರೊಂದಿಗೆ ಭೇಟಿ ನೀಡಿ, ಸಮಯ ಕಳೆದೆ. ಸಮುದ್ರ ದಂಡೆಯಲ್ಲಿ ಕಾಲ ಕಳೆದ ನಂತರ ಸ್ವಲ್ಪ ಮನಶಾಂತಿ ಸಿಕ್ಕಿದೆ ಎಂದು ಡಿಸಿಎಂ ಹೇಳಿದ್ದಾರೆ.
ಅರಬ್ಬಿ ಸಮುದ್ರದಿಂದ ಸುತ್ತುವರೆದಿರುವ ಈ ದೇವಾಲಯವು ವಿಶ್ವದಲ್ಲೇ ಎರಡನೇ ಅತಿ ಎತ್ತರದ ಶಿವನ ಪ್ರತಿಮೆಯನ್ನು ಹೊಂದಿದ್ದು, ಇಲ್ಲಿನ ದೈವಿಕ ಅನುಭವವನ್ನು ನೀಡುವ ವಿಶೇಷವಾದ ಗೋಪುರವು ಆಕರ್ಷಣೀಯವಾಗಿದೆ. ಮುರುಡೇಶ್ವರ ದೇವಸ್ಥಾನ ಕೇವಲ ಧಾರ್ಮಿಕ ಕ್ಷೇತ್ರವಾಗಿರದೆ, ಪ್ರವಾಸಿ ತಾಣವಾಗಿ ಹೆಸರುವಾಸಿಯಾಗಿರುವುದು ಕರ್ನಾಟಕದ ಹೆಮ್ಮೆ ಎಂದು ಶ್ಲಾಘಿಸಿದ್ದಾರೆ.

ನಿನ್ನೆ ಡಿಸಿಎಂ ದಂಪತಿ ಕೊಲ್ಲೂರು ಮೂಕಾಂಬಿಕೆಯ ದೇವಿಯ ದರ್ಶನ ಪಡೆದರು. ತನ್ನ ಪವಾಡಗಳಿಂದ ಜನಪ್ರಿಯಳಾಗಿರುವ ತಾಯಿ ಕೊಲ್ಲೂರು ಮೂಕಾಂಬಿಕೆಯ ದರ್ಶನ ಭಾಗ್ಯ ಪಡೆಯಲು ದೇಶ ವಿದೇಶಗಳಿಂದಲೂ ಭಕ್ತರು ಬರುತ್ತಾರೆ. ಇಂದು ಆ ಪುಣ್ಯಕ್ಷೇತ್ರಕ್ಕೆ ಕುಟುಂಬ ಸಮೇತ ಭೇಟಿ ನೀಡಿ ತಾಯಿಯ ದರ್ಶನ ಪಡೆದೆ ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿರುವ ಪ್ರಸಿದ್ಧ ಇಡಗುಂಜಿ ವಿನಾಯಕನ ದೇವಸ್ಥಾನಕ್ಕೆ ಭೇಟಿ ನೀಡಿ ಗಣೇಶನ ದರ್ಶನ ಪಡೆದರು. ಇಡಗುಂಜಿ ವಿನಾಯಕನ ಪ್ರತೀತಿ ತುಂಬಾನೇ ಜನಪ್ರಿಯ. ನಿಜವಾದ ಭಕ್ತಿಯನ್ನು ಮೆಚ್ಚುವ ಗಜಮುಖನು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆ ಇದೆ ಎಂದು ಡಿಸಿಎಂ ಹೇಳಿದ್ದಾರೆ.

ಬಳಿಕ ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ ಮರುಡೇಶ್ವರದಲ್ಲಿ 3 ದಿನಗಳ ಬೃಹತ್ ಮತ್ಸ್ಯಮೇಳವನ್ನು ಉದ್ಘಾಟಿಸಿದರು. ರೈತರು ಭೂಮಿಯಲ್ಲಿ ಕೃಷಿ ಮಾಡುತ್ತಾರೆ. ಮೀನುಗಾರರು ನೀರಿನ ಮೇಲೆ ಕೃಷಿ ಮಾಡ್ತಾರೆ. ರೈತನಿಗೆ ಸಂಬಳ ಇಲ್ಲ, ಪೆನ್ಷನ್ ಇಲ್ಲ, ನಿವೃತ್ತಿ ಕೂಡ ಇಲ್ಲ. ಮೀನುಗಾರರ ಪರಿಸ್ಥಿತಿ ಕೂಡ ಅದೇ. ಮೀನುಗಾರಿಕೆ ಅವಲಂಬಿಸಿದವರು ಒಂದು ಮಧ್ಯಮವರ್ಗದ ಬದುಕು ಕಟ್ಟಿಕೊಂಡಿರಬಹುದು, ಕೋಟ್ಯಾಧಿಪತಿಗಳಾಗಿದ್ದನ್ನು ನಾನು ನೋಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಮುದ್ರವೇ ನಿಮ್ಮ ಬದುಕು. ಪ್ರಾಣವನ್ನೂ ಲೆಕ್ಕಿಸದೆ ನೀವು ಸಮುದ್ರಕ್ಕಿಳಿಯುತ್ತೀರಿ. ನಿಮ್ಮಿಂದ ಒಂದು ದೊಡ್ಡ ಉದ್ಯಮ ಕ್ಷೇತ್ರ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮೀನುಗಾರಿಕೆ ಮಾಡುವಾಗ ಸಂಭವಿಸುವ ಅವಘಡಗಳಲ್ಲಿ ಮೃತಪಡುವ ಮೀನುಗಾರರ ವಾರಸುದಾರರಿಗೆ ನೀಡುವ ಪರಿಹಾರವನ್ನು 8 ಲಕ್ಷದಿಂದ 10 ಲಕ್ಷಕ್ಕೆ ಏರಿಕೆ ಮಾಡಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಕರಾವಳಿ ಪ್ರದೇಶದ ಸಾಕಷ್ಟು ಜನ ಬದುಕು ಕಟ್ಟಿಕೊಳ್ಳಲು ಮುಂಬೈ, ಬೆಂಗಳೂರು, ದುಬೈನಂತಹ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಹಾಗಾಗಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಮಾಡಲು ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲು ನಮ್ಮ ಸರ್ಕಾರ ಉತ್ಸುಕವಾಗಿದೆ ಎಂದು ಡಿಸಿಎಂ ತಿಳಿಸಿದರು.












Click it and Unblock the Notifications