ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದಲಾವಣೆ ಬಯಸುವ ರೂವಾರಿಗಳು ನಾವೇಕಾಗಬಾರದು?

By ಪೂರ್ಣಿಮಾ ಜಿಆರ್
|
Google Oneindia Kannada News

ಬಾರದ ಲೋಕಕ್ಕೆ ಹೋದ ಅಥಿತಿಯನ್ನು ನೆನೆಯುತ್ತಾ ಎಷ್ಟೋ ಜೀವಗಳು ಮರುಗುತ್ತಿವೆ. ಹೌದು, ಆತ್ಮಹತ್ಯೆ ಒಂದು ಘೋರ ದುರಂತ, ದೇಶದ ಅಭಿವೃದ್ಧಿಗೆ ಅಂಟಿದ ಒಂದು ಕಪ್ಪು ಚುಕ್ಕಿ. ಇದಕ್ಕೆ ಯಾವುದೇ ದೇಶ, ಧರ್ಮ, ಜಾತಿ, ಲಿಂಗ, ದೊಡ್ಡವರು, ಚಿಕ್ಕವರು, ಬಡವ, ಬಲ್ಲಿದ, ವಿದ್ಯಾವಂತ, ಅವಿದ್ಯಾವಂತ ಎಂಬ ಭೇದವಿಲ್ಲದೆ ದಿನನಿತ್ಯ ಆತ್ಮಹತ್ಯೆಯ ಪ್ರಕರಣಗಳನ್ನು ಮಾಧ್ಯಮಗಳಲ್ಲಿ ನೋಡಬಹುದು.

ಅಂದಹಾಗೆ ಅಭಿವೃದ್ಧಿ ಹೊಂದಿದ ದೇಶಗಳು ಸಹ ಈ ಸಮಸ್ಯೆಯಿಂದ ಹೊರತಾಗಿಲ್ಲ. ಇತ್ತೀಚಿಗೆ ಸುದ್ದಿಯಲ್ಲಿರುವ 'ಬ್ಲೂ ವೇಲ್' ಎಂಬ ಆತ್ಮಹತ್ಯೆಯ ಆಟದ ಭೂತ ಮಕ್ಕಳನ್ನು ಸಹ ಈ ಮಾಯೆಯಿಂದ ಬಿಟ್ಟಿಲ್ಲ. ಆತ್ಮಹತ್ಯೆಯ ಗಂಭೀರತೆಯನ್ನು ಮನಗಂಡ ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಫಾರ್ ಸೂಸೈಡ್ ಪ್ರಿವೇನ್ಷನ್ (ಐಎಎಸ್‍ಪಿ) ಸಂಸ್ಥೆಯು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಪ್ರತಿವರ್ಷ ಸೆಪ್ಟೆಂಬರ್ 10ರಂದು 'ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ'ವನ್ನು ಆಚರಿಸುತ್ತಿದೆ.

ಮುದ್ದಿನ ನಾಯಿ ಮರಿ ಸತ್ತಿದ್ದಕ್ಕೆ ಬೆಂಗಳೂರಿನಲ್ಲಿ ಇಬ್ಬರ ಆತ್ಮಹತ್ಯೆ!ಮುದ್ದಿನ ನಾಯಿ ಮರಿ ಸತ್ತಿದ್ದಕ್ಕೆ ಬೆಂಗಳೂರಿನಲ್ಲಿ ಇಬ್ಬರ ಆತ್ಮಹತ್ಯೆ!

World Suicide Prevention Day : Need to create awareness about suicide

ಈ ವರ್ಷದ ಥೀಮ್ 'ಒಂದು ನಿಮಿಷ ತೆಗೆದುಕೊಳ್ಳುವುದರಿಂದ ಜೀವನವನ್ನು ಬದಲಾಯಿಸಬಹುದು'. ವಿಶ್ವಸಂಸ್ಥೆ ವರದಿಯ ಪ್ರಕಾರ ವಿಶ್ವದಾದ್ಯಂತ ಪ್ರತಿ ವರ್ಷ ಸುಮಾರು 8 ಲಕ್ಷ ಜನ ಆತ್ಮಹತ್ಯೆಯಿಂದ ಮರಣ ಹೊಂದುತ್ತಿದ್ದಾರೆ ಹಾಗೂ ಮೂರನೇ ಎರಡರಷ್ಟು ಆತ್ಮಹತ್ಯೆ ಪ್ರಕರಣಗಳು ಕಡಿಮೆ ಮತ್ತು ಮಧ್ಯಮ ಆದಾಯದ ಭಾರತದಂತಹ ದೇಶಗಳಲ್ಲಿ ಕಂಡುಬಂದಿರುವುದು ಇನ್ನೂ ವಿಷಾದನೀಯ.

