ಯೋಗೇಶ್‌ ಗೌಡ ಹತ್ಯೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ, ಬಿಜೆಪಿ ನಾಯಕ ಯೋಗೇಶ್‌ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಈ ಮಹತ್ವದ ತೀರ್ಪು ನೀಡಿದ್ದು, ಜೊತೆಗೆ ಸಂತ್ರಸ್ತ ಕುಟುಂಬಕ್ಕೆ 16 ಲಕ್ಷ ರೂಪಾಯಿ ಪರಿಹಾರ ಪಾವತಿಸುವಂತೆ ದಂಡ ವಿಧಿಸಿದೆ. ಹತ್ತು ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಈ ತೀರ್ಪು ಹೊರಬಿದ್ದಿದೆ.

ಏಪ್ರಿಲ್ 15ರಂದೇ ವಿನಯ್ ಕುಲಕರ್ಣಿ ಹಾಗೂ ಇತರ 16 ಮಂದಿಯನ್ನು ದೋಷಿಗಳು ಎಂದು ನ್ಯಾಯಾಲಯ ಘೋಷಿಸಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 17ಕ್ಕೆ ಕಾಯ್ದಿರಿಸಲಾಗಿತ್ತು. ವಾದ-ಪ್ರತಿವಾದದ ವೇಳೆ ಸಿಬಿಐ ಪರ ವಕೀಲರು ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ನೀಡುವಂತೆ ಪಟ್ಟು ಹಿಡಿದಿದ್ದರು. ವಿನಯ್ ಕುಲಕರ್ಣಿ ಪರ ವಕೀಲರು, ಅವರ ಸಮಾಜ ಸೇವೆ ಮತ್ತು ರಾಜಕೀಯ ಹಿನ್ನೆಲೆ ಪರಿಗಣಿಸಿ ಕನಿಷ್ಠ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದರೂ, ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆಯನ್ನೇ ಪ್ರಕಟಿಸಿದೆ.

Vinay Kulkarni

ಏನಿದು ಪ್ರಕರಣ?

2016ರ ಜೂನ್‌ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ಜಿಮ್‌ನಲ್ಲಿ ಯೋಗೇಶ್‌ ಗೌಡ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಈ ಪ್ರಕರಣವನ್ನು ಸ್ಥಳೀಯ ಧಾರವಾಡ ಉಪನಗರ ಪೊಲೀಸರು ತನಿಖೆ ನಡೆಸಿ, ಆಸ್ತಿ ವಿವಾದ ಎಂದು 6 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಮತ್ತು ಕುಟುಂಬಸ್ಥರು ಇದೊಂದು ರಾಜಕೀಯ ಪ್ರೇರಿತ ಕೊಲೆ ಎಂದು ಆರೋಪಿಸಿ, ಅಂದಿನ ಸಚಿವರಾಗಿದ್ದ ವಿನಯ್ ಕುಲಕರ್ಣಿ ಅವರ ಕೈವಾಡದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ 2019ರಲ್ಲಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವಹಿಸಿತ್ತು.

ಸಿಬಿಐ ತನಿಖೆಯಿಂದ ಬಯಲಾದ ಸತ್ಯ

ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದಾಗ, ಈ ಹತ್ಯೆಯಲ್ಲಿ ವಿನಯ್ ಕುಲಕರ್ಣಿ ಅವರ ಒಳಸಂಚು ಇರುವುದು ದೃಢಪಟ್ಟಿತ್ತು. 2020ರ ನವೆಂಬರ್‌ನಲ್ಲಿ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿತ್ತು. ಒಟ್ಟು 21 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಇದರಲ್ಲಿ ಇಬ್ಬರು ಅಪ್ರೂವರ್ ಆಗಿದ್ದರು, ಹಾಗೂ ಮತ್ತಿಬ್ಬರು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದರು. ಉಳಿದ 17 ಜನರನ್ನು ನ್ಯಾಯಾಲಯ ಅಪರಾಧಿಗಳೆಂದು ನಿರ್ಣಯಿಸಿತ್ತು. ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 120B (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಇವರು ದೋಷಿಗಳಾಗಿದ್ದಾರೆ.

ಸಿಬಿಐ ವಾದವೇನಿತ್ತು?

ಶಿಕ್ಷೆ ಪ್ರಮಾಣದ ಕುರಿತ ವಿಚಾರಣೆಯ ವೇಳೆ ಸಿಬಿಐ ಪರ ವಕೀಲರು ಕಠಿಣ ಶಿಕ್ಷೆಗೆ ಪಟ್ಟು ಹಿಡಿದಿದ್ದರು. "ಇದೊಂದು 'ವಿರಳಾತಿ ವಿರಳ' ಪ್ರಕರಣ. ಆರೋಪಿಗಳು ವ್ಯವಸ್ಥಿತವಾಗಿ ಪಿತೂರಿ ನಡೆಸಿ, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿದ್ದಾರೆ. ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಸಾಕ್ಷ್ಯ ನಾಶಪಡಿಸುವ ಯತ್ನವೂ ನಡೆದಿದೆ. ಹೀಗಾಗಿ ಅಪರಾಧಿಗಳಿಗೆ ಯಾವುದೇ ವಿನಾಯಿತಿ ನೀಡದೆ, ಕ್ಷಮಾದಾನ ರಹಿತ ಜೀವಾವಧಿ ಶಿಕ್ಷೆ ವಿಧಿಸಬೇಕು" ಎಂದು ಸಿಬಿಐ ಪರ ವಕೀಲರು ಬಲವಾಗಿ ವಾದಿಸಿದ್ದರು.

ಶಾಸಕ ಸ್ಥಾನಕ್ಕೆ ಕುತ್ತು

ಜನಪ್ರತಿನಿಧಿಗಳ ಕಾಯ್ದೆಯ ಅನ್ವಯ, ಯಾವುದೇ ಹಾಲಿ ಶಾಸಕ ಅಥವಾ ಸಂಸದನಿಗೆ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆಯಾದರೆ, ಅವರು ತಕ್ಷಣವೇ ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ಇದೀಗ ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಕಟವಾಗಿರುವುದರಿಂದ, ಅವರು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವುದು ಖಚಿತವಾಗಿದೆ. ಕರ್ನಾಟಕ ರಾಜಕೀಯ ವಲಯದಲ್ಲಿ ಈ ತೀರ್ಪು ಭಾರೀ ಸಂಚಲನ ಮೂಡಿಸಿದ್ದು, ಧಾರವಾಡದಲ್ಲಿ ಶೀಘ್ರದಲ್ಲೇ ಉಪಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+