ಅಂಗನವಾಡಿ ಮಕ್ಕಳಿಗಾಗಿ ಹಾರೆ, ಗುದ್ದಲಿ ಹಿಡಿದು ಬಾವಿ ತೋಡಲು ನಿಂತ 55 ವರ್ಷದ ಮಹಿಳೆ!
ಉತ್ತರ ಕನ್ನಡ, ಫೆಬ್ರವರಿ 08: ಕೆಲವು ಸಮಸ್ಯೆಗಳಿಗೆ ಪರಿಹಾರ ಬೇಕೆ ಎಂದು ಸರ್ಕಾರದ ಮೇಲೆ ಒತ್ತಡ ಹಾಕುವ ನಾವುಗಳು ಪರಿಹಾರಕ್ಕಾಗಿ ಕಾಯುತ್ತಾ ಕೂರುತ್ತವೆ. ಅದೇ ಕೆಲವೊಬ್ಬರು ಮಾತ್ರ ಕೈ ಕಟ್ಟಿ ಕೂರದೆ ತಮ್ಮ ಸಮಸ್ಯೆಗೆ ತಾವೇ ಏನಾದರೂ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಾರೆ. ಹೀಗೆಯೇ ಅಂಗನವಾಡಿ ಮಕ್ಕಳಿಗೆ ನೀರು ಇಲ್ಲವೆಂದು ತಾವೇ ಬಾವಿ ತೋಡಲು ಹಾರೆ, ಗುದ್ದಲಿ ಹಿಡಿದಿದ್ದಾರೆ ಒಬ್ಬ ಮಹಿಳೆ.
ಹೌದು... ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದ 55 ವರ್ಷದ ಮಹಿಳೆಯೊಬ್ಬರು ಸ್ಥಳೀಯ ಅಂಗನವಾಡಿಗೆ ಹಾಜರಾಗುವ ಮಕ್ಕಳಿಗೆ ನಿರಂತರವಾಗಿ ನೀರು ಸರಬರಾಜು ಮಾಡಬೇಕು ಎಂದು ತಾವೇ ಬಾವಿಯನ್ನು ತೋಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಇವರೇ ಈ ಹಿಂದೆ ಬಾವಿ ತೋಡಿ ಸುದ್ದಿಯಾಗಿದ್ದ ಗೌರಿ ಸಿ ನಾಯ್ಕ್.

ಮಕ್ಕಳಿಗಾಗಿ ಬಾವಿ ತೋಡುತ್ತಿರುವ ಒಂಟಿ ಮಹಿಳೆ!
ಹುತ್ಗಾರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗಣೇಶನಗರದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಗ್ರಾಮ ಪಂಚಾಯಿತಿಯಿಂದ ನೀರು ಪೂರೈಕೆಯಾದರೂ ಸ್ಥಳೀಯವಾಗಿ ನೀರಿಲ್ಲ. ಹೀಗಾಗಿ ಅಂಗನವಾಡಿ ಮಕ್ಕಳಿಗೂ ನೀಡಿನ ಸಮಸ್ಯೆಯಿದೆ. ಇದೆಲ್ಲಾ ಅರಿತ ಗೌರಿ ನಾಯ್ಕ್ 4 ಅಡಿ ಅಗಲದ ಬಾವಿ ತೋಡುವ ಕೆಲಸ ಮಾಡುತ್ತಿದ್ದಾರೆ.
ತಮ್ಮ ಮನೆ ಸಮೀಪದ ಅಂಗನವಾಡಿ ಕೇಂದ್ರದ ಆವರಣದಲ್ಲಿ 4 ಅಡಿ ಅಗಲದ ಬಾವಿ ತೋಡುವ ಕಾರ್ಯವನ್ನು ವಾರದ ಹಿಂದೆ ಆರಂಭಿಸಿದ್ದಾರೆ. ಪ್ರತಿದಿನ ಅವರು ಒಂದೂವರೆ ಅಡಿ ಆಳವನ್ನು ಅಗೆಯುತ್ತಾರೆ. ಹಾರೆ, ಗುದ್ದಲಿ, ಬುಟ್ಟಿ ಮತ್ತು ಹಗ್ಗದಂತಹ ಮೂಲಭೂತ ಸಾಧನಗಳ ಸಹಾಯದಿಂದ ಹತ್ತಾರು ಬುಟ್ಟಿ ಮಣ್ಣನ್ನು ಒಬ್ಬರೇ ಶ್ರಮದಿಂದ ಹೊರಹಾಕುತ್ತಾರೆ.
"ನನ್ನ ತಾಯಿ ಪ್ರತಿದಿನ ಬೆಳಗ್ಗೆ 7.30 ಕ್ಕೆ ಕೆಲಸಕ್ಕೆ ಹೋಗುತ್ತಾರೆ. ಮಧ್ಯಾಹ್ನ 12 ಗಂಟೆಗೆ ಹಿಂತಿರುಗುತ್ತಾರೆ. ಸ್ವಲ್ಪ ವಿಶ್ರಾಂತಿ ಮಾಡಿ ಮತ್ತೆ ಅವರು 3 ಗಂಟೆಗೆ ಹೋಗಿ ಸಂಜೆ 6 ಗಂಟೆಗೆ ಹಿಂತಿರುಗುತ್ತಾರೆ" ಎಂದು ಗೌರಿ ನಾಯ್ಕ್ ಅವರ ಮಗ ವಿನಯ್ ನಾಯ್ಕ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿದೆ.