ವಿಶ್ವದಲ್ಲಿ ಪ್ರತಿ 40 ಸೆಕೆಂಡಿಗೆ ಒಂದು ಆತ್ಮಹತ್ಯೆಯ ಸಾವು ಸಂಭವಿಸುತ್ತಿದೆ. ಇನ್ನೂ ಅತಂಕಕಾರಿ ಅಂಶವೆಂದರೆ ಜಾಗತಿಕವಾಗಿ 19 ರಿಂದ 29 ವಯಸ್ಸಿನ ಯುವಜನಾಂಗದ ಮರಣದ ಎರಡನೇ ಪ್ರಮುಖ ಕಾರಣ ಆತ್ಮಹತ್ಯೆಯಾಗಿರುವುದು. ವಿಶ್ವಸಂಸ್ಥೆಯ 'ಮಾನಸಿಕ ಆರೋಗ್ಯ ಕ್ರೀಯಾಯೋಜನೆ-2013-2020' ಸದಸ್ಯ ರಾಷ್ಟ್ರಗಳು 2020ರ ವೇಳೆಗೆ ಆತ್ಮಹತ್ಯೆ ದರವನ್ನು ಶೇ.10ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ದೇಶದ ಸರ್ಕಾರ, ಸಮುದಾಯ, ನಾಗರಿಕರು, ಮಾಧ್ಯಮಗಳು, ಸಂಘಸಂಸ್ಥೆಗಳ ಪಾತ್ರ ಬಹುಮುಖ್ಯ.

ಉತ್ತರ ಪ್ರದೇಶ: ವಿವಾದಾತ್ಮಕ 'ಬ್ಲೂ ವ್ಹೇಲ್' ಗೆ ಬಾಲಕ ಬಲಿಉತ್ತರ ಪ್ರದೇಶ: ವಿವಾದಾತ್ಮಕ 'ಬ್ಲೂ ವ್ಹೇಲ್' ಗೆ ಬಾಲಕ ಬಲಿ

ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು : ಆತ್ಮಹತ್ಯೆಯ ಪ್ರಕರಣಗಳು ಭಾರತದಲ್ಲಿಯೂ ಸಹ ಬೆಚ್ಚಿಬಿಳಿಸುವಂತಿದೆ. ನ್ಯಾಷನಲ್ ಕ್ರೈಂ ರಿಪೋರ್ಟ ಬ್ಯೂರೋ (ಎನ್.ಸಿ.ಆರ್.ಬಿ)ವರದಿಯ ಪ್ರಕಾರ, ಭಾರತದಲ್ಲಿ ಪ್ರತಿವರ್ಷ ಸುಮಾರು 1 ಲಕ್ಷ ಜನ ಆತ್ಮಹತ್ಯೆಯಿಂದ ಮರಣಹೊಂದುತ್ತಿದ್ದಾರೆ. 2005ರಲ್ಲಿ 1,13,914ರಷ್ಟಿದ್ದ ಪ್ರಕರಣವು 2015ರಲ್ಲಿ 1,33,623 ಆಗಿದೆ. ಈ ದಶಕದ ಅವಧಿಯಲ್ಲಿ ಆತ್ಮಹತ್ಯೆಯ ದರವು ಶೇ.17.3ರಷ್ಟು ಹೆಚ್ಚಾಗಿದೆ. ಅತಿ ಹೆಚ್ಚಿನ ಪ್ರಕರಣಗಳು ಅನುಕ್ರಮವಾಗಿ ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮಬಂಗಾಳ, ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕಂಡುಬಂದಿವೆ.

ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ

ಶೇ.51.2ರಷ್ಟು ಪ್ರಕರಣಗಳು ಈ ಐದು ರಾಜ್ಯಗಳಿಂದ ವರದಿಯಾದರೆ, ಉಳಿದ ಶೇ.48.8ರಷ್ಟು ಪ್ರಕರಣಗಳು 24 ರಾಜ್ಯ ಮತ್ತು 7 ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿವೆ. ಒಟ್ಟು ಆತ್ಮಹತ್ಯೆಯ ಪ್ರಮಾಣದಲ್ಲಿ ಕರ್ನಾಟಕವು 4ನೇ ಸ್ಥಾನದಲ್ಲಿದ್ದು, ಕೃಷಿವಲಯದ ಆತ್ಮಹತ್ಯೆ ಪ್ರಕರಣದಲ್ಲಿ 2ನೇ ಸ್ಥಾನದಲ್ಲಿರುವುದು ತುಂಬಾ ಶೋಚನಿಯ ವಿಚಾರ.

ಒಟ್ಟಾರೆ ಆತ್ಮಹತ್ಯೆ ಪ್ರಕರಣಗಳಲ್ಲಿ 18 ರಿಂದ 45 ವಯೋಮಾನದವರು ಹೆಚ್ಚಿದ್ದು, ಇವರು ಉತ್ಪಾದಕ ವರ್ಗವಾಗಿರುವುದರಿಂದ ದೇಶದ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆತ್ಮಹತ್ಯೆಗೆ ಕಾರಣಗಳು ಹಲವಾರಿದ್ದರೂ ಸಹ ಕೌಟುಂಬಿಕ ಸಮಸ್ಯೆ ಮತ್ತು ಅನಾರೋಗ್ಯವು ಪ್ರಮುಖವಾಗಿದೆ.

2015ರಲ್ಲಿ ಒಟ್ಟು ಆತ್ಮಹತ್ಯೆಯ ಪ್ರಮಾಣದಲ್ಲಿ ಅನುಕ್ರಮವಾಗಿ ಶೇ.27.6 ಮತ್ತು ಶೇ.15.8ರಷ್ಟಿದೆ, ಉಳಿದಂತೆ ಮದುವೆ ಸಂಬಂಧಿತ ವಿಷಯಗಳು(ಶೇ.4.8), ದಿವಾಳಿತನ, ಪ್ರೀತಿ-ಪ್ರೇಮಕ್ಕೆ ಸಂಬಂಧಿದಂತೆ ತಲಾ ಶೇ. 3.3, ಡ್ರಗ್ಸ್ ಮತ್ತು ಕುಡಿತದ ಚಟ ಶೇ.2.7 ಹಾಗೂ ಪರೀಕ್ಷೆಯಲ್ಲಿ ಅನುತ್ತೀರ್ಣ ಮತ್ತು ನಿರೂದ್ಯೋಗ ತಲಾ ಶೇ.2 ಇತರೆ ಕಾರಣಗಳು.

ಆತ್ಮಹತ್ಯೆ ಪ್ರಕರಣಗಳಲ್ಲಿ ಪುರುಷರ ಪ್ರಮಾಣ ಮಹಿಳೆಯರಿಗಿಂತ ಹೆಚ್ಚಾಗಿದೆ. 2015ರಲ್ಲಿ ಈ ಅನುಪಾತವು 68.5 : 31.5ರಷ್ಟಿದ್ದು, 14 ವರ್ಷಕ್ಕಿಂತ ಕೆಳಗಿನ ಹುಡುಗ ಮತ್ತು ಹುಡುಗಿಯರ ಪ್ರಕರಣದ ಅನುಪಾತವು 53.8:46.2ರಷ್ಟಿದೆ. ಮಹಿಳೆಯರಲ್ಲಿ ಆತ್ಮಹತ್ಯೆಗೆ ಪ್ರಮುಖ ಕಾರಣವೆಂದರೆ ವಿವಾಹ ಸಂಬಂಧಿತ ಸಮಸ್ಯೆಗಳಾದ ವರದಕ್ಷಿಣೆ, ಅತ್ಯಾಚಾರ ಮುಂತಾದವುಗಳು. ಈ ಅನಿಷ್ಟ ಸಮಸ್ಯೆಗಳನ್ನು ಸಮಾಜದಿಂದ ಕಿತ್ತು ಹಾಕಿದರೆ ಮಹಿಳೆಯರ ಆತ್ಮಹತ್ಯೆ ಪ್ರಕರಣವು ಕಡಿಮೆಯಾಗುತ್ತದೆ.

