ವಲಸೆ ಕಾರ್ಮಿಕರಿಗೆ 'ಟ್ರ್ಯಾನ್ಸ್ಯಾಕ್ಟ್ ಹೌಸ್' ನಿರ್ಮಾಣ: ಕಾರ್ಮಿಕ ಸಚಿವರ ಘೋಷಣೆ
ಕಾರವಾರ, ಆಗಸ್ಟ್ 25: ವಲಸೆ ಕಾರ್ಮಿಕರು ಉಳಿದುಕೊಳ್ಳಲು 'ಟ್ರ್ಯಾನ್ಸ್ಯಾಕ್ಟ್ ಹೌಸ್'ಗಳನ್ನು ರಾಜ್ಯದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಕಾರ್ಮಿಕರಿಗೆ ಅವರ ಕೆಲಸದ ಅನುಭವದ ಆಧಾರದ ಮೇಲೆ ಉಪಯುಕ್ತ ಕಿಟ್‌ಗಳನ್ನು ನೀಡಲಾಗುತ್ತದೆ ಎಂದು ರಾಜ್ಯ ಕಾರ್ಮಿಕ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಘೋಷಿಸಿದ್ದಾರೆ.
'ಒನ್ ಇಂಡಿಯಾ ಕನ್ನಡ'ದ ಫೇಸ್‌ಬುಕ್ ಸಂವಾದದಲ್ಲಿ ಪಾಲ್ಗೊಂಡು ಅವರು, ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. "ಇದರೊಂದಿಗೆ ಕಾರ್ಮಿಕರ ಮಸೂದೆಯ ಕುರಿತು ಮಾಹಿತಿ ನೀಡಿದ ಸಚಿವರು, ಕಾರ್ಮಿಕರಿಗಾಗಿ, ವಿಶೇಷವಾಗಿ ಚಾಲಕರಿಗಾಗಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ನೂತನ ಮಸೂದೆಯನ್ನು ತರುತ್ತಿದ್ದೇನೆ. ಇದರಿಂದಾಗಿ ಆಟೋ, ಮ್ಯಾಕ್ಸಿ ಕ್ಯಾಬ್, ಟ್ರಕ್ ಚಾಲಕರುಗಳು ಮತ್ತವರ ಕುಟುಂಬದ ಇಬ್ಬರು ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಮದುವೆಗೂ ಸಹಾಯಕವಾಗಲಿದೆ. ಅವರ ನಿವೃತ್ತಿಯ ನಂತರವೂ ಆರ್ಥಿಕವಾಗಿ ಸಹಾಯವಾಗುವಂತೆ ಈ ಮಸೂದೆಯನ್ನು ರಚನೆ ಮಾಡಿದ್ದೇನೆ. ಈ ಬಾರಿಯ ಸಚಿವ ಸಂಪುಟ ಅಥವಾ ಮುಂದಿನ ಸಂಪುಟದಲ್ಲಿ ಇಟ್ಟು, ನಂತರ ಅಧಿವೇಶದಲ್ಲಿ ಮಂಡಿಸಬೇಕೆಂದುಕೊಂಡಿದ್ದೇನೆ," ಎಂದರು.

ಕಾರ್ಮಿಕರ ಕಲ್ಯಾಣಕ್ಕಾಗಿ ಹಣ ದ್ವಿಗುಣ
"ಚಾಲಕ ವೃತ್ತಿಯಲ್ಲಿ ಕೆಲಸ ಮಾಡಿ ಬದುಕು ಕಂಡುಕೊಳ್ಳುವವರಿಗೆ ಇರುವ ಕಷ್ಟಗಳು ಮತ್ತು ಕಠಿಣ ಸವಾಲುಗಳನ್ನು ನಾನು ವೈಯಕ್ತಿಕ ಅನುಭವದಲ್ಲಿ ಕಂಡುಕೊಂಡಿದ್ದೇನೆ. ಹೀಗಾಗಿ ಕಾರ್ಮಿಕ ಇಲಾಖೆಯ ಜವಾಬ್ದಾರಿ ಸಿಕ್ಕ ಬಳಿಕ ನನ್ನ ಅಡಿಯಲ್ಲಿ ಬರುವ ಇಲಾಖೆಗೆ ಪುನರ್ ಜೀವನ ಕೊಡಲು ಕಾಯಕ ಕೆಲಸಗಳನ್ನು ಮಾಡುತ್ತಿದ್ದೇನೆ. 274 ಕೋಟಿಯಷ್ಟು ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತಿವರ್ಷ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ವಿನಿಯೋಗಿಸಲಾಗುತ್ತಿತ್ತು. ಆದರೆ 20 ವರ್ಷಗಳ ಹಿಂದಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಇರುವ ಆರ್ಥಿಕ ವ್ಯತ್ಯಾಸವನ್ನು ಗಮನಿಸಿ, ಅದನ್ನು ಇಂದು ದ್ವಿಗುಣಗೊಳಿಸಿ, 400 ಕೋಟಿಗೆ ಹೆಚ್ಚು ಮಾಡಿಸಿದ್ದೇನೆ. ಹೀಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಮಾಡುವ ಅನೇಕ ಕೆಲಸಗಳು ಕಾರ್ಮಿಕರಿಗೆ ತಲುಪಬೇಕು ಎನ್ನುವುದು ನನ್ನ ಮೂಲ ಉದ್ದೇಶ," ಎಂದರು.

ಒಂದು ದೂರು ಬಂದರೂ ಅಧಿಕಾರಿ ಹೊಣೆಗಾರ
"ಕೋವಿಡ್ ಪರಿಹಾರವಾಗಿ 5 ಸಾವಿರ ಕೊಡಲು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಣೆ ಮಾಡಿದಾಗ 1 ಸಾವಿರ ಕೋಟಿಗೂ ಅಧಿಕ ಹಣವನ್ನು ಕಾರ್ಮಿಕರ ಖಾತೆಗಳಿಗೆ ವರ್ಗಾವಣೆ ಮಾಡಿದೆವು. ಕೋವಿಡ್ ಎರಡನೇ ಅಲೆಯಲ್ಲಿ 3 ಸಾವಿರ ಘೋಷಣೆ ಮಾಡಿದಾಗ 750 ಕೋಟಿ ರೂಪಾಯಿ ಜಮೆ ಮಾಡಿದ್ದೇವೆ. ಅನೇಕರಿಗೆ ಹಣ ಸಿಕ್ಕಿಲ್ಲ, ವಿದ್ಯಾರ್ಥಿ ವೇತನ ಸಿಕ್ಕಿಲ್ಲ ಎಂಬಿತ್ಯಾದಿ ದೂರುಗಳು ಪ್ರತಿನಿತ್ಯ ದೂರವಾಣಿಯ ಮೂಲಕ ನಮಗೆ ಬರುತ್ತಿರುತ್ತವೆ. ಹೀಗಾಗಿ ರಾಜ್ಯದಲ್ಲಿ ಸೆಪ್ಟೆಂಬರ್ 15ರಿಂದ ಒಂದು ತಿಂಗಳುಗಳ ಕಾಲ ಘೋಷಣೆ ಮಾಡಿರುವ ಕಾರ್ಮಿಕ ಅದಾಲತ್‌ನಲ್ಲಿ ತಾಲೂಕು ಕೇಂದ್ರಗಳಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೇ ಬಂದು ಭಾಗವಹಿಸಿ, ಯಾವ ಕಾರ್ಮಿಕರಿಗೆ ಯಾವ ಸವಲತ್ತು ಸಿಕ್ಕಿಲ್ಲ ಎಂಬುದನ್ನು ಪರಿಶೀಲಿಸಿ ಸ್ಥಳದಲ್ಲೇ ಪರಿಹಾರ ನೀಡಲು ಸೂಚಿಸಿದ್ದೇನೆ."
