ಗಂಡ-ಹೆಂಡತಿ ಜಗಳದಲ್ಲಿ ಮಗು ಸಾವು: ಮೊಸಳೆ ಬಾಯಲ್ಲಿತ್ತು ಮೃತದೇಹ! ಆಗಿದ್ದೇನು..?
ಉತ್ತರ ಕನ್ನಡ, ಮೇ 05: ಗಂಡ ಹೆಂಡತಿಯ ಜಗಳದಿಂದ ಕೂಸು ಬಡವಾಯ್ತು ಎನ್ನುವ ಮಾತಿದೆ. ಆದರೆ ಇಲ್ಲೊಂದು ಘಟನೆಯಲ್ಲಿ ಗಂಡ-ಹೆಂಡತಿ ಜಗಳದಿಂದ ಮಗುವಿನ ಪ್ರಾಣವೇ ಹೋಗಿದೆ. ಇಂತಹ ಹತ್ತಾರು ಘಟನೆಗಳನ್ನು ಇತ್ತೀಚಿಗೆ ನಾವು ನೋಡಬಹುದು. ಗಂಡನ ಮೇಲಿ ಕೋಪಕ್ಕೆ ತಾಯಿ ಮಗುವನ್ನು ಹಿಂಸಿಸುವುದು, ಅಥವಾ ಪ್ರಾಣ ತೆಗೆಯುವುದು. ಹೆಂಡತಿ ಮೇಲಿನ ಕೋಪಕ್ಕೆ ತಂದೆ ಮಕ್ಕಳನ್ನು ಕೊಲ್ಲುವುದು ಇಂತಹ ಘಟನೆಗಳು ಇತ್ತೀಚಿಗೆ ಹೆಚ್ಚಾಗಿದೆ.
ಇಂತಹದ್ದೇ ಘಟನೆ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿದ್ದು, ಗಂಡನೊಂದಿಗೆ ಜಗಳವಾಡಿದ ಮಹಾ ತಾಯಿಯೊಬ್ಬಳು ಹೆತ್ತು ಸಾಕಿದ ಆರು ವರ್ಷದ ಗಂಡು ಮಗುವನ್ನು ಗಂಡನ ಮೇಲಿನ ಕೋಪಕ್ಕೆ ಮೊಸಳೆಗಳಿರುವ ನಾಲೆಗೆ ಎಸೆದಿದ್ದಾಳೆ.

ದಾಂಡೇಲಿಯ ಹಾಲಮಡ್ಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ರವಿಕುಮಾರ್ ಶೆಳ್ಳೆ ಮತ್ತು ಸಾವಿತ್ರಿ ದಂಪತಿಗಳು ನಿನ್ನೆ ಶನಿವಾರ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಜಗಳದಿಂದ ಮಾನಸಿಕವಾಗಿ ನೊಂದ ಸಾವಿತ್ರಿ ಕೋಪದಿಂದ 6 ವರ್ಷದ ಗಂಡು ಮಗು ವಿನೋದ್ನನ್ನು ಅಲ್ಲೆ ಹತ್ತಿರದಲ್ಲಿರುವ ದೊಡ್ಡ ನಾಲೆಗೆ ಎಸೆದು ಬಂದಿದ್ದಾಳೆ.
ಘಟನೆ ನಡೆದು ಸ್ವಲ್ಪ ಸಮಯದ ನಂತರ ಸಾವಿತ್ರಿ ಮಗುವನ್ನು ನಾಲೆಗೆ ಎಸೆದು ಬಂದಿರುವುದನ್ನು ಸ್ಥಳೀಯರಿಗೆ ತಿಳಿಸಿದ್ದಾಳೆ. ಸ್ಥಳೀಯರು ತಕ್ಷಣವೇ ನಾಲೆಯ ಹತ್ತಿರ ಬಂದು ಮಗುವಿನ ಹುಡುಕಾಟವನ್ನು ನಡೆಸಿದ್ದಾರೆ. ಕೂಡಲೇ ದಾಂಡೇಲಿಯ ಗ್ರಾಮೀಣ ಪೊಲೀಸ್ ಠಾಣೆಗೆ ಕೂಡ ಮಾಹಿತಿಯನ್ನು ನೀಡಿದ್ದಾರೆ.
ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಸಹಕಾರದಲ್ಲಿ ಹಾಗೂ ಸ್ಥಳೀಯ ಮುಳುಗು ತಜ್ಞರ ಮತ್ತು ಸ್ಥಳೀಯರ ನೆರವಿನೊಂದಿಗೆ ಮಗುವಿನ ಶೋಧ ಕಾರ್ಯ ನಡೆಸಿದ್ದಾರೆ. ನಿನ್ನೆ ರಾತ್ರಿ ಈ ದುರ್ಘಟನೆ ನಡೆದಿದ್ದು, ಮಗುವಿನ ಶೋಧ ಕಾರ್ಯ ರಾತ್ರಿಯಿಂದ ಮುಂದುವರೆದಿತ್ತು. ಅದರೆ ಎಲ್ಲೂ ಮಗು ಪತ್ತೆಯಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಮಗುವಿನ ಮೃತದೇಹ ಪತ್ತೆಯಾಗಿದೆ. ಮೊಸಳೆಯ ಬಾಯಿಯಲ್ಲಿ ಕಾಣಿಸಿಕೊಂಡ ಮಗುವಿನ ಮೃತದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರ ತೆಗೆದಿದ್ದಾರೆ. ಕೋಪದ ಕೈಗೆ ಬುದ್ದಿಕೊಟ್ಟ ತಾಯಿ ಮಗುವನ್ನೇ ಕಳೆದುಕೊಂಡಿದ್ದಾಳೆ. ದಾಂಡೇಲಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications