ಮೇ.3ರಂದು ಉತ್ತರ ಕನ್ನಡದಲ್ಲಿ ಪ್ರಧಾನಿ ಮೋದಿ: ನೌಕಾನೆಲೆ ಜಾಗದಲ್ಲಿಯೇ ಬಿಜೆಪಿ ಬೃಹತ್ ಸಮಾವೇಶ
ಕಾರವಾರ, ಏಪ್ರಿಲ್ 29: ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಮಾವೇಶಕ್ಕೆ ಸಿದ್ಧತೆ ಆರಂಭವಾಗಿದೆ. ಅಂಕೋಲಾದ ಬಳಿ ನೌಕಾನೆಲೆಯ 40 ಎಕರೆಗೂ ಹೆಚ್ಚು ವಿಸ್ತಾರವಾದ ಜಾಗದಲ್ಲಿಯೇ 15ಕ್ಕೂ ಹೆಚ್ಚು ಜೆಸಿಬಿಗಳ ಮೂಲಕ ಸಮತಟ್ಟು ಮಾಡಲಾಗುತ್ತಿದ್ದು ಲಕ್ಷಕ್ಕೂ ಹೆಚ್ಚು ಮಂದಿ ಸೇರಿಸುವ ಗುರಿ ಇದೀಗ ನಾಯಕರ ಹೆಗಲಿಗೇರಿದೆ.
ಪ್ರಧಾನಿ ನರೇಂದ್ರ ಮೋದಿ ಕರೆಸುವುದಕ್ಕಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಜಿಲ್ಲೆಯ ನಾಯಕರು ಕೊನೆಗೂ ಯಶಸ್ವಿಯಾಗಿದ್ದಾರೆ. ಮೇ.3ರಂದು ಪ್ರಧಾನಿ ಆಗಮಿಸುವುದು ಬಹುತೇಕ ಖಚಿತವಾದ ಹಿನ್ನೆಲೆಯಲ್ಲಿ ಅಂಕೋಲಾದ ಹಟ್ಟಿಕೇರಿಯ ನೌಕಾನೆಲೆ ಜಾಗದಲ್ಲಿಯೇ ಸಮಾವೇಶಕ್ಕೆ ಜಾಗ ಗುರುತಿಸಿ ಸಮತಟ್ಟು ಮಾಡುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ.

ಸೀಬರ್ಡ್ ಯೋಜನೆ ಪ್ರಾರಂಭದ ವೇಳೆಗೆ ಭೂಸ್ವಾಧೀನಪಡೆಸಿಕೊಂಡಿದ್ದ ಜಾಗದಲ್ಲಿ ಇದೀಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ಜಿಲ್ಲೆಯ ಕರಾವಳಿಯಲ್ಲಿ ಲಕ್ಷಾಂತರ ಜನ ಸೇರಿಸಲು ಯಾವುದೇ ಖಾಲಿ ಜಾಗ ಇಲ್ಲದ ಕಾರಣ ಇದೇ ಜಾಗವನ್ನು ನೌಕಾನೆಲೆ ಅನುಮತಿಯೊಂದಿಗೆ ಪಡೆದು ಪ್ರಚಾರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕರುಗಳು ಹೇಳಿಕೊಂಡಿದ್ದಾರೆ.
ಸರ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸರ್ವೆ ನಡೆಸಿ, ವೇದಿಕೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ನೌಕಾನೆಲೆಯ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದು ಪ್ರಧಾನಿ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ್ದಾರೆ. 40 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಈಗಾಗಲೇ ಜಾಗವನ್ನು ಸಮತಟ್ಟು ಮಾಡಲಾಗುತ್ತಿದೆ. ಪಾರ್ಕಿಂಗ್, ಹೆಲಿಪ್ಯಾಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಒಂದೂವರೆ ಎಕರೆ ಜಾಗದಲ್ಲಿ ವೇದಿಕೆ ಸಿದ್ಧಪಡಿಸಲಾಗುತ್ತಿದೆ.

ಇನ್ನು ಮೂರು ಗೆಟ್ ಮೂಲಕ ವೇದಿಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ಎಲ್ಲ ಗೆಟ್‌ಗಳಲ್ಲಿಯೂ ಬಿಗಿ ತಪಾಸಣೆ ನಡೆಸಲಾಗುತ್ತದೆ. ಸುಮಾರು 100 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಅಲ್ಲದೆ ಸಾವಿರಾರು ಪೊಲೀಸರು ಸೇರಿದಂತೆ ವಿಶೇಷ ಭದ್ರತಾ ತಂಡ ಕೂಡ ಆಗಮಿಸಿ ಭದ್ರತೆ ಕಲ್ಪಿಸಲಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, 'ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಮೋದಿಯವರ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಅವರು ನಿಗದಿತ ಸಮಯ ಮಧ್ಯಾಹ್ನ 12ಕ್ಕೆ ಸರಿಯಾಗಿ ಆಗಮಿಸಲಿದ್ದು, ಅವರಿಗಿಂತ ಮುಂಚಿತವಾಗಿ ರಾಜ್ಯ ಹಾಗೂ ರಾಷ್ಟ್ರೀಯ ಹಲವು ನಾಯಕರು ಆಗಮಿಸಲಿದ್ದಾರೆ. ಮೋದಿ ಅವರ ಪ್ರಭಾವ, ಶಾಸಕರು ಕೈಗೊಂಡ ಅಭಿವೃದ್ಧಿ ಕಾಮಗಾರಿ ಹಾಗೂ ಮೋದಿ ಅವರನ್ನು ಒಪ್ಪಿಕೊಂಡು ಬರುವ ಲಕ್ಷಾಂತರ ಜನರು ಈ ಬಾರಿ ಜಿಲ್ಲೆಯ ಎಲ್ಲ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ಇದೆ' ಎಂದು ತಿಳಿಸಿದ್ದಾರೆ.
ಶಾಸಕಿ ರೂಪಾಲಿ ಎಸ್.ನಾಯ್ಕ ಮಾತನಾಡಿ, 'ಪ್ರಧಾನಿ ನರೇಂದ್ರ ಮೋದಿ ಮೇ.3 ರಂದು ಆಗಮಿಸಿ ಜಿಲ್ಲೆಯ ಎಲ್ಲ ಆರೂ ಕ್ಷೇತ್ರಗಳ ಜನತೆಯನ್ನುದ್ದೇಶಿಸಿ ಪ್ರಚಾರ ನಡೆಸಲಿದ್ದಾರೆ. ಇದರಿಂದ ಕಾರ್ಯಕರ್ತರು ಉತ್ಯುತ್ಸಾಹದಲ್ಲಿದ್ದು, ಕ್ಷೇತ್ರದ ಪ್ರತಿಯೊಂದು ಮನೆ ಮನೆಯಿಂದಲೂ ಎಲ್ಲ ಜನರು ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು ವಿಶಾಲವಾದ ಜಾಗದಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಬಿ.ಎಲ್.ಸಂತೋಷ, ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ' ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಸಿದ್ದತೆ ಜೋರಾದ ಬೆನ್ನಲ್ಲೇ ಜನರನ್ನು ಸೇರಿಸುವ ಹೊಣೆ ಕೂಡ ಪಕ್ಷದ ಅಭ್ಯರ್ಥಿಗಳು ಹಾಗೂ ನಾಯಕರ ಹೆಗಲಿಗೆರಿಸಲಾಗಿದೆ. ಪ್ರತಿ ಕ್ಷೇತ್ರದಿಂದ 30 ಸಾವಿರ ಜನರನ್ನು ಕರೆತರುವ ಗುರಿಯನ್ನು ಶಾಸಕರು ಹಾಗೂ ಪಕ್ಷದ ಮುಖಂಡರಿಗೆ ನೀಡಲಾಗಿದೆ ಎನ್ನಲಾಗಿದೆ.












Click it and Unblock the Notifications