"ಇಡೀ ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಿಂದ ಹಣ ಬಂದಿಲ್ಲ ಎಂಬ ಒಂದೇ ಒಂದು ದೂರು ಬರಕೂಡದು. ಬಂದರೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೇ ಮುಂದೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದೇನೆ. ಒಟ್ಟಾರೆ ಕಾರ್ಮಿಕ ಇಲಾಖೆಯನ್ನು ಕ್ರಿಯಾಶೀಲತೆಯಿಂದ, ಸ್ವಾಭಾವಿಕವಾಗಿ ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನು ದೊರಕಿಸುವ ಉದ್ದೇಶದಿಂದ ಕಾರ್ಯಪ್ರವೃತ್ತವಾಗಿಸಿದ್ದೇನೆ," ಎಂದರು.
ಹೊರಗುತ್ತಿಗೆ ಕಾನೂನು ಜಾರಿಗೆ
"ಕರ್ನಾಟಕ ಸರ್ಕಾರದ ಅಡಿಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವವರಿಗೆ ನಿಗದಿತ ಸಮಯದಲ್ಲಿ ವೇತನ ಕೊಡುತ್ತಿಲ್ಲ. ಪಿಎಫ್ ಮತ್ತು ಇಎಸ್‌ಐ ಸಿಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಅನೇಕ ಕಾರ್ಮಿಕರಿಗೆ, ವಿದ್ಯಾವಂತರಿಗೆ ಕೆಲಸ ಮಾಡುವ ಸ್ಥಳಗಳಲ್ಲಿ ಶೋಷಣೆಯಾಗುತ್ತಿದೆ. ಈ ನಿಟ್ಟಿನಲ್ಲಿ ಅವರಿಗೆ ಸಿಗಬೇಕಾದ ಪಿಎಫ್ ಕೊಡದೇ ಹೋದರೆ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂಬ ಹೊರಗುತ್ತಿಗೆಗೆ ಸಂಬಂಧಿಸಿದ ಕಾನೂನನ್ನು ಜಾರಿಗೆ ತರುತ್ತಿದ್ದೇನೆ. ಜೊತೆಗೆ ಪಿಎಫ್ ನೀಡಿದ ಬಗ್ಗೆ ಪ್ರತಿ ತಿಂಗಳು ಒಂದನೇ ತಾರೀಖಿಗೆ ಆ ಸಂಸ್ಥೆಯು ಕಾರ್ಮಿಕ ಇಲಾಖೆಗೆ ದಾಖಲೆ ನೀಡುವಂಥ ಕಾನೂನನ್ನೂ ಜಾರಿಗೆ ತರುತ್ತಿದ್ದೇನೆ. ಒಟ್ಟಾರೆ ಕಾರ್ಮಿಕ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಮೂಲಕ ಈ ರಾಜ್ಯದಲ್ಲಿ ಕಾರ್ಮಿಕರಿಗೆ ಬದುಕುವ ಶಕ್ತಿ ಮತ್ತು ಹಕ್ಕು ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಆದ್ಯತೆಯ ಮೇರೆಗೆ ಕೆಲಸ ಮಾಡುತ್ತಿದ್ದೇವೆ," ಎಂದರು.