ಗಣೇಶ್ ನಗರದಲ್ಲಿ ನೀರಿನ ಕೊರತೆಯು ವಿಶೇಷವಾಗಿ ಅಂಗನವಾಡಿ ಮಕ್ಕಳ ಕುಡಿವ ನೀರಿಗಾಗಿ ಪರದಾಡುತ್ತಿರುವುದನ್ನು ನೋಡಿದ ಮೇಲೆ ಬಾವಿ ತೋಡಬೇಕು ಎನ್ನಿಸಿತು. ಒಂದು ತಿಂಗಳೊಳಗೆ ಬಾವಿಯನ್ನು ಪೂರ್ಣಗೊಳಿಸಬೇಕು ಎಂದು ಗೌರಿ ನಾಯ್ಕ್ ಹೇಳಿದ್ದಾರೆ. ಇನ್ನು, ಈಗಾಗಲೇ 2017 ಮತ್ತು 2018 ರಲ್ಲಿ ಎರಡು ಬಾವಿಗಳನ್ನು ತೋಡಿದ್ದಾರೆ.
ಈ ಅಂಗನವಾಡಿ ಕೇಂದ್ರದಲ್ಲಿ ಸುಮಾರು 15 ಮಕ್ಕಳಿಗೆ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಅಗತ್ಯ ಆರೈಕೆ ಮತ್ತು ಆರಂಭಿಕ ಶಿಕ್ಷಣವನ್ನು ಒದಗಿಸುತ್ತದೆ. ಆದರೆ, ನಿರಂತರ ನೀರಿನ ಕೊರತೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಹುತಗಾರ ಗ್ರಾಮ ಪಂಚಾಯಿತಿ ಎರಡು ದಿನಕ್ಕೊಮ್ಮೆ ಮಾತ್ರ ನೀರು ಪೂರೈಸುತ್ತಿದೆ. ಇದರ ಹೊರತಾಗಿಯೂ, ಮಕ್ಕಳು ಇನ್ನೂ ಕುಡಿಯುವ ನೀರಿಗಾಗಿ ಹೊರಗಿನ ಬಾವಿಯಿಂದ ತಂದ ನೀರನ್ನು ಅವಲಂಬಿಸಿದ್ದಾರೆ.
ಅಡಿಕೆಗಾಗಿ ಬಾವಿ ತೆಗೆದಿರುವ ಗೌರಿ ನಾಯ್ಕ್
"ಅಡಿಕೆ ಬೆಳೆಗೆ ನೀರುಣಿಸಲು ನನ್ನ ಮನೆಯ ಸಮೀಪ 65 ಅಡಿ ಆಳದ ಬಾವಿ ತೋಡಿದ್ದೇನೆ. ನನ್ನ ಸಣ್ಣ ಕೃಷಿ ಭೂಮಿಗೆ ನಾವು ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಮೂರು ತಿಂಗಳಲ್ಲಿ ಬಾವಿ ತೋಡಲು ನಿರ್ಧರಿಸಿ ಯಶಸ್ವಿಯಾದೆ. ನನ್ನ ಜಮೀನಿನಲ್ಲಿ 40 ಅಡಿ ಆಳದ ಮತ್ತೊಂದು ಬಾವಿ ತೋಡಿದ್ದೇನೆ. ಗ್ರಾಮ ಪಂಚಾಯಿತಿಯಿಂದ ಎರಡು ದಿನಕ್ಕೊಮ್ಮೆ ಮಾತ್ರ ನೀರು ಪೂರೈಕೆಯಾಗುವುದರಿಂದ ಬೇಸಿಗೆ ಕಾಲದಲ್ಲಿ ಅಂಗನವಾಡಿಗಳಿಗೆ ನೀರಿನ ಕೊರತೆ ಎದುರಾಗಿದೆ ಎಂದು ತಿಳಿಯಿತು. ನನಗೆ ಈ ಕೆಲಸದಿಂದ ತೃಪ್ತಿ ಸಿಗುತ್ತದೆ. ಆದ್ದರಿಂದ ನಾನು ಯಾರ ಸಹಾಯವನ್ನೂ ಕೇಳಲಿಲ್ಲ" ಎಂದು ಗೌರಿ ನಾಯ್ಕ್ ಹೇಳಿದ್ದಾರೆ.












Click it and Unblock the Notifications