ಅಳಿಯನದ್ದಾಯ್ತು, ಈಗ ಮಾವನ ಸರದಿ; ಕುಮಾರ್ ಬಂಗಾರಪ್ಪ ಬಗ್ಗೆ ಭೀಮಣ್ಣ ನಾಯ್ಕ ಕಿಡಿ
ಯಲ್ಲಾಪುರ, ನವೆಂಬರ್ 20: 'ತಂದೆ- ತಾಯಿ ಬದುಕಿದ್ದಾಗ ಕುಮಾರ್ ಬಂಗಾರಪ್ಪ ಎಷ್ಟು ಚೆನ್ನಾಗಿ ನೋಡಿಕೊಂಡಿದ್ದರು ಎನ್ನುವುದು ಜನರಿಗೆ ಗೊತ್ತು. ಅವರು ತನ್ನ ಆತ್ಮ ಸಾಕ್ಷಿಯನ್ನು ನೋಡಿಕೊಂಡು ಮಾತನಾಡಲಿ' ಎಂದು ಬಿಜೆಪಿಯ ರಾಜ್ಯ ಮುಖಂಡ, ಸೋದರ ಅಳಿಯನೂ ಆದ ಕುಮಾರ್ ಬಂಗಾರಪ್ಪನವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಕಿಡಿಕಾರಿದರು.
ಪಟ್ಟಣದ ರವೀಂದ್ರನಗರದಲ್ಲಿ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 'ಬಂಗಾರಪ್ಪ ಅವರ ಕೊನೆಯುಸಿರು ಇರುವವರೆಗೆ ಮಧು ಬಂಗಾರಪ್ಪ ಹಾಗೂ ನಾನು ಜೊತೆಯಲ್ಲಿದ್ದೆವು. ನನ್ನ ಬಗ್ಗೆ ಕುಮಾರ್ ಬಂಗಾರಪ್ಪ ಅವರಿಗೆ ಮಾತನಾಡುವ ನೈತಿಕತೆ ಇಲ್ಲ. ಅವರಂತೆ ಪಕ್ಷ ಬದಲಿಸುವುದು, ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಹೋಗುವ ಕೆಲಸವನ್ನು ನಾನು ಮಾಡಿಲ್ಲ. ನನ್ನ ಬಳಿ ಹಣ ಇಲ್ಲ. ನಾನು ಕೃಷಿಕ. ನಾನು ಇದುವರೆಗೂ ಯಾವುದೇ ಸರ್ಕಾರಿ ಹುದ್ದೆಗೆ ಹೋಗಿ ಕಾಂಟ್ರಾಕ್ಟ್ ಮಾಡಿ ಹಣ ಮಾಡಿಲ್ಲ' ಎಂದು ಹರಿಹಾಯ್ದರು.

ಸೋಮವಾರದ ಬಿಜೆಪಿ ಸಮಾವೇಶದಲ್ಲಿ ಭೀಮಣ್ಣ ನಾಯ್ಕ ವಿರುದ್ಧ ಕುಮಾರ್ ಬಂಗಾರಪ್ಪ ಕಿಡಿಕಾರಿದ್ದರು. ಭೀಮಣ್ಣ ಡಮ್ಮಿ ಕ್ಯಾಂಡಿಡೇಟ್ ಎಂದು ವ್ಯಂಗ್ಯವಾಡಿದ್ದರು.












Click it and Unblock the Notifications