ಅಪ್ಪಮಗನನ್ನು ಟೀಕಿಸುವ ಭರದಲ್ಲಿ ಬಿಎಸ್ವೈ ಮಾಡಿದ ದೊಡ್ಡ ಎಡವಟ್ಟು
Recommended Video

ಒಂದು ವಾರದ ಕೆಳಗೆ ರಾಜೀನಾಮೆ ನೀಡುವ ಮುನ್ನ ಮಾಡಿದ ಭಾಷಣದ ವೇಳೆ ಯಡಿಯೂರಪ್ಪ ಹಲವು ಬಾರಿ ಭಾವೋದ್ವೇಗಕ್ಕೆ ಒಳಗಾಗಿದ್ದರು. ಶುಕ್ರವಾರ (ಮೇ 25) ವಿಶ್ವಾಸ ಗೊತ್ತುವಳಿಯ ವೇಳೆ ಮಾಡಿದ ಬಿಎಸ್ವೈ ಭಾಷಣದಲ್ಲಿ ವ್ಯಂಗ್ಯವೂ ಇತ್ತು, ಪ್ರಖರತೆಯೂ ಇತ್ತು.
ತಮ್ಮ ಭಾಷಣದುದ್ದಕ್ಕೂ ಅಲ್ಲಲ್ಲಿ ಸಿದ್ದರಾಮಯ್ಯ, ಎಚ್ ಕೆ ಪಾಟೀಲ್, ಡಿ ಕೆ ಶಿವಕುಮಾರ್ ಅವರನ್ನು ಕೆಣಕಿದ್ದನ್ನು ಬಿಟ್ಟರೆ, ಇಡೀ ಭಾಷಣ ಸಂಪೂರ್ಣವಾಗಿ ಅಪ್ಪಮಗನ ವಿರುದ್ದ ಟೀಕಾಪ್ರಹಾರಕ್ಕೆ ಬಿಎಸ್ವೈ ಬಳಸಿಕೊಂಡರು.
ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಅಪ್ಪಮಗ (ದೇವೇಗೌಡ್ರು, ಕುಮಾರಸ್ವಾಮಿ) ವಿರುದ್ದ ಬಿಎಸ್ವೈ ಕಿಡಿಕಾರುತ್ತಿದ್ದರೇ ಹೊರತು, ಜೆಡಿಎಸ್ ಪಕ್ಷದ ವಿರುದ್ದವಲ್ಲ. ತಮ್ಮ ಪಕ್ಷಕ್ಕೆ ಪ್ರಮುಖ ಎದುರಾಳಿಯಾಗಿರುವ ಕಾಂಗ್ರೆಸ್ ಪಕ್ಷದ ವಿರುದ್ದವೂ ಮಾತನಾಡಿಲ್ಲ, ಮಾತನಾಡುವುದೂ ಇಲ್ಲ ಎಂದರು.
ಇಲ್ಲೇ ಯಡಿಯೂರಪ್ಪ ಮಾಡಿಕೊಂಡ ದೊಡ್ಡ ಎಡವಟ್ಟು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಅಪ್ಪಮಗನನ್ನು ಟೀಕಿಸುವ ಭರದಲ್ಲಿ, ಇನ್ನುಮುಂದೆ ನಮ್ಮ ಹೋರಾಟ ಏನಿದ್ದರೂ ಅಪ್ಪಮಗನ ವಿರುದ್ದವೇ ಹೊರತು, ಕಾಂಗ್ರೆಸ್ ಪಕ್ಷದ ವಿರುದ್ದ ಹೋರಾಟವಲ್ಲ ಎಂದು ಘೋಷಿಸಿದರು.
'ಕಾಂಗ್ರೆಸ್ ಮುಕ್ತ್ ಭಾರತ್' ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಠೊಂಕಕಟ್ಟಿ ಕೂತಿರುವಾಗ, ಜೊತೆಗೆ ಬಹುತೇಕ ಯಶಸ್ವಿಯಾಗುತ್ತಿರುವ ಈ ಹೊತ್ತಿನಲ್ಲಿ , ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಅಸೆಂಬ್ಲಿಯಲ್ಲಿ ನೀಡಿರುವ ಹೇಳಿಕೆ ದೇಶ ಮಟ್ಟದಲ್ಲಿ ದೊಡ್ಡ ಸುದ್ದಿಯಾಗದೇ ಇರದು. ಯಡಿಯೂರಪ್ಪ ಹೇಳಿದ್ದೇನು, ಮುಂದೆ ಓದಿ..

ದುರ್ಯೋಧನ ಕುಮಾರಸ್ವಾಮಿಯ ಮನೆದೇವ್ರು
ಅಪ್ಪಮಗ ನಾಗರಹಾವು ಇದ್ದಂತೆ, ದುರ್ಯೋಧನ ಕುಮಾರಸ್ವಾಮಿಯ ಮನೆದೇವ್ರು, ಅವರಿಬ್ಬರ ಬಾಯಿಯಿಂದ ಹೊರಬರುವ ಮಾತು, ಕೊಳ್ಳಿದೆವ್ವದ ಬಾಯಿಯಲ್ಲಿ ಭಗವದ್ಗೀತೆ ಬಂದಂತೆ.. ಹೀಗೆ ಕಡತದಿಂದ ಹೊರತೆಗೆಯಬೇಕಾಗಿ ಬರಬಹುದಾಂತಹ ಪದಪ್ರಯೋಗ ಬಳಸಿದ ಯಡಿಯೂರಪ್ಪ, ಕಾಂಗ್ರೆಸ್ ಪಕ್ಷವನ್ನು ಅಪ್ಪಮಗ ನೇಪಥ್ಯಕ್ಕೆ ಸರಿಸಲಿದ್ದಾರೆಂದು ವಾಗ್ದಾಳಿ ನಡೆಸಿದರು.

ಅಪ್ಪಮಗನ ವಿರುದ್ದವೇ ಹೊರತು ಕಾಂಗ್ರೆಸ್ ಪಕ್ಷದ ವಿರುದ್ದವಲ್ಲ
ನಮ್ಮ ಮುಂದಿನ ಹೋರಾಟ ಅಪವಿತ್ರ ಮೈತ್ರಿ ಮಾಡಿಕೊಂಡ ಅಪ್ಪಮಗನ ವಿರುದ್ದವೇ ಹೊರತು ಕಾಂಗ್ರೆಸ್ ಪಕ್ಷದ ವಿರುದ್ದವಲ್ಲ. ನಮ್ಮ ಪಕ್ಷದ ಎಲ್ಲಾ ಮುಖಂಡರಿಗೂ ಗೌಡ್ರು ಮತ್ತು ಕುಮಾರಸ್ವಾಮಿ ವಿರುದ್ದ ಇನ್ನು ಮುಂದೆ ಹೋರಾಟ ಮಾಡಲು ಸೂಚಿಸುತ್ತೇನೆ - ಯಡಿಯೂರಪ್ಪ.

ನಾನು ಹೇಳಿದ್ದನ್ನು ಬರೆದಿಟ್ಟುಕೊಳ್ಳಿ ಕಾಂಗ್ರೆಸ್ಸಿಗರೇ
ನಾನು ಹೇಳಿದ್ದನ್ನು ಬರೆದಿಟ್ಟುಕೊಳ್ಳಿ ಕಾಂಗ್ರೆಸ್ಸಿಗರೇ.. ಗೌಡ್ರು ಮತ್ತು ಎಚ್ಡಿಕೆ ನಿಮ್ಮ ಪಕ್ಷವನ್ನು ಯಾವ ಪರಿಸ್ಥಿತಿಗೆ ತಂದಿಡುತ್ತಾರೆ ನೋಡಿ.. ನಮ್ಮ ಪಕ್ಷದ ನಾಯಕರಿಗೆ ಕಾಂಗ್ರೆಸ್ ಪಕ್ಷ ಮತ್ತು ನಿಮ್ಮ ಪಕ್ಷದ ಮುಖಂಡರ ವಿರುದ್ದ ಮಾತನಾಡಬಾರದೆಂದು ಸೂಚಿಸುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿರುವುದು, ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಮುಜುಗರ ತರುವ ಹೇಳಿಕೆಯಾಗುವ ಸಾಧ್ಯತೆಯಿದೆ.

ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಮಾತಿನಲ್ಲೇ ಚುಚ್ಚಿದ ಬಿಎಸ್ವೈ
ದೇವೇಗೌಡ್ರು ಮತ್ತು ಕುಮಾರಸ್ವಾಮಿಯವರು ಪಯಣಿಸುವ ದೋಣಿಯಲ್ಲಿ ನೀವು ಸಾಗುತ್ತಿದ್ದೀರಾ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಮಾತಿನಲ್ಲೇ ಚುಚ್ಚಿದ ಬಿಎಸ್ವೈ, ಅವರಿಬ್ಬರೂ ನಿಮ್ಮನ್ನೂ ಮುಳುಗಿಸುತ್ತಾರೆ ಎಂದಾಗ ಸದನ ನಗೆಗಡಲಲ್ಲಿ ತೇಲಿತು.

ಡಿಕೆಶಿ ಮೇಲಿನ ಮುಂದುವರಿದ ಸಾಫ್ಟ್ ಕಾರ್ನರ್
ಒಟ್ಟಾರೆಯಾಗಿ ಯಡಿಯೂರಪ್ಪನವರ ಭಾಷಣದಲ್ಲಿ ಅಲ್ಲಲ್ಲಿ ಪ್ರಖರತೆ, ಹಾಸ್ಯ, ಡಿಕೆಶಿ ಮೇಲಿನ ಮುಂದುವರಿದ ಸಾಫ್ಟ್ ಕಾರ್ನರ್ ಕಂಡರೂ, ಅಪ್ಪಮಗನನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಜೊತೆ ನಮ್ಮ ಹೋರಾಟವಿಲ್ಲ ಎನ್ನುವ ಯಡಿಯೂರಪ್ಪನವರ ಹೇಳಿಕೆ, ಮೋದಿ ಮತ್ತು ಶಾಗೆ ಮಂಡೆಬಿಸಿಯಾಗುವ ಎಲ್ಲಾ ಸಾಧ್ಯತೆಗಳಿವೆ.












Click it and Unblock the Notifications