ಆತ್ಮಹತ್ಯೆಗೆ ಒಳಗಾದವರ ಆರ್ಥಿಕ ಸ್ಥಾನಮಾನವನ್ನು ನೋಡಿದರೆ 2015ರಲ್ಲಿ ಶೇ 70ರಷ್ಟು ಪ್ರಕರಣಗಳು ಒಂದು ಲಕ್ಷಕ್ಕಿಂತ ಕಡಿಮೆ ಆದಾಯ ಹಾಗೂ ಶೇ.25ರಷ್ಟು ಪ್ರಕರಣವು ಒಂದ ರಿಂದ ಐದು ಲಕ್ಷ ಒಳಗಿನ ಆದಾಯ ಹೊಂದಿದವರಾಗಿದ್ದಾರೆ. ಆತ್ಮಹತ್ಯೆ ಪ್ರಕರಣಗಳಲ್ಲಿ ಶಿಕ್ಷಣವನ್ನು ಗಮನಿಸಿದಾಗ ಅವಿದ್ಯಾವಂತರ ಪ್ರಮಾಣವು ಶೇ.13.8ರಷ್ಟಿದ್ದರೆ, ಪ್ರಾಥಮಿಕ (ಶೇ.19.7) ಮಾಧ್ಯಮಿಕ(ಶೇ.21.2), ಮೇಟ್ರಿಕ್ಯುಲೇಷನ್ (ಶೇ.21.7), ಶಿಕ್ಷಣ ಹೆಚ್ಚಿದಂತೆ ಇದರ ಪ್ರಮಾಣವು ಬಹಳ ಕಡಿಮೆ ಇದೆ.

ಕೃಷಿವಲಯದಲ್ಲಿ ಆತ್ಮಹತ್ಯೆ : ರೈತರೇ ದೇಶದ ಬೆನ್ನೆಲುಬು ಎಂಬ ಮಾತು ಎಲ್ಲರಿಗೂ ಚಿರಪರಿಚಿತ. ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿಯು ಪಾತ್ರ ಪ್ರಮುಖವಹಿಸಿದ್ದು, ನಿವ್ವಳ ರಾಷ್ಟ್ರೀಯ ಉತ್ಪನ್ನದಲ್ಲಿ ಕೃಷಿಯ ಪಾಲು ಶೇ.14ರಷ್ಟಿದೆ. ಕೃಷಿಯು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದ್ದು, ರೈತರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಅವುಗಳೆಂದರೆ ಸಾಕಷ್ಟು ನೀರಾವರಿ ಸೌಕರ್ಯ ಇಲ್ಲದಿರುವುದು, ಮಳೆಯ ಅತಿಯಾದ ಅವಲಂಬನೆ, ಅತಿವೃಷ್ಠಿ, ಅನಾವೃಷ್ಠಿ, ಬಡತನ, ಬೆಳೆನಾಶ, ಸಾಲಭಾದೆ ಮುಂತಾದವುಗಳು.

ಈ ಕಾರಣಗಳು ಸಹ ಕೃಷಿವಲಯದಲ್ಲಿ ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳು ಸಂಭವಿಸಲು ಕಾರಣವಾಗಿವೆ. 2015ರಲ್ಲಿ ಕೃಷಿವಲಯದಲ್ಲಿ 12602 ಜನರು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಲ್ಲಿ 8007 ಕೃಷಿಕರು/ವ್ಯವಸಾಯಗಾರರು ಮತ್ತು 4595 ಕೃಷಿಕಾರ್ಮಿಕರಿದ್ದಾರೆ. ಇದು ದೇಶದ ಒಟ್ಟು ಆತ್ಮಹತ್ಯೆ ಪ್ರಮಾಣದಲ್ಲಿ ಶೇ.9.4ರಷ್ಟಿದೆ. ಹೆಚ್ಚಿನ ಸಂಖ್ಯೆಯ ಆತ್ಮಹತ್ಯೆಗಳು ಮಹಾರಾಷ್ಟ್ರ (4291), ಕರ್ನಾಟಕ (1569), ತೆಲಂಗಾಣ (1400), ಮಧ್ಯಪ್ರದೇಶ (1290), ಛತ್ತೀಸ್‍ಘಢ (954), ಆಂಧ್ರಪ್ರದೇಶ (916) ಮತ್ತು ತಮಿಳುನಾಡು (606) ಗಳಿಂದ 2015ರಲ್ಲಿ ದಾಖಲಾಗಿವೆ.

