ಸಾಲಮನ್ನಾ: ಮೀನುಗಾರರಿಗೆ ಬಂಪರ್ ಖುಷಿ ನೀಡಿದ ಯಡಿಯೂರಪ್ಪ
Recommended Video
ಬೆಂಗಳೂರು, ಜುಲೈ 29: ಅಧಿಕಾರಕ್ಕೆ ಬಂದ ದಿನವೇ ನೇಕಾರರ ಸಾಲಮನ್ನಾ ಮಾಡುವ ಮೂಲಕ ಮಹತ್ವದ ಘೋಷಣೆ ಮಾಡಿದ್ದ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕರಾವಳಿ ಭಾಗದ ಮೀನುಗಾರರಿಗೆ ಸಂತಸದ ಸುದ್ದಿ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಅವರು ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇರಿಸಿದ್ದಾರೆ.
ಕರಾವಳಿ ಭಾಗದ ಮೂರು ಜಿಲ್ಲೆಗಳ ಮೀನುಗಾರರಿಗೆ ಯಡಿಯೂರಪ್ಪ ಅವರು ಸಾಲಮನ್ನಾದ ಸಿಹಿ ಸುದ್ದಿ ನೀಡಿದ್ದಾರೆ. ಈ ಮೂರು ಜಿಲ್ಲೆಗಳ ಮೀನುಗಾರರ ವಾಣಿಜ್ಯ ಮತ್ತು ಪ್ರಾದೇಶಿಕ ಬ್ಯಾಂಕುಗಳಲ್ಲಿ ಮಾಡಿರುವ ಒಂದು ಹಂತದವರೆಗಿನ ಸಾಲವನ್ನು ಮನ್ನಾ ಮಾಡುವ ಕುರಿತು ಬಿ.ಎಸ್ ಯಡಿಯೂರಪ್ಪ ಅವರು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯಭಾಸ್ಕರ್ ಮತ್ತು ಇತರೆ ಅಧಿಕಾರಿಗಳೊಂದಿಗೆ ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸಿದ ಜುಲೈ 26ರಂದೇ ಸಂಪುಟ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಕರಾವಳಿ ಜಿಲ್ಲೆಗಳ ಮೀನುಗಾರರ ಸಾಲಮನ್ನಾ ಕುರಿತು ತೀರ್ಮಾನ ತೆಗೆದುಕೊಂಡು ಸೂಚನೆ ನೀಡಲಾಗಿದೆ.

60 ಕೋಟಿ ರೂಪಾಯಿ ಸಾಲ
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿನ 23,507 ಮೀನುಗಾರರು 2017-18 ಮತ್ತು 2018-19 ವಾಣಿಜ್ಯ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಂದ ಸುಮಾರು 60 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಆ ಸಾಲವನ್ನು ಮನ್ನಾ ಮಾಡಲು ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.

50 ಸಾವಿರದವರೆಗಿನ ಸಾಲಮನ್ನಾ
ಕಳೆದ ಎರಡು ವರ್ಷಗಳಲ್ಲಿ ಮೀನುಗಾರರು ಒಟ್ಟು 60 ಕೋಟಿ ರೂ. ಸಾಲ ಮನ್ನಾ ಮಾಡಲು ಆದೇಶಿಸಲಾಗಿದೆ. ಇದುವರೆಗಿನ 50 ಸಾವಿರ ರೂಪಾಯಿ ವರೆಗಿನ ಸಾಲಮನ್ನಾ ಮಾಡುವ ಆದೇಶಕ್ಕೆ ಸಹಿ ಹಾಕುವ ಮೂಲಕ ಯಡಿಯೂರಪ್ಪ ಅವರು ಮೀನುಗಾರರಿಗೆ ಮುಂಗಾರಿನ ಉಡುಗೊರೆ ನೀಡಿದ್ದಾರೆ.

ನೇಕಾರರ ಸಾಲಮನ್ನಾ ಘೋಷಣೆ
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದು ಗಂಟೆಯ ಅವಧಿಯಲ್ಲಿಯೇ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡುವ ಮೂಲಕ ಯಡಿಯೂರಪ್ಪ ಅವರು ಭರ್ಜರಿ ಉಡುಗೊರೆ ನೀಡಿದ್ದರು. ಸರ್ಕಾರದ ಕಾರ್ಯದರ್ಶಿ ಅವರೊಂದಿಗೆ ಸಂಪುಟ ಸಭೆ ನಡೆಸಿದ್ದ ಅವರು, ನೂರು ಕೋಟಿ ರೂಪಾಯಿಗೂ ಹೆಚ್ಚಿರುವ ನೇಕಾರರ ಸಾಲವನ್ನು ಮನ್ನಾಮಾಡಿದ್ದರು.

ರೈತರಿಗೆ ನಾಲ್ಕು ಸಾವಿರ
ನೇಕಾರರ ಸಾಲಮನ್ನಾದೊಂದಿಗೆ ರೈತರಿಗೂ ಯಡಿಯೂರಪ್ಪ ಗಿಫ್ಟ್ ನೀಡಿದ್ದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ ನೀಡುತ್ತಿರುವ ವಾರ್ಷಿಕ ಆರು ಸಾವಿರ ರೂಪಾಯಿ ಜತೆಗೆ ರಾಜ್ಯ ಸರ್ಕಾರದಿಂದ ನಾಲ್ಕು ಸಾವಿರ ರೂಪಾಯಿ ನೀಡುವುದಾಗಿ ಯಡಿಯೂರಪ್ಪ ಘೋಷಿಸಿದ್ದಾರೆ. ಕೇಂದ್ರದಿಂದ ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರೂಪಾಯಿ ಸಿಗುತ್ತಿದ್ದು, ರಾಜ್ಯ ಸರ್ಕಾರವು ಎರಡು ಕಂತುಗಳಲ್ಲಿ ತಲಾ ಎರಡು ಸಾವಿರ ರೂಪಾಯಿ ಹಣವನ್ನು ರೈತರ ಖಾತೆಗೆ ಜಮಾ ಮಾಡಲಿದೆ. ಇದರಿಂದ ರಾಜ್ಯ ರೈತರಿಗೆ ವಾರ್ಷಿಕ ಹತ್ತು ಸಾವಿರ ರೂಪಾಯಿ ಸಿಗಲಿದೆ.












Click it and Unblock the Notifications