ಅಮಿತ್ ಶಾಗೆ ಮಹತ್ವದ ವರದಿ ನೀಡಿದ ಯಡಿಯೂರಪ್ಪ!
Recommended Video
ನವದೆಹಲಿ, ಜೂನ್ 13 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಯಾದರು. ಲೋಕಸಭಾ ಚುನಾವಣೆ ಗೆಲುವಿನ ಕುರಿತು ಮಹತ್ವದ ವರದಿಯನ್ನು ನೀಡಿದರು.
ಅಮಿತ್ ಶಾ ಅಧ್ಯಕ್ಷತೆಯಲ್ಲಿ ಗುರುವಾರ ದೆಹಲಿಯಲ್ಲಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಯುತ್ತಿದೆ. ಕರ್ನಾಟಕದಿಂದ ಯಡಿಯೂರಪ್ಪ, ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಪಾಲ್ಗೊಂಡಿದ್ದಾರೆ.
ಲೋಕಸಭಾ ಚುನಾವಣೆ ಬಳಿಕ ಎಲ್ಲಾ ರಾಜ್ಯಗಳ ರಾಜ್ಯಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳ ಸಭೆಯಲ್ಲಿ ಅಮಿತ್ ಶಾ ನಡೆಸುತ್ತಿದ್ದಾರೆ. ತಮ್ಮ-ತಮ್ಮ ರಾಜ್ಯಗಳಲ್ಲಿ ಪಕ್ಷ ಸಂಘಟನೆಯನ್ನು ಹೇಗೆ ಮುಂದುವರೆಸಬೇಕು? ಎಂದು ಸೂಚನೆಗಳನ್ನು ನೀಡುತ್ತಿದ್ದಾರೆ.

ವರದಿ ಸಲ್ಲಿಕೆ : 2019ರ ಲೋಕಸಭಾ ಚುನಾವಣೆ ಬಗ್ಗೆ ಯಡಿಯೂರಪ್ಪ ಅವರು ಅಮಿತ್ ಶಾ ಅವರಿಗೆ ವರದಿ ಸಲ್ಲಿಸಿದರು. ಕರ್ನಾಟಕ 28 ಲೋಕಸಭಾ ಕ್ಷೇತ್ರದ ಪೈಕಿ 27 ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಬಿಜೆಪಿ 25ರಲ್ಲಿ ಜಯಗಳಿಸಿತ್ತು. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡಿತ್ತು, ಅವರು ಸಹ ಗೆಲುವು ಸಾಧಿಸಿದ್ದಾರೆ.
ಕರ್ನಾಟಕದ ಮೈತ್ರಿ ಸರ್ಕಾರದ ಕಿತ್ತಾಟ, ಮೈತ್ರಿಯಿಂದಾಗಿ ತಳ ಮಟ್ಟದ ಕಾರ್ಯಕರ್ತರು ಆಕ್ರೋಶಗೊಂಡಿರುವುದು ಬಿಜೆಪಿಗೆ ಸಹಾಯಕವಾಯಿತು. ಎರಡೂ ಪಕ್ಷಗಳ ವಿರುದ್ಧ ಅಸಮಾಧಾನಗೊಂಡಿರುವ ಜನರು ಬಿಜೆಪಿ ಬೆಂಬಲಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಲಾಭವಾಗಿದೆ. ಎಲ್ಲಾ ನಾಯಕರ ಶ್ರಮದ ಫಲವಾಗಿ ಹಿರಿಯ ಕಾಂಗ್ರೆಸ್ ನಾಯಕರನ್ನು ಸೋಲಿಸಲು ಸಾಧ್ಯವಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿಯನ್ನು ನೋಡಿದ ಅಮಿತ್ ಶಾ ಅವರು ಕರ್ನಾಟಕದಲ್ಲಿ ಶೇ 15ರಷ್ಟು ಸದಸ್ಯತ್ವ ಹೆಚ್ಚಿಸಲು ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 25 ಸೀಟು ಗೆದ್ದರೂ ಕರ್ನಾಟಕದಲ್ಲಿ ಬಿಜೆಪಿ ಪ್ರತಿಪಕ್ಷದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಆಡಳಿತವಿದೆ.












Click it and Unblock the Notifications