ಕೊನೆಗೂ ಈ ವಿಷಯಕ್ಕೆ ಕ್ಷಮೆ ಕೇಳಿದ ಜಮೀರ್ ಅಹ್ಮದ್ ಖಾನ್
ಕೊನೆಗೂ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಹಗರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಜಮೀರ್ ಅವರು ಇದು ರಾಜಕೀಯ ಪ್ರೇರಿತ ಜಡ್ಜ್ ಮೆಂಟ್ ಎಂದು ಹೇಳಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳು ಸಹ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದೀಗ ಜಮೀರ್ ಅವರು ಕ್ಷಮಾಪಣೆ ಕೇಳಿದ್ದಾರೆ.
ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ರಾಜಕೀಯ ಪ್ರೇರಿತ ಎನ್ನುವ ಅರ್ಥದಲ್ಲಿ ನಾನು ಹೇಳಿಲ್ಲ. ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವ ಇದೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಿದ್ದೇವೆ. ಹೈಕೋರ್ಟ್ ತೀರ್ಪು ಬಂದ ನಂತರ ಪ್ರತಿಪಕ್ಷಗಳು ಇದನ್ನೇ ರಾಜಕೀಯ ಮಾಡುತ್ತಿವೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ನನ್ನ ಅಭಿಪ್ರಾಯ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ತನಿಖೆ ನಡೆಯಲಿ. ಕಾನೂನು ಹೋರಾಟ ಎದುರಿಸುತ್ತೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್, ಶಾಸಕರು, ಸಚಿವರು ಮುಖ್ಯಮಂತ್ರಿ ಜತೆ ಇದ್ದೇವೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದೆ ಎಂದಿದ್ದಾರೆ.
ಇದನ್ನು ಹೊರತುಪಡಿಸಿ ನ್ಯಾಯಾಲಯದ ತೀರ್ಪು ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸಲಿಲ್ಲ. ರಾಜಕೀಯ ಪ್ರೇರಿತ ಆರೋಪ ಇದಾಗಿದೆ ಎಂಬುದೇ ನನ್ನ ವಾದವಾಗಿದೆ. ನನಗೆ ಎಂದಿಗೂ ನ್ಯಾಯಾಲಯದ ಬಗ್ಗೆ ಅತ್ಯಂತ ಗೌರವ ಇದೆ. ಒಂದೊಮ್ಮೆ ಬಾಯಿ ತಪ್ಪಿ ಹೇಳಿದ್ದರೆ ಕ್ಷಮೆ ಯಾಚಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.
ಜಮೀರ್ ಹೇಳಿದ್ದೇನು ?
ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದು ಸರಿ ಇದೆ. ತನಿಖೆ ನಡೆಯಬೇಕು ಎಂದು ತೀರ್ಪು ಪ್ರಕಟವಾಗಿದೆ. ಈ ತೀರ್ಪಿನ ಬಗ್ಗೆ ಮಾತನಾಡುವಾಗ ವಸತಿ ಸಚಿವ ಜಮೀರ್ ಅವರು ಇದು ಪೊಲಿಟಿಕಲ್ ಜಡ್ಜ್ ಮೆಂಟ್ ಎಂದು ಹೇಳಿದ್ದರು. ಜಮೀರ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಜ್ಯದ ಸಚಿವರೊಬ್ಬರು ಕರ್ನಾಟಕದ ಹೈಕೋರ್ಟ್‌ನ ತೀರ್ಪಿನ ಬಗ್ಗೆ ಈ ರೀತಿ ಮಾತನಾಡಬಾರದು ಎನ್ನುವ ಅಭಿಪ್ರಾಯ ಕೇಳಿ ಬಂದಿತ್ತು. ಇದೀಗ ಈ ಸಂಬಂಧ ಜಮೀರ್ ಅವರು ಕ್ಷಮಾಪಣೆ ಕೇಳಿದ್ದಾರೆ.
ಯತ್ನಾಳ ಸಹ ಕಿಡಿಕಾರಿದ್ದರು
ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಅವರು ಸಹ ಕಿಡಿಕಾರಿದ್ದರು. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದ ಅವರು, ತಮಗೆ ಅರಿವಿಲ್ಲದ, ಅರ್ಥ ಆಗದ ವಿಚಾರಗಳ ಬಗ್ಗೆ ಮಾತನಾಡೋದು ಮೂರ್ಖತನ. ಇವರು (ಜಮೀರ್) ಮಾಡಿದ್ದು ಸಹ ಅದೇ...ವಿಜ್ಞಾನ, ಸಮಾಜ, ಗಣಿತ, ಭೂಗೋಳ, ಕನಿಷ್ಠ ಕಾನೂನಿನ ಅರಿವು ಏಕೆ ಕಲಿಯಬೇಕು ಹಾಗೂ ಅಧ್ಯಯನ ಮಾಡಬೇಕು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದಿದ್ದರು.












Click it and Unblock the Notifications