ಖಾತೆಯಿಂದ ಬಡವರ ಕೆಲಸ ಮಾಡುವ ಅವಕಾಶ
"ಇನ್ನು ಕಾರ್ಮಿಕ ಇಲಾಖೆ ನೂರಕ್ಕೆ ನೂರರಷ್ಟು ಸಮಾಧಾನ ತಂದಿದೆ. ಒಂದು ಕಾಲದಲ್ಲಿ ಯಾರೂ ಕಾರ್ಮಿಕ ಇಲಾಖೆ ಬೇಕು ಎಂದು ಕೇಳುತ್ತಿರಲಿಲ್ಲ. ಆದರೆ ಈಗ ಎಲ್ಲರೂ ಕಾರ್ಮಿಕ ಇಲಾಖೆಯನ್ನೇ ಕೊಡಿ ಎಂಬುವಷ್ಟರ ಮಟ್ಟಿಗೆ ಇಲಾಖೆಗೆ ಸ್ವಾಸ್ಥ್ಯ, ಶಕ್ತಿ ತಂದಿದ್ದೇನೆ. ಕಾರ್ಮಿಕ ಇಲಾಖೆಯಲ್ಲಿ ಕೆಲಸ ಮಾಡುವ ಮಂತ್ರಿಗಳಿಗೆ ಸಾಕಷ್ಟು ಸಮಾಧಾನ ಸಿಗಬೇಕಾಗುತ್ತದೆ. ಬಡವರ ಕೆಲಸ ಮಾಡುವಂಥ ಅವಕಾಶವನ್ನು ಭಗವಂತ ನನಗೆ ಕರುಣಿಸಿದ್ದಾನೆ. ಇದು ನನಗೆ ಸಾಕಷ್ಟು ದೊಡ್ಡ ತೃಪ್ತಿ," ಎಂದರು.
"ಇನ್ನು 24 ಲಕ್ಷ ಕಾರ್ಮಿಕರಲ್ಲಿ 21 ಲಕ್ಷ 80 ಸಾವಿರ ಜನರಿಗೆ ಕೋವಿಡ್ ಪರಿಹಾರ ಈಗಾಗಲೇ ಬಿಡುಗಡೆಯಾಗಿದೆ. 2 ಲಕ್ಷ ಜನಕ್ಕೆ ಹಾಕಿರುವ ಹಣ ವಾಪಸ್ಸು ಬಂದಿದೆ. ಡಿಬಿಟಿ ಆಧಾರದಲ್ಲಿ ಹಣ ಕೊಡಬೇಕಾಗಿದ್ದು, ನಗದು ರೂಪದಲ್ಲಿ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ಅದಾಲತ್ ಅನ್ನು ಮಾಡಿರುವುದು. ಅದಾಲತ್‌ನಲ್ಲಿ ಪ್ರತಿಯೊಬ್ಬರಿಗೂ ಹಣ ತಲುಪಿಸುವ ಕಾರ್ಯ ಮಾಡಲಾಗುತ್ತದೆ," ಎಂದರು.

ಕಿಟ್ ವಿತರಣೆ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ
ಇನ್ನು ಕಿಟ್ ವಿತರಣೆಯನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸಲಾಗಿದೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, "ಇದು ಆರೋಪ ಮಾತ್ರ. ರಾಜ್ಯದ 224 ಶಾಸಕರು, 75 ವಿಧಾನ ಪರಿಷತ್ ಸದಸ್ಯರು, 28 ಲೋಕಸಭಾ ಸದಸ್ಯರು, ಸಂಬಂಧಪಟ್ಟ ಎಲ್ಲರ ಮುಖಾಂತರ ಕಾರ್ಮಿಕ ಇಲಾಖೆಯ ಅಧೀಕಾರಿಗಳು ಪ್ರತಿ ತಾಲೂಕು, ಪ್ರತಿ ಕ್ಷೇತ್ರದಲ್ಲಿ 21 ಲಕ್ಷಕ್ಕಿಂತ ಹೆಚ್ಚು ಜನರಿಗೆ ಕಿಟ್ ವಿತರಣೆ ಮಾಡಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಮೂಲಕ ವಿತರಣೆ ನಡೆದಿಲ್ಲ. ಎಲ್ಲವೂ ಅಧಿಕಾರಿಗಳ ಮೂಲಕ ಜನಪ್ರತಿನಿಧಿಗಳನ್ನು ಒಳಗೊಂಡಂತೆ ವಿತರಣೆ ಮಾಡಲಾಗಿದೆ. ಅಲ್ಲೋ ಇಲ್ಲೋ ಒಂದೆರಡು ಲೋಪದೋಷಗಳಾಗಿವೆ, ಅದನ್ನು ಸರಿಪಡಿಸುತ್ತೇವೆ," ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.












Click it and Unblock the Notifications