ಶಿವಾಜಿ ಜಯಂತಿ ಆಚರಣೆ: ವೈಎಸ್‌ವಿ ದತ್ತಾ ಅಸಮಾಧಾನ
ಬೆಂಗಳೂರು, ಫೆಬ್ರವರಿ 19: ರಾಜ್ಯ ಸರ್ಕಾರವು ಶಿವಾಜಿ ಮಹಾರಾಜರ ಜಯಂತಿ ಆಚರಿಸುತ್ತಿರುವುದನ್ನು ಜೆಡಿಎಸ್ ಮುಖಂಡ ವೈಎಸ್‌ವಿ ದತ್ತಾ ತೀವ್ರವಾಗಿ ಖಂಡಿಸಿದ್ದಾರೆ. ಕರ್ನಾಟಕಕ್ಕೆ ಯಾವುದೇ ಸಂಬಂಧವಿಲ್ಲದ ಮತ್ತು ಯಾವ ರೀತಿಯೂ ಕೊಡುಗೆ ನೀಡದ ಮಹಾರಾಷ್ಟ್ರದ ರಾಜನ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಆದರೆ ಕರ್ನಾಟಕದವರೇ ಆದ ಶ್ರೀಕೃಷ್ಣ ದೇವರಾಯ, ಇಮ್ಮಡಿ ಪುಲಿಕೇಶಿ ಅವರಂತಹ ಅರಸರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸೌಜನ್ಯಕ್ಕೂ ನೆನೆಯುತ್ತಿಲ್ಲ ಎಂದು ದತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಶ್ರೀ ಕೃಷ್ಣದೇವರಾಯ, ಇಮ್ಮಡಿ ಪುಲಿಕೇಶಿ ಅಂತಹ ಅರಸರನ್ನು ಸೌಜನ್ಯಕ್ಕೂ ನೆನೆಯದ ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲದ ಕನ್ನಡಕ್ಕೆ ಎಳ್ಳಷ್ಟೂ ಕೊಡುಗೆ ನೀಡದ ಮಹಾರಾಷ್ಟ್ರದ ರಾಜನ ಜನ್ಮದಿನವನ್ನು ಆಚರಣೆ ಮಾಡುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಎಂಬ ಸಣ್ಣ ಕಲ್ಪನೆ ರಾಜ್ಯ ಸರ್ಕಾರಕ್ಕೆ ಇಲ್ಲವೇ.?' ಎಂದು ವೈಎಸ್‌ವಿ ದತ್ತಾ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.
ಶಿವಾಜಿ ಪುತ್ಥಳಿ ಸ್ಥಾಪನೆಗೆ ಶಾಸಕ ಸತೀಶ್ ಜಾರಕಿಹೊಳಿ ಭೂಮಿ ಪೂಜೆ
'ಕನ್ನಡ ರಾಜ್ಯದ ಮೇಲೆ ದಂಡೆತ್ತಿ ಬಂದು ಕನ್ನಡಿಗರನ್ನು ಕಾಡಿದ ಕಡೆಗೆ ಕನ್ನಡದ ವೀರವನಿತೆಯ ಬಳಿ ಆಶ್ರಯ ಪಡೆದಿದ್ದವನನ್ನು ರಾಜ್ಯ ಸರ್ಕಾರ ಈ ರೀತಿ ಮೆರೆಸುತ್ತಿರುವುದು ಸಮಸ್ತ ಕನ್ನಡ ಕುಲ ಕೋಟಿಗೆ ಮಾಡುತ್ತಿರುವ ಅವಮಾನವೇ ಸರಿ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶುಕ್ರವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವ ಅರವಿಂದ್ ಲಿಂಬಾವಳಿ ಮುಂತಾದವರು ಭಾಗವಹಿಸಲಿದ್ದಾರೆ.
'ಭಾರತಮಾತೆಯ ಹೆಮ್ಮೆಯ ಪುತ್ರ, ಧೈರ್ಯ ಪರಾಕ್ರಮಗಳ ಸಾಕಾರಮೂರ್ತಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ಅವರ ದೇಶಭಕ್ತಿ, ಹೋರಾಟ, ಸಾಧನೆಗಳು, ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿದಾಯಕವಾಗಿದೆ' ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.