ಕಾರವಾರ: ಅಂಗನವಾಡಿ ಕೇಂದ್ರ ಕಟ್ಟಡದ ಸಿಮೆಂಟ್ ಕುಸಿತ; ಅಧೃಷ್ಟಕ್ಕೆ ತಪ್ಪಿದ ಪ್ರಾಣಾಪಾಯ
ಕಾರವಾರ, ಜೂ. 15: ಇದ್ದಕ್ಕಿದ್ದಂತೆ ಅಂಗನವಾಡಿ ಗೋಡೆಯ ಸಿಮೆಂಟ್ ಪ್ಲಾಸ್ಟರ್ ಕುಸಿತಗೊಂಡು ಕೂದಲೆಳೆ ಅಂತರದಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಪಾರಾಗಿರುವ ಘಟನೆ ಹೊನ್ನಾವರ ತಾಲ್ಲೂಕಿನ ಚಂದಾವರ ಗ್ರಾ.ಪಂ. ವ್ಯಾಪ್ತಿಯ ಕಡ್ನೀರಿನಲ್ಲಿ ನಡೆದಿದೆ.
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಹೊರತಾಗಿ ಕಾರ್ಯಕರ್ತೆ ಹಾಗೂ ಸಹಾಯಕಿ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಈ ವೇಳೆ ಗೋಡೆ ಮಧ್ಯಭಾಗದಲ್ಲಿ ಸದ್ದು ಕೇಳಿಸಿದ್ದು, ಕ್ಷಣಾರ್ಧದಲ್ಲಿ ಸಿಮೆಂಟ್ ಪ್ಲಾಸ್ಟರಿನ ದೊಡ್ಡ ಭಾಗವೇ ನೆಲಕ್ಕಪ್ಪಳಿಸಿದೆ. ಪ್ಲಾಸ್ಟರ್ ಬಿದ್ದ ಹೊಡೆತಕ್ಕೆ ಕಾರ್ಯಕರ್ತೆ, ಸಹಾಯಕಿ ಹಾಗೂ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದ ಆಶಾ ಕಾರ್ಯಕರ್ತೆ ಕಿರುಚಾಡಿಕೊಂಡು ಓಡಿದ್ದಾರೆ. ಕೂಡಲೇ ಪಕ್ಕದ ಶಾಲೆಯ ಶಿಕ್ಷಕರು, ಊರಿನ ಕೆಲವರು ಬಂದು ನೋಡುತ್ತಿದ್ದಂತೆ ಗೋಡೆ ಕುಸಿದು ಬಿದ್ದಿರುವುದು ತಿಳಿದಿದೆ.

ನಾಲ್ಕು ಗೋಡೆಗಳು ಬಿರುಕು
ಕಳೆದ ನಾಲ್ಕು ವರ್ಷಗಳಿಂದ ಕಡ್ನೀರು ಅಂಗನವಾಡಿ ಕಟ್ಟಡದ ನಾಲ್ಕು ಗೋಡೆಗಳು ಬಿರುಕು ಬಿಟ್ಟಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿರುವುದು ಸಾಬೀತಾಗಿದೆ. ಅಂಗನವಾಡಿ ಶಿಥಿಲವಾದ ಬಗ್ಗೆ ಸ್ಥಳೀಯ ಶಾಸಕರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂಬುದು ಪಾಲಕರ ಆರೋಪವಾಗಿದೆ.

ರಂಗಮಂದಿರದಲ್ಲಿ ಪಾಠ
ಇನ್ನು ಗೋಡೆ ಭಯಾನಕ ರೀತಿಯಲ್ಲಿ ಬಿರುಕು ಬಿಟ್ಟಿದ್ದು, ಮಕ್ಕಳ ಸುರಕ್ಷತಾ ದೃಷ್ಟಿಯಿಂದ ನಾಲ್ಕು ವರ್ಷಗಳಿಂದ ಅಂಗನವಾಡಿಗೆ ಬರುವ ಪುಟಾಣಿಗಳಿಗೆ ರಂಗಮಂದಿರಲ್ಲಿ ಪಾಠ ಮಾಡಲಾಗುತ್ತಿದೆ. ಅಂಗನವಾಡಿ ಕೇಂದ್ರದಲ್ಲಿ 24 ಮಕ್ಕಳು ವ್ಯಾಸಂಗ ಮಾಡುತ್ತಾರೆ. ಅಂಗನವಾಡಿ ಕಾರ್ಯಕರ್ತೆ ಚಂದ್ರಕಲಾ ನಾಯ್ಕ ಅಂಗನವಾಡಿ ಸ್ಥಿತಿಗತಿಗಳ ಬಗ್ಗೆ ಪಾಲಕರ ಸಭೆ ನಡೆಸಿ ಸಾಕಷ್ಟು ಬಾರಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದು, ಈವರೆಗೂ ಯಾವುದೇ ಬೆಳವಣಿಗೆ ಕಂಡಿರಲಿಲ್ಲ. ಆದರೆ ಇದೀಗ ಅನಾಹುತ ನಡೆದಿದ್ದು ಅದೃಷ್ಟವಸಾತ್ ಪಾರಾಗಿದ್ದಾರೆ.

ಒಟ್ಟಾರೆ ಕಟ್ಟಡ ಕುಸಿದು ಬಿದ್ದು ಅವಘಡ ಸಂಭವಿಸುವಷ್ಟರಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಮುಂದಾಗಬೇಕಿದೆ.
Recommended Video
(ಒನ್ಇಂಡಿಯಾ ಸುದ್ದಿ)












Click it and Unblock the Notifications