ಸಚಿವ ಶಿವರಾಮ ಹೆಬ್ಬಾರ್ ವಿರುದ್ಧ ಕಾಂಗ್ರೆಸ್ ನಾಯಕರ ಒಗ್ಗಟ್ಟು
ಕಾರವಾರ, ಡಿಸೆಂಬರ್ 26: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಪ್ರತಿನಿಧಿಸುವ ಯಲ್ಲಾಪುರ-ಮುಂಡಗೋಡ ಕ್ಷೇತ್ರದಲ್ಲಿ ಬಲಿಷ್ಠ ಕಾಂಗ್ರೆಸ್ ಮುಖಂಡರ ಕೊರತೆ ಎದುರಾಗಿದ್ದು, ಹೆಬ್ಬಾರ್ ಏಕಚಕ್ರಾಧಿಪತಿಯಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಸಚಿವ ಹೆಬ್ಬಾರ್ ಮಂತ್ರಿಯಾದ ನಂತರ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ನಿರ್ಲಕ್ಷ ವಹಿಸಿದ್ದರಿಂದ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎನ್ನಲಾಗಿತ್ತು. ಇದೀಗ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದು, ಪಂಚಾಯತಿ ಚುನಾವಣೆಯಲ್ಲಿ ಹೆಬ್ಬಾರ್‌ಗೆ ಟಾಂಗ್ ಕೊಡುವ ಪ್ರಯತ್ನಕ್ಕೆ ಇಳಿದಿದೆ.
ಯಲ್ಲಾಪುರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದೇ ಕರೆಯಲಾಗಿತ್ತು. ಎರಡು ಬಾರಿ ಕ್ಷೇತ್ರದಿಂದ ಹೆಬ್ಬಾರ್ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಸಾಧಿಸಿದ್ದರು. ಹೆಬ್ಬಾರ್ ಬಿಜೆಪಿಗೆ ಹೋದ ನಂತರ ಎದುರಾದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕರನ್ನು ಕಣಕ್ಕೆ ಇಳಿದು ಪರಾಭವಗೊಂಡಿದ್ದರು. ಉಪ ಚುನಾವಣೆಯಲ್ಲಿ ಹೆಬ್ಬಾರ್ ಗೆದ್ದು ಮಂತ್ರಿಯಾದ ನಂತರ ಬಿಜೆಪಿ ಕ್ಷೇತ್ರದಲ್ಲಿ ಸಾಕಷ್ಟು ಬಲಿಷ್ಠವಾಗಿದ್ದರೆ, ಇತ್ತ ಭೀಮಣ್ಣ ನಾಯ್ಕ ಸಹ ಶಿರಸಿ ಕ್ಷೇತ್ರದತ್ತ ಮುಖ ಮಾಡಿದ್ದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕರೇ ಇಲ್ಲದಂತಾಗಿತ್ತು.

ಉಸ್ತುವಾರಿಯಾಗಿ ಸಂತೋಷ್ ಲಾಡ್ ನೇಮಕ
ಹೀಗಾಗಿ ಪಂಚಾಯತಿ ಚುನಾವಣೆಯಲ್ಲಿ ಪಕ್ಷವನ್ನು ಬಲಿಷ್ಠವನ್ನಾಗಿ ಮಾಡಲು ಕಾಂಗ್ರೆಸ್ ಹೊರಟಿದೆ. ಅದಕ್ಕಾಗಿಯೇ ಪಂಚಾಯತಿ ಚುನಾವಣೆಯಲ್ಲಿ ಕ್ಷೇತ್ರದ ಉಸ್ತುವಾರಿಯನ್ನಾಗಿ ಪ್ರಭಾವಿ ಮುಖಂಡ ಹಾಗೂ ನೆರೆಯ ಕಲಘಟಗಿ ಕ್ಷೇತ್ರದ ಮಾಜಿ ಶಾಸಕ ಸಂತೋಷ್ ಲಾಡ್ ಅವರನ್ನು ನೇಮಕ ಮಾಡುವ ಮೂಲಕ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ತರುವ ಕಾರ್ಯಕ್ಕೆ ಕಾಂಗ್ರೆಸ್ ಇಳಿದಿದೆ. ಹೆಬ್ಬಾರ್ ಕ್ಷೇತ್ರದಲ್ಲಿ ಸಾಕಷ್ಟು ಬಲಿಷ್ಠವಾಗಿದ್ದರಿಂದ ಪ್ರಭಾವಿ ಮುಖಂಡರನ್ನೇ ಕ್ಷೇತ್ರಕ್ಕೆ ಉಸ್ತುವಾರಿಯನ್ನಾಗಿ ಹಾಕಬೇಕು ಎನ್ನುವ ಬೇಡಿಕೆ ಕೆಲ ಕಾರ್ಯಕರ್ತರದ್ದಾಗಿತ್ತು. ಅದಕ್ಕಾಗಿ ಲಾಡ್ ಅವರೇ ಸೂಕ್ತ ಎಂದು ಪಕ್ಷ ನೇಮಿಸಿದೆ ಎನ್ನಲಾಗಿದೆ.

