ವೈರಲ್ ವಿಡಿಯೋ : ಬೈಕ್ ಸವಾರನಿಗೆ ಜೀವದಾನ ಮಾಡಿದ ಹೆಲ್ಮೆಟ್!

ಕಾರವಾರ, ಜುಲೈ.30: ಬೈಕ್ ಸವಾರರಿಗೆ ಹೆಲ್ಮೆಟ್ ಹೇಗೆ ಜೀವದಾನ ಮಾಡುತ್ತದೆ ಎನ್ನುವುದಕ್ಕೆ ಶನಿವಾರ ನಗರದಲ್ಲಿ ನಡೆದ ಅಪಘಾತವೊಂದು ಸಾಕ್ಷಿಯಾಗಿದೆ.
ನಗರದ ಕಲಾ ಮತ್ತು ವಿಜ್ಞಾನ ಕಾಲೇಜಿನ ಎದುರು ಶನಿವಾರ ಸಂಜೆ ಎರಡು ಬೈಕ್ ಗಳ ನಡುವೆ ಅಪಘಾತ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಪವಾಡ ಸದೃಶವಾಗಿ ಪಾರಾಗಿದ್ದಾರೆ.
ವೈರಲ್ ವಿಡಿಯೋ: ರಾತ್ರಿಯೆಲ್ಲ ಆಗಸದಿ ಮೋಡಿ ಮಾಡಿದ ರಕ್ತಚಂದ್ರ
ತಮ್ಮ ಬೈಕ್ ನಲ್ಲಿ ರಸ್ತೆ ದಾಟುತ್ತಿದ್ದ ಕೇಶವನಾಯಕವಾಡದ ಗುರುದತ್ತ ನಾಯ್ಕ ಅವರ ಬೈಕ್ ಗೆ ಇನ್ನೊಂದು ಬೈಕ್ ವೇಗವಾಗಿ ಬಂದು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಬೈಕ್ ಬಿಟ್ಟು ದೂರಕ್ಕೆ ಬಿದ್ದಿದ್ದಾರೆ.
ಇದರಿಂದಾಗಿ ಗುರುದತ್ತ ಅವರು ಗಾಯಗೊಂಡರು. ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಆದರೆ, ಡಿಕ್ಕಿ ಹೊಡೆದ ಇನ್ನೊಬ್ಬ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರಿಂದ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆತ ಬಿದ್ದ ಕೂಡಲೇ ಗುರುದತ್ತ ಅವರನ್ನು ಎತ್ತಿ, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆತ ಯಾರೆಂಬುದು ತಿಳಿದುಬಂದಿಲ್ಲ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಈ ದೃಶ್ಯಾವಳಿ ಕಾಲೇಜಿನ ಪಕ್ಕದ ಅಂಗಡಿಯೊಂದರ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !