ಉತ್ತರ ಕನ್ನಡ: ಕಾರವಾರ-ಗೋವಾ ಸಂಪರ್ಕಿಸುವ ಕಾಳಿ ನದಿ ಸೇತುವೆ ಕುಸಿತ
ಕಾರವಾರ, ಆಗಸ್ಟ್ 07: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಗುಡ್ಡ ಕುಸಿತ ಪ್ರಕರಣದ ನೆನಪು ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ದುರಂತ ನಡೆದಿದೆ. ಲಾರಿಯ ಸಮೇತ ಕಾರವಾರ-ಗೋವಾ ಸಂಪರ್ಕಿಸುವ ಕಾಳಿ ನದಿ ಸೇತುವೆ ಕುಸಿತವಾಗಿದ್ದು, ಲಾರಿ ಚಾಲಕನನ್ನು ರಕ್ಷಣೆ ಮಾಡಲಾಗಿದೆ.
ಕೋಡಿಬಾಗ್‌ನಲ್ಲಿ ಕಾಳಿ ನದಿಗೆ 41 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಸೇತುವೆ ಮಧ್ಯರಾತ್ರಿ 1.30ರ ಸುಮಾರಿಗೆ ಕುಸಿದು ಬಿದ್ದಿದೆ. ತಮಿಳುನಾಡು ಮೂಲಕ ಲಾರಿ ಸೇತುವೆ ಮೇಲೆ ಹೋಗುವಾಗಲೇ ಸೇತುವೆ ಕುಸಿದಿದೆ. ಲಾರಿ ಚಾಲಕ ನದಿಗೆ ಬಿದ್ದಿದ್ದು, ಸ್ಥಳೀಯರು ರಕ್ಷಣೆ ಮಾಡಿದರು.

ರಾಷ್ಟ್ರಿಯ ಹೆದ್ದಾರಿಗೆ ನಿರ್ಮಾಣ ಮಾಡಿರುವ ಈ ಸೇತುವೆ ಕಾರವಾರ ಹಾಗೂ ಗೋವಾ ನಡುವೆ ಸಂಪರ್ಕ ಕಲ್ಪಿಸುತ್ತಿತ್ತು. ಹಳೆ ಸೇತುವೆ ಮುರಿದು ಬಿದ್ದಿರುವ ಹಿನ್ನೆಲೆಯಲ್ಲಿ ಹೊಸ ಸೇತುವೆಯ ಗುಣಮಟ್ಟ ಪರಿಶೀಲನೆಗೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಸೇತುವ ಗುಣಮಟ್ಟದ ಬಗ್ಗೆ ವರದಿ ಸಲ್ಲಿಸುವಂತೆ ಎನ್‌ಹೆಚ್‌ಎಐಗೆ ಸೂಚಿಸಲಾಗಿದೆ.
ಸ್ಥಳೀಯರು ನೀಡಿರುವ ಮಾಹಿತಿಯಂತೆ ಒಟ್ಟು ಮೂರು ಕಡೆಗಳಲ್ಲಿ ಹಳೆಯ ಸೇತುವೆ ಕುಸಿದಿದೆ. ಒಂದು ಕಡೆ ಸಂಪೂರ್ಣವಾಗಿ ಸೇತುವೆ ಕುಸಿದು ಕಾಳಿ ನದಿಗೆ ಬಿದ್ದಿದೆ. ಸೇತುವೆ ಕುಸಿತದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಈ ರಾಷ್ಟ್ರಿಯ ಹೆದ್ದಾರಿಯಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಒಂದು ಮಾರ್ಗಕ್ಕೆ ಹಳೆಯ ಸೇತುವೆಯನ್ನು ಬಳಕೆ ಮಾಡಲಾಗುತ್ತಿತ್ತು. ಮಧ್ಯರಾತ್ರಿ 37 ವರ್ಷದ ಮುರುಗನ್ ಚಾಲನೆ ಮಾಡುತ್ತಿದ್ದ ಖಾಲಿ ಲಾರಿ ಸೇತುವೆ ಮೇಲೆ ಸಾಗುವಾಗ ಏಕಾಏಕಿ ಸೇತುವೆ ಕುಸಿದಿದೆ.
ಲಾರಿ ನದಿಗೆ ಬೀಳುತ್ತಿದ್ದಂತೆಯೇ ಮುಂಭಾಗದ ಗ್ಲಾಸ್ ಒಡೆದು ಹೊರಬಂದ ಮುರುಗನ್ ಕ್ಯಾಬಿನ್ ಮೇಲೆ ನಿಂತು ಸಹಾಯಕ್ಕಾಗಿ ಕೂಗಿದ್ದಾನೆ. ಆಗ ಸ್ಥಳೀಯರು, ಬೀಟ್ ಪೊಲೀಸರು ಆತನನ್ನು ರಕ್ಷಣೆ ಮಾಡಿದರು.
ಎಸ್‌ಪಿ ನಾರಾಯಣ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತ್ತೊಂದು ಸೇತುವೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಐಆರ್‌ಬಿ ಕಂಪನಿ ಈ ಸೇತುವೆಯನ್ನು ನಿರ್ಮಾಣ ಮಾಡಿತ್ತು.
ಸೇತುವೆ ಗುಣಮಟ್ಟ ಪರಿಶೀಲನೆ: ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಕಾಳಿ ನದಿಗೆ ನಿರ್ಮಾಣ ಮಾಡಲಾಗಿರುವ ಹೊಸ ಸೇತುವೆಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ, ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ.
ಆದೇಶದಲ್ಲಿ ಕಾರವಾರ-ಸದಾಶಿವಗಢ ಸಂಪರ್ಕಿಸುವ ಹಳೆ ಸೇತುವೆ 7/8/2024ರ 1.30ರ ಸುಮಾರಿಗೆ ಕುಸಿದು ಬಿದ್ದಿದೆ ಎಂಬುದು ಗಮನಕ್ಕೆ ಬಂದಿದೆ. ಆದ್ದರಿಂದ ಕಾಳಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಹೊಸ ಸೇತುವೆ ಗುಣಮಟ್ಟ ಪರಿಶೀಲನೆಯ ಅಗತ್ಯವಿದೆ.
2005ರ ವಿಪತ್ತು ನಿರ್ವಹಣಾ ನಿಯಮ ಸೆಕ್ಷನ್ 33, 34ರ ಅನ್ವಯ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಕೆ. ಎನ್‌ಹೆಚ್‌ಎಐ ಬೆಂಗಳೂರು ವಿಭಾಗದ ಪಾದೇಶಿಕ ಅಧಿಕಾರಿ, ಯೋಜನಾ ನಿರ್ದೇಶಕರಿಗೆ ಹೊಸ ಸೇತುವೆ ಗುಣಮಟ್ಟ ಪರಿಶೀಲನೆಗೆ ಸೂಚನೆ ನೀಡಿದ್ದಾರೆ. 7/8/2024ರ ಮಧ್ಯಾಹ್ನ 12 ಗಂಟೆಯ ಒಳಗೆ ವರದಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.












Click it and Unblock the Notifications