ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಿಂದ ಹೆಗಡೆ ಹೆಸರು ಕಡೆಗೂ ಮಾಯ
ಕಾರವಾರ, ನವೆಂಬರ್ 08 : ಅಂತೂ ಇಂತೂ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆಯವರ ಹೆಸರು ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಿಂದ ಮಾಯವಾಗಿದೆ!
ಕಳೆದ ಬಾರಿಯೂ ಅನಂತಕುಮಾರ ಹೆಗಡೆ, ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕದಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಆದರೆ, ಶಿಷ್ಟಾಚಾರದಂತೆ ಅವರ ಹೆಸರನ್ನು ಹಾಕುವುದು ನಮ್ಮ ಕರ್ತವ್ಯ. ಕಾರ್ಯಕ್ರಮಕ್ಕೆ ಬರುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂಬಂತೆ ಕಳೆದ ಬಾರಿ ಅವರ ವಿರೋಧದ ನಡುವೆಯೂ ಹೆಸರನ್ನು ಹಾಕಲಾಗಿತ್ತು.
ಆದರೆ, ಈ ಬಾರಿ ಸಚಿವರ ಮಾತಿಗೆ ಮನ್ನಣೆ ನೀಡಿರುವ ಜಿಲ್ಲಾಡಳಿತ, ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರನ್ನು ತೆಗೆದು ಹಾಕಿದೆ. ಶಿಷ್ಟಾಚಾರಕ್ಕೂ ತಮ್ಮ ಹೆಸರನ್ನು ಹಾಕದಂತೆ ಅವರು ಪತ್ರದಲ್ಲಿ ಉಲ್ಲೇಖಿಸಿರುವುದರಿಂದ ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಿಂದ ತೆಗೆದು ಹಾಕಲಾಗಿದೆ.

ಅನಂತಕುಮಾರ ಹೆಗಡೆ ಹೀಗೆ ಪತ್ರ ಬರೆದಿದ್ದರು:
“ಕರ್ನಾಟಕ ಸಮ್ಮಿಶ್ರ ಸರ್ಕಾರವು ಜನತೆಯ ತೀವ್ರ ವಿರೋಧದ ನಡುವೆಯೂ ನ.10ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಣೆಗೆ ನಿರ್ಧರಿಸಿದೆ. ಇದನ್ನು ನಾನು ನಿಷ್ಠುರವಾಗಿ ಖಂಡಿಸುತ್ತಿದ್ದೇನೆ. ಟಿಪ್ಪು ಜಯಂತಿಗೆ ಪ್ರಾರಂಭದಿಂದಲೂ ಸಾರ್ವಜನಿಕರು ಹಾಗೂ ನಾಡಿನ ವಿಚಾರವಾದಿಗಳು ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಕನ್ನಡ ವಿರೋಧಿ ಮತ್ತು ಹಿಂದೂ ವಿರೋಧಿಯಾಗಿರುವುದು ಇತಿಹಾಸದಿಂದ ತಿಳಿಯುತ್ತದೆ. ಇದಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿರೋಧ ಹಾಗೂ ಪ್ರತಿಭಟನೆಗಳು ನಡೆದು ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದೆ. ಈ ರೀತಿಯ ಒಬ್ಬ ಸಮಾಜ ಘಾತುಕ ವ್ಯಕ್ತಿಯನ್ನು ವೈಭವೀಕರಿಸಿ ಆತನ ಜಯಂತಿಯನ್ನು ಆಚರಿಸಲು ಹೊರಟಿರುವುದು ನಿಜಕ್ಕೂ ಖಂಡನೀಯ. ಹೀಗಾಗಿ ಶಿಷ್ಠಾಚಾರದ ಪ್ರಕಾರ ನನ್ನ ಹೆಸರನ್ನು ನಮೂದಿಸಬೇಡಿ” ಎಂದು ಅವರು ತಮ್ಮ ವಿಶೇಷ ಕರ್ತವ್ಯಾಧಿಕಾರಿ ವಿಜಯಕುಮಾರ್ ತೋರಗಲ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬೆಳಗಾವಿ, ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು.












Click it and Unblock the Notifications