ಬಿಎಸ್ವೈ ವಿರುದ್ಧದ ಅಕ್ರಮ ಡಿನೋಟಿಫಿಕೇಶನ್ ಪ್ರಕರಣ, ನಾಳೆ ತೀರ್ಪು
ಬೆಂಗಳೂರು, ಸೆಪ್ಟೆಂಬರ್ 20 : ಡಾ.ಕೆ.ಶಿವರಾಮ ಕಾರಂತ ಬಡಾವಣೆ ಅಕ್ರಮ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲು ಮಾಡಿದೆ. ಈ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಮೂರ್ತಿ ಅರವಿಂದ್ ಕುಮಾರ್ ಬುಧವಾರ ವಿಚಾರಣೆ ಮುಕ್ತಾಯಗೊಳಿಸಿದ್ದು, ಗುರುವಾರ ತೀರ್ಪು ಪ್ರಕಟಿಸಲಿದ್ದಾರೆ.

ಯಡಿಯೂರಪ್ಪ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ವಿಚಾರಣೆ ಮುಗಿಯುವ ತನಕ ಯಡಿಯೂರಪ್ಪ ಬಂಧಿಸಬಾರದು ಎಂದು ಕೋರ್ಟ್ ಎಸಿಬಿಗೆ ಸೂಚನೆ ನೀಡಿತ್ತು. ಎಸಿಬಿ ಪರವಾಗಿ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಹೊರಡಿಸಲಾಗಿದ್ದ ಅಧಿಸೂಚನೆಯನ್ನು ನಿಯಮ ಬಾಹಿರವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ ಎಂಬುದು ಆರೋಪ. ಯಡಿಯೂರಪ್ಪ ಮತ್ತು ಕೆಲವು ಅಧಿಕಾರಿಗಳು ಈ ಪ್ರಕರಣದಲ್ಲಿ ಆರೋಪಿಗಳು. ಡಾ.ಡಿ.ಅಯ್ಯಪ್ಪ ಅವರು ಎಸಿಬಿಗೆ ದೂರು ನೀಡಿದ್ದರು.
ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿ, ಅವಲಹಳ್ಳಿ ಗ್ರಾಮದ ಸರ್ವೆ ನಂಬರ್ 109/1ರಲ್ಲಿನ 3ಎಕರೆ ಜಮೀನನ್ನು ಡಿನೋಟಿಕೇಷನ್ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ 20ದೂರುಗಳು ದಾಖಲಾಗಿವೆ. ಇವುಗಳಲ್ಲಿ ಎರಡು ಎಫ್‌ಐಆರ್ ದಾಖಲಾಗಿದ್ದು, 18 ದೂರುಗಳ ಬಗ್ಗೆ ತನಿಖೆ ನಡೆಯುತ್ತಿದೆ.












Click it and Unblock the Notifications