ನನ್ನ ಕಥನ ಪಠ್ಯದಲ್ಲಿ ಸೇರಿಸಲು ನೀಡಿದ್ದ ಅನುಮತಿ ವಾಪಸ್ ಪಡೆಯುತ್ತಿದ್ದೇನೆ: ದೇವನೂರ
ಬೆಂಗಳೂರು, ಮೇ24: 'ಹತ್ತನೇ ತರಗತಿ ಪಠ್ಯಪುಸ್ತಕಕ್ಕೆ ನನ್ನದೊಂದು ಕಥನ ಸೇರಿಸಲು ಈ ಹಿಂದೆ ಹಳೆಯ ಪಠ್ಯಕ್ಕೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯುತ್ತಿದ್ದೇನೆ' ಎಂದು ಸಾಹಿತಿ ದೇವನೂರ ಮಹಾದೇವ ಸರ್ಕಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ರಾಜ್ಯ ಪಠ್ಯಪುಸ್ತರ ಪರಿಷ್ಕರಣೆ ಮತ್ತು ವಿವಾದಗಳಿಗೆ ಸಾಹಿತಿ ದೇವನೂರು ಮಹಾದೇವರವರು ಗರಂ ಆಗಿದ್ದಾರೆ. ದೇವನೂರು ಮಹಾದೇವರವರ ಪಠ್ಯವನ್ನು ಕೈಬಿಡಲಾಗಿದೆ, ಸೇರಿಸಲಾಗಿದೆ ಎಂಬ ಗೊಂದಲಗಳಿಂದ ಬೆಸತ್ತಿರುವ ಸಾಹಿತಿಗಳು ಪಠ್ಯದಲ್ಲಿ ಸೇರಿಸದಿದ್ದರೇ ಸಂತೋಷ, ಸೇರಿಸಿದ್ದರೇ ಅದಕ್ಕೆ ಒಪ್ಪಿಗೆಯಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ಈ ಹಿಂದೆ ಹಳೆಯ ಪಠ್ಯಕ್ಕೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದೇನೆ ಎಂದು ಅವರು ಮಂಗಳವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ದೇವನೂರು ಮಹಾದೇವ ನೀಡಿರುವ ಕಾರಣಗಳು:
ಯಾಕೆಂದರೆ.
1. ಈ ಹಿಂದೆ ಪಠ್ಯದಲ್ಲಿದ್ದ ಎಲ್. ಬಸವರಾಜು, ಎಎನ್ ಮೂರ್ತಿರಾವ್, ಪಿ ಲಂಕೇಶ್, ಸಾರಾ ಅಬೂಬಕರ್, ಮುಂತಾದವರ ಕತೆ ಲೇಖನಗಳನ್ನು ಕೈಬಿಡಲಾಗಿದೆ ಎಂದರೆ ಯಾರು ಕೈಬಿಡಲಾಗಿದೆಯೋ ಅವರಿಗೆ ಕನ್ನಡ ನಾಡು ನುಡಿ ಸಂಸ್ಕೃತಿ ಬಗ್ಗೆ ಏನೇನೂ ತಿಳಿದಿಲ್ಲ ಎಂತಲೇ ಅರ್ಥ.

2.ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಲೇಖಕರ ಜಾತಿಯೇ ತಿಳಿದಿಲ್ಲ ಎನ್ನುತ್ತಾರೆ! ಭಾರತದಂತಹ ಸಂಕೀರ್ಣ ದೇಶದಲ್ಲಿ ಪ್ರಜ್ಞಾಪೂರ್ವಕವಾಗಿ ಜಾತಿಯನ್ನು ಗುರುತಿಸದಿದ್ದರೇ ಅಲ್ಲಿ 90% ಅವರ ಜಾತಿಯವರೇ ತುಂಬಿಕೊಳ್ಳುತ್ತಾರೆ. ಅವರವರ ಅಡಿಗೆ ಮನೆ ವಾಸನೆ ಪ್ರಿಯವಾಗುವಂತೆ! ಹೀಗಾಗಿ ಭಾರತದ ಬಹುತ್ವ ಪಾರ್ಟಿಸಿಪೇಟರಿ ಪ್ರಜಾಪಭುತ್ವ ಕಣ್ಮರೆಯಾಗುತ್ತದೆ. ಇದು ಈಗಿನದ್ದಲ್ಲ ಮುರುಳಿ ಮನೋಹರ ಜೋಶಿಯವರು ಕೇಂದ್ರ ಶಿಕ್ಷಣ ಮಂತ್ರಿಯಾದ ಕಾಲದಿಂದಲೂ ನಡೆದುಕೊಂಡು ಬಂದಿದೆ. ಚಾತುರ್ವರ್ಣ ಹಿಂದೂ ಪ್ರಬೇಧದ ಆರ್‌ಎಸ್‌ಎಸ್ ಸಂತಾನವಾದ ಬಿಜೆಪಿ ಆಳ್ವಿಕೆಯಲ್ಲಿ ಮೊದಲು ಕೈಹಾಕುವುದೇ ಶಿಕ್ಷಣ ಮತ್ತುಇತಿಹಾಸ ಕುತ್ತಿಗೆಗೆ ಇಲ್ಲೂ ಇದೇ ಆಗಿದೆ.
ಈ ಪಠ್ಯಗಳೆಲ್ಲಾ ಪ್ರಕಟವಾದ ಮೇಲೆ ಪರಿಶೀಲಿಸಿ, ಅಲ್ಲಿನ ತಪ್ಪು ಮತ್ತು ಕೊರತೆಯನ್ನು ತುಂಬಲು, ನಮ್ಮ ಶಾಲಾ ಮಕ್ಕಳಿಗೆ ಪರ್ಯಾಯ ಪಾಠಗಳನ್ನು, ಪೂರಕ ವಿಷಯಗಳನ್ನು ಮುಖ್ಯವಾಗಿ ಸಂವಿಧಾನವನ್ನು ಬಿತ್ತರಿಸುವ ವಾಟ್ಸ್ ಆಪ್ , ಇಮೇಲ್ , ಆನ್ ಲೈನ್ ಕ್ಲಾಸ್ , ಇತ್ಯಾದಿಗಳನ್ನು ರೂಪಿಸಲು ಆಲೋಜಿಸುತ್ತಿರುವ ನಾಡಿನ ಆರೋಗ್ಯವಂತ ಮನಸ್ಸುಗಳ ಜೊತೆ ನಾನಿರಲು ಬಯಸುತ್ತೇನೆ.