ಪೌರ ಕಾರ್ಮಿಕರ ನೇಮಕಾತಿ: ಗುಡ್ನ್ಯೂಸ್ ಕೊಟ್ಟ ಯತೀಂದ್ರ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದ ನಗರ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಶುಕ್ರವಾರ ವಿಕಾಸಸೌಧದಲ್ಲಿ ರಾಜ್ಯದ 13 ಮಹಾನಗರ ಪಾಲಿಕೆಗಳ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಸಾರ್ವಜನಿಕ ಸೇವೆಗಳು ಮತ್ತು ಬಾಕಿ ಇರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಖಡಕ್ ನಿರ್ದೇಶನ ನೀಡಿದ್ದಾರೆ.
ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ನೇಮಕ
ರಾಜ್ಯದ ಬಹುತೇಕ ನಗರಗಳಲ್ಲಿ ಪೌರ ಕಾರ್ಮಿಕರ ತೀವ್ರ ಕೊರತೆ ಇರುವುದನ್ನು ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಸ್ತುತ 2011ರ ಹಳೆಯ ಜನಗಣತಿ ಆಧಾರದ ಮೇಲೆ ಪೌರ ಕಾರ್ಮಿಕರನ್ನು ನಿಯೋಜಿಸಲಾಗುತ್ತಿದ್ದು, ಇದು ಇಂದಿನ ಅಗತ್ಯಕ್ಕೆ ಸಾಲುತ್ತಿಲ್ಲ. ಹೀಗಾಗಿ ಪ್ರಸ್ತುತ ಇರುವ ಅಂದಾಜು ಜನಸಂಖ್ಯೆಯ ವಾಸ್ತವಿಕ ಚಿತ್ರಣವನ್ನು ಪರಿಗಣಿಸಿ, ಶೀಘ್ರದಲ್ಲೇ ಹೊಸ ಪೌರ ಕಾರ್ಮಿಕರನ್ನು ತ್ವರಿತವಾಗಿ ನೇಮಕ ಮಾಡಿಕೊಳ್ಳುವಂತೆ ಪಾಲಿಕೆಗಳಿಗೆ ಸೂಚಿಸಿದರು.

13 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 97 ಇಂದಿರಾ ಕ್ಯಾಂಟೀನ್ಗಳು ಮಂಜೂರಾಗಿದ್ದು, ಈ ಪೈಕಿ 93 ಕ್ಯಾಂಟೀನ್ಗಳು ಪ್ರಸ್ತುತ ಸಾರ್ವಜನಿಕರಿಗೆ ಸೇವೆ ನೀಡುತ್ತಿವೆ. ಇನ್ನುಳಿದಂತೆ ಮಂಗಳೂರಿನಲ್ಲಿ 2 ಮತ್ತು ಬೀದರ್ನಲ್ಲಿ 2 ಇಂದಿರಾ ಕ್ಯಾಂಟೀನ್ಗಳ ಕಾಮಗಾರಿ ಬಾಕಿ ಉಳಿದಿದ್ದು, ಅವುಗಳನ್ನು ತಕ್ಷಣವೇ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಆದೇಶಿಸಿದ್ದಾರೆ. ಇದೇ ವೇಳೆ ಕ್ಯಾಂಟೀನ್ಗಳಲ್ಲಿ ಆಹಾರದ ಗುಣಮಟ್ಟವನ್ನು ನಿಯಮಿತವಾಗಿ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕೆರೆಗಳ ಪುನಶ್ಚೇತನ
ಅಮೃತ್ ಯೋಜನೆ-2: ಈ ಯೋಜನೆಯಡಿ ಒಟ್ಟು 42 ಕೆರೆಗಳ ಪುನಶ್ಚೇತನಕ್ಕಾಗಿ ರೂ. 231 ಕೋಟಿ ಅನುದಾನ ಲಭ್ಯವಿದ್ದು, ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಲು ಸೂಚಿಸಿದ್ದಾರೆ. ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ ಕುಡಿಯುವ ನೀರಿನ ಬೃಹತ್ ಯೋಜನೆ ನಡೆಯುತ್ತಿದೆ. ಎಲ್ ಅಂಡ್ ಟಿ (L&T) ಕಂಪನಿ ಅನುಷ್ಠಾನಗೊಳಿಸುತ್ತಿರುವ ಈ ಕಾಮಗಾರಿಗಳನ್ನು ಪಾಲಿಕೆಗಳು ಸೂಕ್ಷ್ಮವಾಗಿ ಗಮನಿಸಿ, ನಿಗದಿಗಿಂತ ಬೇಗ ಮುಗಿಸಲು ಅಗತ್ಯ ಸಹಕಾರ ನೀಡಬೇಕು ಎಂದರು.
'ಬಿ' ಖಾತೆಯಿಂದ 'ಎ' ಖಾತಾ ಪ್ರಕ್ರಿಯೆ
ವಿವಿಧ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 463 ಕೋಟಿ ರೂಪಾಯಿ ಆಸ್ತಿ ತೆರಿಗೆ ವಸೂಲಾತಿ ಬಾಕಿ ಉಳಿದಿದ್ದು, ಇದನ್ನು ವಿಶೇಷ ಆಂದೋಲನದ ಮೂಲಕ ಶೀಘ್ರವಾಗಿ ವಸೂಲಿ ಮಾಡಲು ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 'ಬಿ' ಖಾತೆಯಿಂದ 'ಎ' ಖಾತಾ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿ ತ್ವರಿತಗೊಳಿಸಲು ಆದೇಶಿಸಿದರು.
ಈ ಯೋಜನೆಯಡಿ ಪಾಲಿಕೆಗಳಲ್ಲಿ ಇದುವರೆಗೆ ಖರ್ಚಾಗದೆ ಉಳಿದಿರುವ ಅನುದಾನವನ್ನು ತಕ್ಷಣವೇ ಆಯಾ ನಗರಗಳ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬೇಕು. ಈ ನಿಧಿಯಲ್ಲಿ ಒಟ್ಟು ರೂ. 4,400 ಕೋಟಿ ಬಳಸಿಕೊಳ್ಳಲು ಅವಕಾಶವಿದ್ದು, ಈಗಾಗಲೇ ರೂ. 3,900 ಕೋಟಿಯಷ್ಟು ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಇನ್ನುಳಿದ ಅನುದಾನದ ಸಮರ್ಪಕ ಬಳಕೆಗೆ ಸೂಕ್ತ ಯೋಜನಾ ವರದಿಯನ್ನು (DPR) ಸಲ್ಲಿಸಲು ನಿರ್ದೇಶನ ನೀಡಿದರು. ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ಕೆಯುಡಬ್ಲ್ಯೂಎಸ್ಎಸ್ಬಿ (KUWSDB) ವ್ಯವಸ್ಥಾಪಕ ನಿರ್ದೇಶಕ ಡಾ. ಮಹೇಶ್, ಹಿರಿಯ ಐಎಎಸ್ ಅಧಿಕಾರಿ ಸೆಲ್ವಮಣಿ, ಪೌರಾಡಳಿತ ನಿರ್ದೇಶಕ ಪಿ.ಎ.ರವೀಂದ್ರ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications