Sara Abubakar : ಲೇಖಕಿ ಸಾರಾ ಅಬೂಬಕ್ಕರ್ ವಿಧಿವಶ
ಬೆಂಗಳೂರು, ಜನವರಿ 10; ಹಿರಿಯ ಸಾಹಿತಿ, ಚಿಂತಕಿ ಸಾರಾ ಅಬೂಬಕ್ಕರ್ ವಿಧಿವಶರಾದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
86 ವರ್ಷದ ಸಾರಾ ಅಬೂಬಕ್ಕರ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಿಧನ ಹೊಂದಿದರು. ಕರ್ನಾಟಕ ಸಾಹಿತ್ಯ ಅಕಾಡಮಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.
ಕಾಸರಗೋಡಿನ ಚಂದ್ರಗಿರಿಯಲ್ಲಿ ಜೂನ್ 30, 1936ರಂದು ಜನಿಸಿದ್ದ ಸಾರಾ ಅಬೂಬಕ್ಕರ್ ಮಹಿಳಾ ಸಮಾನತೆ, ಮಹಿಳಾ ಸಬಲೀಕರಣದ ಚಿಂತನೆಯನ್ನು ಹೊಂದಿದ್ದರು. ಅವರ ಮೊದಲ ಕಾದಂಬರಿ 'ಚಂದ್ರಗಿರಿಯ ತೀರದಲ್ಲಿ' ಬಹಳ ಪ್ರಸಿದ್ಧಿ ಪಡೆದಿದೆ.

10ಕ್ಕೂ ಹೆಚ್ಚು ಕಾದಂಬರಿ, 6 ಕಥಾ ಸಂಕಲನ, 5 ಬಾನುಲಿ ನಾಟಕ, 4 ಲೇಖನ ಮತ್ತು ಒಂದು ಪ್ರವಾಸ ಕಥನವನ್ನು ಸಾರಾ ಅಬೂಬಕ್ಕರ್ ಬರೆದಿದ್ದಾರೆ. ಸಾಹಿತ್ಯದ ಜೊತೆಗೆ ಅಪಾರ ಸಾಮಾಜಿಕ ಕಳಕಳಿಯನ್ನು ಅವರು ಹೊಂದಿದ್ದರು.
ಸಿದ್ದರಾಮಯ್ಯ ಸಂತಾಪ; ಸಾರಾ ಅಬೂಬಕ್ಕರ್ ನಿಧನಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ತಾನು ನಂಬಿದ ಮೌಲ್ಯಗಳಿಗೆ ಬದ್ಧರಾಗಿ, ಎದುರಾದ ವಿರೋಧಗಳನ್ನು ದಿಟ್ಟತನದಿಂದ ಎದುರಿಸಿ, ಮುಸ್ಲಿಂ ಲೋಕದ ತವಕ-ತಲ್ಲಣಗಳಿಗೆ ದನಿಯಾಗಿದ್ದ ಹಿರಿಯ ಸಾಹಿತಿ ಸಾ ರಾ ಅಬೂಬಕರ್ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಬಂಧುಗಳು ಮತ್ತು ಓದುಗ ಬಳಗದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ' ಎಂದು ಹೇಳಿದ್ದಾರೆ.
ಸಂಕ್ಷಿಪ್ತ ಪರಿಚಯ; ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ತಮ್ಮ ಅಭಿಪ್ರಾಯ ಹೇಳಲು ವೇದಿಕೆಗಳೇ ಇಲ್ಲದ ಕಾಲದಲ್ಲಿ ಅಂತಹ ಮಹಿಳೆಯರ ದನಿಯಾಗಿ ಸಾಹಿತ್ಯ ಕೃಷಿ ಆರಂಭಿಸಿದವರು ಸಾರಾ ಅಬೂಬಕ್ಕರ್.
ಸಾರಾ ಅಬೂಬಕ್ಕರ್ ತಂದೆ ವಕೀಲರಾಗಿದ್ದ ಪಿ. ಅಹಮದ್, ತಾಯಿ ಚೈನಾಬಿ. ಕಾಸರಗೋಡಿನಲ್ಲಿ ಹೈಸ್ಕೂಲ್ ತನಕ ವ್ಯಾಸಂಗ ಮಾಡಿದರು. ಇಂಜಿನಿಯರ್ ಆಗಿದ್ದ ಅಬೂಬ್ಬಕ್ಕರ್ ವಿವಾಹವಾದ ಬಳಿಕ ಮಂಗಳೂರಿಗೆ ಬಂದು ನೆಲೆಸಿದರು.
ತ್ರಿವೇಣಿಯವರ ಕಾದಂಬರಿಗಳ ಆಕರ್ಷಣೆ, ಶಿವರಾಮ ಕಾರಂತ, ಅನಂತಮೂರ್ತಿ ಮುಂತಾದವರ ಬರವಣಿಗೆಗಳಿಂದ ಪ್ರಭಾವಿತರಾದರು. ಹೆಣ್ಣು ಮಕ್ಕಳ ಪರಿಸ್ಥಿತಿಯನ್ನು ಕಂಡು ಅವರ ಪರವಾದ ನಿಲುವು ಬೆಳೆಸಿಕೊಂಡರು.
ವಯಸ್ಸು 40 ದಾಟಿದ ಬಳಿಕ ಸಾಹಿತ್ಯ ಕೃಷಿ ಆರಂಭಿಸಿದರು. ಮೊದಲ ಕಾದಂಬರಿ ಚಂದ್ರಗಿರಿಯ ತೀರದಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟವಾಯಿತು. ಬಳಿಕ ಹಲವಾರು ಕಾದಂಬರಿ, ಕಥಾ ಸಂಕಲನಗಳನ್ನು ಬರೆದರು.
ಅನುವಾದ, ಪ್ರವಾಸ ಕಥನಗಳನ್ನು ಸಹ ಬರೆದರು. ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಹಂಪಿ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿತು. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಸರೋಜಾ ದೇವಿ ಪ್ರಶಸ್ತಿ, 'ಸಹನಾ' ಕಾದಂಬರಿಗೆ ವರ್ಧಮಾನ ಪ್ರಶಸ್ತಿ, 'ಸುಳಿಯಲ್ಲಿ ಸಿಕ್ಕವರು' ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಪಡೆದಿದ್ದಾರೆ.












Click it and Unblock the Notifications