ಬಿಎಸ್ವೈ ಕರೆತರುವ ಯತ್ನ ಮತ್ತೆ ಆರಂಭಿಸಿದ ಬಿಜೆಪಿ!
ಹುಬ್ಬಳ್ಳಿ, ಡಿ. 2 : ಮಾಜಿ ಮುಖ್ಯಮಂತ್ರಿ ಮತ್ತು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯಿಂದ ದೂರ ಸರಿಯುತ್ತಿರುವಾಗಲೇ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಮತ್ತೆ ಆರಂಭವಾಗಿದೆ. ಡಿ.4 ಅಥವಾ 5ರೊಳಗೆ ಯಡಿಯೂರಪ್ಪ ಬಿಜೆಪಿಗೆ ಮರಳು ಕುರಿತು ಅಂತಿಮ ನಿರ್ಧಾರ ಪ್ರಕಟವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಭಾನುವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.4 ಅಥವಾ ಡಿ.5ರಂದು ಬಿಜೆಪಿ ರಾಷ್ಟ್ರೀಯ ನಾಯಕರು ಸಭೆ ಸೇರಲಿದ್ದು, ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು. ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆತರಬೇಕೆಂದು ಬಿಜೆಪಿ ರಾಜ್ಯ ಘಟಕ ತೀರ್ಮಾನಿಸಿದೆ ಎಂದು ತಿಳಿಸಿದರು.

ಎನ್ ಡಿಎ ಅಂಗಪಕ್ಷವಾಗಿ ಕೆಜೆಪಿಯನ್ನು ಪರಿಗಣಿಸಿಲ್ಲ ಮತ್ತು ರಾಜ್ಯ ಬಿಜೆಪಿ ನಾಯಕರ ವರ್ತನೆಯಿಂದ ಬೇಸರಗೊಂಡ ಬಿ.ಎಸ್.ಯಡಿಯೂರಪ್ಪ ತೃತೀಯ ರಂಗದ ಜೊತೆ ಕೈ ಜೋಡಿಸುವ ಕುರಿತು ಚಿಂತನೆ ನಡೆಸಿದ್ದಾರೆ. ಇದರಿಂದ ಆತಂಕಗೊಂಡಿರುವ ಬಿಜೆಪಿ ನಾಯಕರು ಪಕ್ಷದ ವರಿಷ್ಠ ನಾಯಕರಿಗೆ ಯಡಿಯೂರಪ್ಪ ಕುರಿತು ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಆದ್ದರಿಂದ ಈ ವಾರ ಸಭೆ ಸೇರಲಿರುವ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. (ಬಿಜೆಪಿಯಿಂದ ಯಡಿಯೂರಪ್ಪ ದೂರವಾಗಲು 7 ಕಾರಣಗಳು)
ಮಾಜಿ ಉಪ ಮುಖ್ಯಮಂತ್ರಿ ಮತ್ತು ಯಡಿಯೂರಪ್ಪ ಅವರ ಆಪ್ತ ಗೆಳೆಯ ಕೆ.ಎಸ್.ಈಶ್ವರಪ್ಪ ಸಹ ಯಡಿಯೂರಪ್ಪ ಬಿಜೆಪಿಗೆ ಮರಳಲಿದ್ದಾರೆ ಎಂದು ಹೇಳಿದ್ದಾರೆ. ಒಂದು ಕಾಲದಲ್ಲಿ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ವಿ.ಸೋಮಣ್ಣ ಸಹ ಡಿ.10ರೊಳಗೆ ಯಡಿಯೂರಪ್ಪ ಬಿಜೆಪಿಗೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ಹಲವಾರು ಬಾರಿ ಸ್ಪಷ್ಟಪಡಿಸಿದ್ದಾರೆ.
ಈಶ್ವರಪ್ಪ ಮಾತುಕತೆ : ಬಿ.ಎಸ್.ಯಡಿಯೂರಪ್ಪ ಮತ್ತು ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಬಿ.ಶ್ರೀರಾಮುಲು ಅವರನ್ನು ಪಕ್ಷಕ್ಕೆ ಕರೆತರುವ ಜವಾಬ್ದಾರಿಯನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಹೆಗಲಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಒಂದು ಬಾರಿ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚೆ ನಡೆಸಿ ಬಂದಿರುವ ಈಶ್ವರಪ್ಪ ತಮ್ಮ ಪ್ರಯತ್ನ ಆರಂಭಿಸಿದ್ದಾರೆ. (ಬಿಎಸ್ವೈ ಶೀಘ್ರದಲ್ಲೇ ಬಿಜೆಪಿಗೆ : ಈಶ್ವರಪ್ಪ ಪುನರುಚ್ಚಾರ)
ಬಳ್ಳಾರಿಯಲ್ಲಿ ಶನಿವಾರ ಶ್ರೀರಾಮುಲು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಯಾವುದೇ ಷರತ್ತು ವಿಧಿಸದೆ ಪಕ್ಷಕ್ಕೆ ಬನ್ನಿ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸ್ಥಾನಮಾನಗಳ ಕುರಿತು ಚರ್ಚೆ ನಡೆಸೋಣ ಎಂದು ಈಶ್ವರಪ್ಪ ಶ್ರೀರಾಮುಲು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಶ್ರೀರಾಮುಲು ಅವರು ಇದಕ್ಕೆ ಅಸ್ತು ಎಂದಿದ್ದಾರೆ ಎಂದು ತಿಳಿದುಬಂದಿದೆ.
ಯಡಿಯೂರಪ್ಪ ಅವರನ್ನು ಕರೆತರಲು ಪಕ್ಷದ ವರಿಷ್ಠ ನಾಯಕರು ತೀರ್ಮಾನಿಸಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಮೂರುವರೆ ವರ್ಷಗಳ ಕಾಲ ಯಡಿಯೂರಪ್ಪ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಸದ್ಯ ರಾಜಕೀಯ ವೈಮನಸ್ಸಿನಿಂದ ಪಕ್ಷದಿಂದ ದೂರವಾಗಿದ್ದಾರೆ. ಶೀಘ್ರವೇ ಅವರು ಬಿಜೆಪಿಗೆ ಮರಳಲಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.


Click it and Unblock the Notifications
