ಚುನಾವಣಾ ಫಲಿತಾಂಶ, ಜೆಡಿಎಸ್ ಪ್ರತಿಕ್ರಿಯೆ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 23 : ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆ ಆಗಿದೆ. ಆದರೆ, ಈ ಚುನಾವಣೆ 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಒಂದು ಶಕ್ತಿಯಾಗಿ ಹೊರಹೊಮ್ಮುವ ಸೂಚನೆಯನ್ನು ನೀಡಿದೆ ಎಂದು ಜೆಡಿಎಸ್ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದೆ.

ಚುನಾವಣೆಗಳ ನಂತರವೂ ಪಕ್ಷ ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿಯುವಲ್ಲಿ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಹೋರಾಟ ಮುಂದುವರೆಸಲಿದೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [LIVE: ಜಿಲ್ಲಾ ಪಂಚಾಯಿತಿ ಚುನಾವಣಾ ಫಲಿತಾಂಶ]

jds

2011ರ ಚುನಾವಣೆಗೆ ಹೋಲಿಕೆ ಮಾಡಿದರೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶದಲ್ಲಿ ಒಟ್ಟಾರೆ ಸ್ಥಾನಗಳಲ್ಲಿ ಕೇವಲ ಶೇ.10ರಷ್ಟು ಹಿನ್ನಡೆಯಾಗಿದೆ. ಆದರೆ, ಬಹುತೇಕ ಕಡೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದರ ಮೂಲಕ 2018ರ ವಿಧಾನಸಭಾ ಚುನಾವಣೆಗೆ ನಮ್ಮ ಪಕ್ಷವು ಒಂದು ಶಕ್ತಿಯಾಗಿ ಹೊರಹೊಮ್ಮುವ ಸೂಚನೆಯನ್ನು ನೀಡಿರುತ್ತಾರೆ ಎಂದು ಹೇಳಿದ್ದಾರೆ. [ತಾಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ]

ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿದೆ. ನಮ್ಮ ಪಕ್ಷವು ಯಾವುದೇ ರಾಜಕೀಯ ಅಧಿಕಾರವನ್ನು ಹೊಂದಿಲ್ಲ. ಆದ್ದರಿಂದ, ಅಭ್ಯರ್ಥಿಗಳಿಗೆ ಸಂಪನ್ಮೂಲಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ಚುನಾವಣೆಯಲ್ಲಿ ಗೆದ್ದವರು ಬಿದ್ದವರು, ಎಲ್ಲರೂ ನಮ್ಮವರೇ!]

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡರ ಆರೋಗ್ಯದಲ್ಲಿ ತೊಂದರೆ ಉಂಟಾಯಿತು. ಆದ್ದರಿಂದ ಎಚ್.ಡಿ. ಕುಮಾರಸ್ವಾಮಿ ಅವರು, ವಿಶ್ರಾಂತಿ ರಹಿತವಾಗಿ ದುಡಿಯಬೇಕಾಯಿತು. ಇದರಿಂದಾಗಿ ವ್ಯವಸ್ಥಿತವಾದ ಪ್ರಚಾರದ ಕೊರತೆಯುಂಟಾಗಿ ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಸಾಧ್ಯವಾಗಿಲ್ಲ.

ತುಮಕೂರು ಜಿಲ್ಲೆಯಲ್ಲಿ ನಮ್ಮ ಪಕ್ಷದ ಶಾಸಕರ ಹೊಂದಾಣಿಕೆಯ ಕೊರತೆಯಿಂದ ಜಿಲ್ಲಾ ಪಂಚಾಯತಿ ಕೈತಪ್ಪಿರುತ್ತದೆ. ಮೈಸೂರಿನಲ್ಲಿ ಇನ್ನೂ ಹೆಚ್ಚಿನ ಸ್ಥಾನ ಗಳಿಸಲು ಅವಕಾಶವಿದ್ದರೂ ಅದು ಸಾಧ್ಯವಾಗಿಲ್ಲ. ಇಂತಹ ಸಣ್ಣ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಪಕ್ಷದ ಎಲ್ಲಾ ನಾಯಕರು ಸಂಘಟಿತವಾಗಿ ರಾಜ್ಯ ಪ್ರವಾಸ ಮಾಡುವ ಮೂಲಕ ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಅಣಿಗೊಳಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮತ್ತು ಹಗರಣಗಳನ್ನು ಎತ್ತಿಹಿಡಿಯುವಲ್ಲಿ ಕುಮಾರಸ್ವಾಮಿಯವರ ನಾಯಕತ್ವದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿರುವ ರಮೇಶ್ ಬಾಬು ಅವರು, ಚುನಾವಣೆಯಲ್ಲಿ ಪಕ್ಷಕ್ಕೆ ಮತ ನೀಡಿದ ಹಾಗೂ ಬೆಂಬಲ ನೀಡಿದ ಎಲ್ಲರಿಗೂ ನಮ್ಮ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Janata Dal (Secular) thanks the voters of state for supporting party in Taluk and Zilla panchayat election 2016.
Please Wait while comments are loading...