ಆಷಾಢ ಮುಗಿದ ಕೂಡಲೇ ಲೋಕಸಭಾ ಚುನಾವಣಾ ಅಖಾಡಕ್ಕೆ ಯಡಿಯೂರಪ್ಪ
Recommended Video

ಬೆಂಗಳೂರು, ಜುಲೈ 27: ತಮ್ಮ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟು ಬಾಚಿಕೊಂಡು ಆತ್ಮವಿಶ್ವಾಸದಲ್ಲಿರುವ ಯಡಿಯೂರಪ್ಪ ಅವರು ಲೋಕಸಭೆ ಚುನಾವಣೆಗೂ ಅದೇ ಆತ್ಮವಿಶ್ವಾಸದಿಂದ ಬಿಜೆಪಿಯನ್ನು ಮುನ್ನಡೆಸಲಿದ್ದಾರೆ.
ಆಷಾಢ ಮುಗಿದ ಕೂಡಲೇ ಯಡಿಯೂರಪ್ಪ ಅವರ ಲೋಕಸಭೆ ಚುನಾವಣೆ ಪ್ರವಾಸ ಆರಂಭವಾಗಲಿದ್ದು, ಪ್ರತಿ ಜಿಲ್ಲೆಗೆ ಭೇಟಿ ನೀಡಿ ಕಾರ್ಯಕರ್ತರ ಜತೆ ಸಭೆಗಳನ್ನು ನಡೆಸಲಿದ್ದಾರೆ.
ವಿಧಾನಸಭೆ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲಿಯೂ ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಕರ್ನಾಟದಲ್ಲಿ ಪ್ರಚಾರ ನಡೆಯಲಿದ್ದು, ಕರ್ನಾಟಕದಲ್ಲಿ 28 ಲೋಕಸಭಾ ಸೀಟುಗಳಿದ್ದು ಕನಿಷ್ಟ 25 ಸೀಟುಗಳನ್ನು ಗೆಲ್ಲುವ ಗುರಿ ಇರಿಸಿಕೊಳ್ಳಲಾಗಿದೆ.

ಶ್ರಾವಣ ಮಾಸದ ಮೊದಲ ದಿನ ಪ್ರಾರಂಭ
ಈಗಷ್ಟೆ ಹೋಮ ಹವನಗಳ್ನು ಮುಗಿಸಿರುವ ಯಡಿಯೂರಪ್ಪ ಅವರು ಶ್ರಾವಣ ಮಾಸದ ಮೊದಲ ದಿನವೇ ರಾಜ್ಯ ಪ್ರವಾಸ ಪ್ರಾರಂಭ ಮಾಡಲಿದ್ದಾರೆ. ಪ್ರಸ್ತುತ ಆಷಾಢ ಮಾಸ ಚಾಲ್ತಿಯಲ್ಲಿದ್ದು, ಶ್ರಾವಣ ಉತ್ತಮ ಮಾಸವೆಂದ ಪರಿಗಣಿತವಾಗಿದೆ. ಹಾಗಾಗಿ ಯಡಿಯೂರಪ್ಪ ಅವರು ಶ್ರಾವಣ ಮಾಸದ ಮೊದಲ ದಿನದಿಂದ ರಾಜ್ಯ ಪ್ರವಾಸ ಪ್ರಾರಂಭಿಸಲಿದ್ದಾರೆ.

ಜಿಲ್ಲಾಧ್ಯಕ್ಷರುಗಳ ಭೇಟಿ, ಕಾರ್ಯಕರ್ತರೊಂದಿಗೆ ಚರ್ಚೆ
ಯಡಿಯೂರಪ್ಪ ಅವರ ಈ ರಾಜ್ಯ ಪ್ರವಾಸದಲ್ಲಿ ಜಿಲ್ಲಾಧ್ಯಕ್ಷರ ಭೇಟಿ ಹಾಗೂ ಕಾರ್ಯಕರ್ತರೊಂದಿಗೆ ಭೇಟಿ ಪ್ರಮುಖವಾಗಿದ್ದು. ಸ್ಥಳೀಯ ಅಸಮಾಧಾನಗಳನ್ನು ನಿವಾರಿಸುವುದು ಮತ್ತು ಲೋಕಸಭೆ ಚುನಾವಣೆಗೆ ಸೂಕ್ತ ಅಭ್ಯರ್ಥಿಯನ್ನು ಹುಡುಕುವುದೂ ಪ್ರವಾಸದ ಗುರಿ ಆಗಿರಲಿದೆ.