ಪಕ್ಷದಲ್ಲಿ ನಾಯಕರಿಲ್ಲ ಎನ್ನುವ ಭಾವ
ಇಷ್ಟೇ ಅಲ್ಲದೇ, ಲಾಡ್ ಜೊತೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸಹ ಕ್ಷೇತ್ರದತ್ತ ಮುಖ ಮಾಡಿದ್ದು, ಕ್ಷೇತ್ರದಲ್ಲಿ ಪಂಚಾಯತಿ ಚುನಾವಣೆ ಹಿನ್ನಲೆಯಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಿದ್ದಾರೆ. ಇನ್ನೊಂದೆಡೆ ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ ಸಹ ಕ್ಷೇತ್ರದತ್ತ ಪಕ್ಷ ಬಲವರ್ಧನೆಗೆ ಮುಖ ಮಾಡಿ ಹಲವೆಡೆ ತಿರುಗಾಟ ನಡೆಸಿ ಸಭೆಗಳನ್ನು ನಡೆಸಿದ್ದಾರೆ. ಪಕ್ಷ, ಕಾರ್ಯಕರ್ತರನ್ನು ಅನಾಥವಾಗಲು ಬಿಡುವುದಿಲ್ಲ ಎನ್ನುವ ಹೇಳಿಕೆಯನ್ನು ನೀಡಿ ಪಕ್ಷದಲ್ಲಿ ನಾಯಕರಿಲ್ಲ ಎನ್ನುವ ಭಾವನೆಯನ್ನು ಕಾರ್ಯಕರ್ತರಿಂದ ದೂರ ಮಾಡುವ ಪ್ರಯತ್ನಕ್ಕೆ ಇಳಿದಿದ್ದಾರೆ.

ಕಣಕ್ಕಿಳಿಯಲಿದ್ದಾರೆಯೇ ಪ್ರಶಾಂತ್ ದೇಶಪಾಂಡೆ?
ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭೀಮಣ್ಣ ನಾಯ್ಕ ಸದ್ಯ ಕ್ಷೇತ್ರದ ಮೇಲೆ ತಮ್ಮ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಶಿರಸಿ ಕ್ಷೇತ್ರದತ್ತ ತನ್ನ ಒಲವು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇನ್ನು ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನುವ ಮಾತುಗಳು ಹರಿದಾಡಲು ಪ್ರಾರಂಭವಾಗಿದೆ.
Recommended Video

ಹೆಬ್ಬಾರ್ ವಿರುದ್ಧ ಪ್ರಶಾಂತ್ ಕಣಕ್ಕೆ ಇಳಿಯುವ ಸಾಧ್ಯತೆ
ಕಳೆದ ಉಪ ಚುನಾವಣೆಯಲ್ಲಿಯೇ ಹೆಬ್ಬಾರ್ ವಿರುದ್ಧ ಪ್ರಶಾಂತ್ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬಂದಿತ್ತು. ಅಂತಿಮವಾಗಿ ಭೀಮಣ್ಣ ನಾಯ್ಕ ಕಣಕ್ಕೆ ಇಳಿದಿದ್ದರು. ಈ ಹಿಂದೆ ಯಲ್ಲಾಪುರ ಕ್ಷೇತ್ರದ ಹಲವು ಭಾಗ ಹಳಿಯಾಳ ಕ್ಷೇತ್ರಕ್ಕೆ ಸೇರಿದ್ದರಿಂದ ಕ್ಷೇತ್ರದಲ್ಲಿ ಇಂದಿಗೂ ಆರ್.ವಿ.ದೇಶಪಾಂಡೆ ಹಿಡಿತ ಇರುವ ಹಿನ್ನೆಲೆಯಲ್ಲಿ ಪ್ರಶಾಂತ್ ದೇಶಪಾಂಡೆ ಕಣಕ್ಕೆ ಇಳಿದರೆ ಹೆಬ್ಬಾರ್‌ಗೆ ಸರಿಯಾಗಿ ಟಾಂಗ್ ಕೊಡುವ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇದೀಗ ಮುಂದಿನ ಚುನಾವಣೆಯಲ್ಲಿ ಪ್ರಶಾಂತ್ ದೇಶಪಾಂಡೆ ಸಹ ಕಣಕ್ಕೆ ಇಳಿಯುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ಯಲ್ಲಾಪುರ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications