ಬಿಜೆಪಿಯಿಂದ ಯಡಿಯೂರಪ್ಪ ದೂರವಾಗಲು 7 ಕಾರಣಗಳು!
ಬೆಂಗಳೂರು, ನ. 26 : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳುತ್ತಾರೆ ಎಂದು ರಾಜ್ಯದ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ, ಯಡಿಯೂರಪ್ಪ ತಮ್ಮ ಚಿತ್ತವನ್ನು ತೃತೀಯ ರಂಗದ ಕಡೆ ಹೊರಳಿಸಿದ್ದಾರೆ. ಇಷ್ಟುದಿನ ಎನ್ ಡಿಎಗೆ ಬೆಂಬಲವೆಂದು ಹೇಳುತ್ತಿದ್ದ ಯಡಿಯೂರಪ್ಪ ಅವರ ತಮ್ಮ ಚಿಂತನೆಯನ್ನು ಬದಲಿಸಿದ್ದಾರೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಕೆಜೆಪಿಯನ್ನು ಎನ್ ಡಿಎ ಮೈತ್ರಿಕೂಟದ ಅಂಗಪಕ್ಷವಾಗಿ ಪರಿಗಣಿಸುವಂತೆ ಬಿ.ಎಸ್.ಯಡಿಯೂರಪ್ಪ ಎನ್ ಡಿಎ ಮುಖ್ಯಸ್ಥ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಪತ್ರ ಬರೆದು ತಿಂಗಳುಗಳೇ ಕಳೆದಿವೆ. ಅದಕ್ಕೆ ಇನ್ನೂ ಉತ್ತರ ಬಂದಿಲ್ಲ, ಇದು ಯಡಿಯೂರಪ್ಪ ಅವರ ಕೋಪವನ್ನು ಹೆಚ್ಚಿಸಿದೆ.
ರಾಜ್ಯದ ಬಿಜೆಪಿ ನಾಯಕರು ಸಹ ಯಡಿಯೂರಪ್ಪ ಬಿಜೆಪಿಗೆ ಮರಳುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಅವರನ್ನು ಪಕ್ಷಕ್ಕೆ ಕರೆತರಲು ರಾಷ್ಟ್ರೀಯ ನಾಯಕರ ಮೇಲೆ ಒತ್ತಡ ಹೇರುತ್ತಿಲ್ಲ. ನ.17ರಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮಾವೇಶದಿಂದಲೂ ಯಡಿಯೂರಪ್ಪ ಅವರನ್ನು ದೂರವಿಟ್ಟಿದ್ದರು. (ಕೈ ಕೊಟ್ಟ ಮೋದಿ, ತೃತೀಯ ರಂಗದತ್ತ ಯಡಿಯೂರಪ್ಪ)
ಇತ್ತ ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟುವ ಕೆಲಸಕ್ಕೆ ಕೈ ಹಾಕಿರುವ ಸಮಾಜವಾದಿ ಪಕ್ಷ ಯಡಿಯೂರಪ್ಪ ಅವರ ಸಹಕಾರ ಕೇಳಿದೆ. ಮೊದಲಿನಿಂದಲೂ ತೃತೀಯ ರಂಗಕ್ಕೆ ಬೆಂಬಲ ನೀಡುತ್ತೇನೆ ಎಂದು ಹೇಳುತ್ತಿದ್ದ ಯಡಿಯೂರಪ್ಪ ಸದ್ಯ ತೃತೀಯ ರಂಗದತ್ತ ಹೆಜ್ಜೆ ಹಾಕಲು ನಿರ್ಧರಿಸಿದ್ದಾರೆ. ಡಿ.9ರಂದು ಬೆಂಗಳೂರಿನಲ್ಲಿ ಕೆಜೆಪಿ ಕಾರ್ಯಕಾರಣಿ ಸಭೆ ನಡೆಯಲಿದ್ದು, ಅಂದು ಯಡಿಯೂರಪ್ಪ ಅವರ ಅಂತಿಮ ನಿರ್ಧಾರದ ಪ್ರಕಟಗೊಳ್ಳುವ ನಿರೀಕ್ಷೆ ಇದೆ. (ಯಡಿಯೂರಪ್ಪ ಬಿಜೆಪಿಯಿಂದ ದೂರಾಗಲು 7 ಕಾರಣಗಳು)

ಕೆಜೆಪಿಯವರ ವಿರೋಧ
ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ನಾಯಕರು ಸಿದ್ದವಾಗಿದ್ದಾರೆ. ಆದರೆ, ಅವರ ಬೆಂಬಲಿಗರು ಬಿಜೆಪಿಗೆ ಬೇಕಾಗಿಲ್ಲ. ಆದ್ದರಿಂದ ಯಡಿಯೂರಪ್ಪ ಅವರ ಜೊತೆ ಬಿಜೆಪಿ ತೊರೆದು ಕೆಜೆಪಿ ಸೇರಿದ ನಾಯಕರು ಯಡಿಯೂರಪ್ಪ ಅವರು ಬಿಜೆಪಿಗೆ ಮರಳಬಾರದು ಎಂದು ಒತ್ತಡ ಹೇರುತ್ತಿದ್ದಾರೆ. ಪಕ್ಷದ ನಾಯಕರನ್ನು ಬಿಟ್ಟು ಯಡಿಯೂರಪ್ಪ ಬಿಜೆಪಿಗೆ ಮರಳುವುದು ಸಾಧ್ಯವಿಲ್ಲ.

ಬಿಜೆಪಿ ನಾಯಕರ ವರ್ತನೆ
ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಂದ ಹಿಡಿದು ಎಲ್ಲಾ ಹಿರಿಯ ನಾಯಕರು ಯಡಿಯೂರಪ್ಪ ಬಗ್ಗೆ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ, ಅವರನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿಕೆಗಳನ್ನು ನೀಡುತ್ತಾರೆ. ಆದರೆ, ಯಾವ ನಾಯಕರು ಅವರನ್ನು ಕರೆತರುವ ಕುರಿತು ಗಂಭೀರವಾದ ಪ್ರಯತ್ನಗಳನ್ನು ಮಾಡುತ್ತಿಲ್ಲ. ಅದರಲ್ಲೂ ಮುಂಬೈನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಜೊತೆ ಮಾತುಕತೆ ನಡೆಸಿದ ನಂತರ ರಾಜ್ಯನಾಯಕರು ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ.

ಅಡ್ವಾಣಿ ಒಪ್ಪಿಗೆ ಅಸಾಧ್ಯ
ಯಡಿಯೂರಪ್ಪ ಬಿಜೆಪಿಗೆ ಮರಳಲು ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವಕಾಶ ನೀಡುವುದಿಲ್ಲ ಎಂಬುದು ಸ್ವತಃ ಯಡಿಯೂರಪ್ಪ ಮತ್ತು ಇತರ ಬಿಜೆಪಿ ನಾಯಕರಿಗೂ ತಿಳಿದಿದೆ. ಆದ್ದರಿಂದಲೇ ಎನ್ ಡಿಎಗೆ ಬೆಂಬಲ ನೀಡಿ ಯಡಿಯೂರಪ್ಪ ಬರೆದಿದ್ದ ಪತ್ರಕ್ಕೂ ಅಡ್ವಾಣಿ ಇನ್ನೂ ಉತ್ತರ ನೀಡಿಲ್ಲ. ಆದ್ದರಿಂದ ಯಡಿಯೂರಪ್ಪ ಬಿಜೆಪಿಗೆ ಮರಳುವ ಬದಲು ಬೇರೆ ಆಯ್ಕೆಗಳಿವೆಯೇ? ಎಂದು ಚಿಂತನೆ ನಡೆಸಿದ್ದಾರೆ.

ಕಾಂಗ್ರೆಸ್ ಪ್ರತಿತಂತ್ರ
ಒಂದು ವೇಳೆ ಲೋಕಸಭೆ ಚುನಾವಣೆ ವೇಳೆಗೆ ಯಡಿಯೂರಪ್ಪ ಬಿಜೆಪಿಗೆ ಮರಳಿದರೆ, ಕಾಂಗ್ರೆಸ್ ಶಕ್ತಿ ರಾಜ್ಯದಲ್ಲಿ ಕುಸಿಯುತ್ತದೆ. ಆದ್ದರಿಂದ ಅವರು ಬಿಜೆಪಿಗೆ ಮರಳುವ ಪ್ರಯತ್ನ ನಡೆಸಿದರೆ, ಸಿಬಿಐ ಮೂಲಕ ಯಡಿಯೂರಪ್ಪ ಅವರನ್ನು ನಿಯಂತ್ರಿಸಲು ಕಾಂಗ್ರೆಸ್ ಪ್ರತಿತಂತ್ರ ರೂಪಿಸಬಹುದು ಎಂಬುದು ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ದೂರ ಸರಿಯುವಂತೆ ಮಾಡುತ್ತಿರಬಹುದು.

ಪ್ರತಿಷ್ಠೆ ಪ್ರಶ್ನೆ
ಯಡಿಯೂರಪ್ಪ ಬಿಜೆಪಿಯಲ್ಲಿ ಸರಿಯಾದ ಸ್ಥಾನಮಾನ ಸಿಗಲಿಲ್ಲ ಎಂದು ಪಕ್ಷದಿಂದ ಹೊರಬಂದು ಕೆಜೆಪಿ ಕಟ್ಟಿದ್ದಾರೆ. ಕೆಜೆಪಿ ಮೂಲಕ ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿದ್ದಾರೆ. ಸದ್ಯ ಪುನಃ ಬಿಜೆಪಿಗೆ ಮರಳಿದರೆ ಪ್ರತಿಷ್ಠೆಯ ಪ್ರಶ್ನೆ ಎದುರಾಗುತ್ತದೆ ಮತ್ತು ಜನರು ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡುತ್ತಾರೆಯೇ? ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.

ಸ್ಥಾನಮಾನದ ವಿಚಾರ
ಬಿ.ಎಸ್.ಯಡಿಯೂರಪ್ಪ ಎಲ್ಲಾ ಅಡೆತಡೆಗಳನ್ನು ದಾಟಿ ಬಿಜೆಪಿಗೆ ಮರಳಿದರೂ ಅಲ್ಲಿ ಅವರಿಗೆ ಯಾವ ಸ್ಥಾನಮಾನ ದೊರೆಯುತ್ತದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿದ್ದ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯವರೆಗೆ ಏರಿದ್ದರು. ಆದರೆ, ಈಗ ಅವರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬ ಗೊಂದಲ ಬಿಜೆಪಿ ನಾಯಕರಲ್ಲೂ ಇದೆ. ಆದ್ದರಿಂದ ಯಡಿಯೂರಪ್ಪ ಇತರ ಆಯ್ಕೆಗಳ ಬಗ್ಗೆ ಚಿಂತನೆ ನಡೆಸಿದ್ದಾರೆ.

ತೃತೀಯ ರಂಗದ ಶಕ್ತಿ ಹೆಚ್ಚಿದರೆ
ಸಮಾಜವಾದಿ ಪಕ್ಷ, ಜೆಡಿಎಸ್ ಮುಂತಾದ ಪ್ರಾದೇಶಿಕ ಪಕ್ಷಗಳು ತೃತೀಯ ರಂಗದ ಮಂತ್ರ ಪಠಿಸುತ್ತಿವೆ. ಒಂದು ವೇಳೆ ಲೋಕಸಭೆ ಚುನಾವಣೆ ಬಳಿಕ ತೃತೀಯ ರಂಗ ಶಕ್ತಿಶಾಲಿಯಾದರೆ, ತಮಗೆ ನಷ್ಟವಾಗುತ್ತದೆ ಎಂಬುದು ಯಡಿಯೂರಪ್ಪ ಲೆಕ್ಕಾಚಾರ ಆದ್ದರಿಂದ ಅವರು ತೃತೀಯ ರಂಗದತ್ತ ಒಲವು ಹೊಂದಿರಬಹುದು.












Click it and Unblock the Notifications