ರಾಜ್ಯ ಸರ್ಕಾರದ ಹುಳುಕುಗಳು ಬಯಲು
ಬಿಜೆಪಿಗೆ ಅತಿ ಹೆಚ್ಚು ಸೀಟುಗಳು ಬಂದಿದ್ದರೂ ಸಹಿತ ಕಾಂಗ್ರೆಸ್-ಜೆಡಿಎಸ್ ಹೇಗೆ ಅಪವಿತ್ರ ಮೈತ್ರಿ ಮಾಡಿಕೊಂಡಿತು ಎಂಬುದರ ಬಗ್ಗೆ ರಾಜ್ಯದ ಜನರಿಗೆ ಯಡಿಯೂರಪ್ಪ ತಿಳಿ ಹೇಳಲು ಈ ಪ್ರವಾಸವನ್ನು ಬಳಸಿಕೊಳ್ಳಲಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದ ಹುಳುಕುಗಳನ್ನು ಯಡಿಯೂರಪ್ಪ ಬಯಲು ಮಾಡಲಿದ್ದಾರೆ.

ಬಿಎಸ್‌ವೈ ಜತೆಗೆ ಸಂಸದರು
ಯಡಿಯೂರಪ್ಪ ಅವರ ರಾಜ್ಯ ಪ್ರವಾಸದುದ್ದಕ್ಕೂ ಆಯಾ ಕ್ಷೇತ್ರದ ಸಂಸದರು ಭಾಗಿಯಾಗಲಿದ್ದಾರೆ. ಲೋಕಸಭೆ ಚುನಾವಣೆಗೆ ಪ್ರಾಥಮಿಕ ಪ್ರಚಾರ ಪ್ರವಾಸ ಇದಾಗಿರಲಿದ್ದು. ಚುನಾವಣೆ ದಿನಾಂಕ ಹಾಗೂ ಅಭ್ಯರ್ಥಿ ನಿಗದಿ ಆದ ಬಳಿಕ ಮತ್ತೊಂದು ಪ್ರವಾಸವನ್ನು ಯಡಿಯೂರಪ್ಪ ಮಾಡಲಿದ್ದಾರೆ.

ಸಿದ್ದರಾಮಯ್ಯ-ಬಿಎಸ್‌ವೈ ನಡುವೆ ಪೈಪೋಟಿ
ಬಜೆಪಿಯಲ್ಲಿ ಲೋಕಸಭೆ ಚುನಾವಣೆಯ ರಾಜ್ಯ ಉಸ್ತುವಾರಿಯನ್ನು ಯಡಿಯೂರಪ್ಪ ಅವರು ವಹಿಸಿಕೊಂಡಿದ್ದರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಹೆಗಲಿಗೆ ಜವಾಬ್ದಾರಿ ವಹಿಸಲಾಗಿದೆ. ಹಾಗಾಗಿ ಈ ಇಬ್ಬರೂ ನಾಯಕರಿಗೆ ಇದು ಪ್ರತೀಷ್ಟೆಯ ಪ್ರಶ್ನೆಯಾಗಿದೆ.

ಮೋದಿ ಹೆಸರಿನ ಬಲ
ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗೆ ಮೋದಿ ಹೆಸರಿನ ಬಲ ಇರುವುದರಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ನರೇಂದ್ರ ಮೋದಿ ಅವರ ಸಾಧನೆಗಳನ್ನು ಜನರಿಗೆ ತಿಳಿಸಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೇರುವಂತೆ ಮಾಡುವುದಾಗಿ ಈಗಾಗಲೇ ಅವರು ಹೇಳಿದ್ದಾರೆ.












Click it and Unblock the Notifications