ಲಾಕ್‌ಡೌನ್ ನಿಯಮ ಸಡಿಲಗೊಳಿಸಿದ ಕೆಲವೇ ಗಂಟೆಯಲ್ಲಿ ಬಿಎಸ್ವೈ ಯೂಟರ್ನ್!
ಬೆಂಗಳೂರು, ಏಪ್ರಿಲ್ 18: ಏಪ್ರಿಲ್ 20ರಿಂದ ಕೊರೊನಾ ಲಾಕ್‌ಡೌನ್ ನಿಯಮ ಸಡಿಲಗೊಳಿಸಿ ಹೊರಡಿಸಿದ್ದ ಆದೇಶವನ್ನು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೆಲವೇ ಗಂಟೆಯಲ್ಲಿ ಮಾರ್ಪಾಡುಗೊಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿಗಳು, "ಸರ್ಕಾರದ ನಿರ್ಣಯವನ್ನ ಪುನರ್ ಪರಿಶೀಲಿಸಿ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ" ಎಂದು ಪ್ರಕಟಿಸಿದ್ದಾರೆ.
"ಲಾಕ್‌ಡೌನ್ ಯಥಾಸ್ಥಿತಿ ಮುಂದುವರೆಸಲು ತೀರ್ಮಾನ ಮಾಡಲಾಗಿದೆ. ಜನಾಭಿಪ್ರಾಯದ ಹಿನ್ನಲೆಯಲ್ಲಿ, ಸರಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ" ಎಂದು ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

"ದ್ವಿಚಕ್ರ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆ ಎಂಬ ನಿರ್ಧಾರವನ್ನು ಪುನರ್ ಪರಿಶೀಲಿಸಿ, ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಲಾಕ್‌ಡೌನ್ ಸಮಯದಲ್ಲಿದ್ದಂತೇ ಯಥಾಸ್ಥಿತಿಯನ್ನು ಮುಂದುವರಿಸಲಾಗುತ್ತದೆ" ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
"ಐಟಿ-ಬಿಟಿ ಕ್ಷೇತ್ರದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕೊಟ್ಟು ಉಳಿದಂತೆ ಮನೆಯಿಂದಲೇ ಕೆಲಸ (ವರ್ಕ್ ಫ್ರಂ ಹೋಂ) ಮಾಡುವ ನೀತಿಯನ್ನು ಮುಂದುವರಿಸಲಾಗುವುದು" ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
'ಏಪ್ರಿಲ್ 20ನೇ ತಾರೀಕಿನ ನಂತರ ದ್ವಿಚಕ್ರ ವಾಹನ ಓಡಾಡುವುದಕ್ಕೆ ಬೆಂಗಳೂರಿನಲ್ಲಿ ಮಾತ್ರ ಅವಕಾಶ ನೀಡಲಾಗುವುದು. ಬೆಂಗಳೂರು ಬಿಟ್ಟು ಹೊರಗಡೆ ದ್ವಿಚಕ್ರ ವಾಹನ ಸವಾರರು ಹೊಗುವಂತಿಲ್ಲ' ಎನ್ನುವ ನಿರ್ಧಾರವನ್ನು ಬಿಎಸ್ವೈ ಸರಕಾರ ತೆಗೆದುಕೊಂಡಿತ್ತು.












Click it and Unblock the Notifications