ಈ ರಾಜ್ಯಗಳು ದೇಶದ ಕೃಷಿವಲಯದ ಶೇ.87.5ರಷ್ಟು ಆತ್ಮಹತ್ಯೆ ಪ್ರಕರಣಗಳನ್ನು ಪ್ರತಿನಿಧಿಸುತ್ತದೆ. ಕೃಷಿಕರು/ವ್ಯವಸಾಯಗಾರರು ಒಟ್ಟು ಪ್ರಕರಣಗಳಲ್ಲಿ ಮಹಿಳೆಯರ (441) ಸಂಖ್ಯೆ ಕಡಿಮೆ ಇದ್ದು ಪುರುಷರ (7566) ಸಂಖ್ಯೆ ಹೆಚ್ಚಿದೆ. ಈ ಆತ್ಮಹತ್ಯೆಗೆ ಪ್ರಮುಖ ಕಾರಣಗಳೆಂದರೆ ದಿವಾಳಿತನ/ಋಣಭಾರ ಮತ್ತು ಕೃಷಿಸಂಬಂಧಿ ಸಮಸ್ಯೆಗಳು.

ರೈತರ ಆತ್ಮಹತ್ಯೆ ಎಂದ ತಕ್ಷಣ ಪರಿಹಾರ ಘೋಷಿಸುವುದಕ್ಕೆ ಮುಂದಾಗುವ ಸರ್ಕಾರ, ಆತ್ಮಹತ್ಯೆಯ ಕಾರಣಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು. ರೈತರ ಆತ್ಮಹತ್ಯೆಯಲ್ಲಿ ಕುಟುಂಬ ಮುಖ್ಯಸ್ಥ ಅಥವಾ ದುಡಿಮೆಗಾರನೆ ಮನೆಯ ಜವಾಬ್ದಾರಿಯನ್ನು ವಹಿಸಿರುವುದರಿಂದ, ಆತ್ಮಹತ್ಯೆ ನಂತರ ಅವರ ಕುಟುಂಬ ಪಡುವ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟದ ಬಗ್ಗೆ ರೈತರಿಗೆ ಅರಿವು ನೀಡುವ ಪ್ರಮುಖ ಕಾರ್ಯವನ್ನು ಸಮುದಾಯದಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಬೇಕು.

ಸರ್ಕಾರವು ವಿಷೇಶವಾಗಿ ಬಡ ಮತ್ತು ಭೂಮಿರಹಿತ ರೈತರಿಗೆ ಕಲ್ಯಾಣ ಯೋಜನೆಗಳನ್ನು ನಡೆಸುವುದು, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಹಾಗೂ ಇತರೆ ಯೋಜನೆಗಳನ್ನು ರೈತರಿಗೆ ಸುಲಭವಾಗಿ ಪಡೆಯುವಂತೆ ಮಾಡುವುದು, ಬೆಂಬಲಬೆಲೆ, ಆಧುನಿಕ ಕೃಷಿಪದ್ಧತಿ, ನೀರನ್ನು ಪರಿಣಾಮಕಾರಿಯಾಗಿ ಬಳಕೆ, ಸರಿಯಾದ ಮಾರುಕಟ್ಟೆ, ಮಧ್ಯವರ್ತಿಗಳಿಂದ ಮುಕ್ತಿ ಮುಂತಾದವುಗಳತ್ತಾ ಕ್ರಮವಹಿಸಬೇಕು.

ಆತ್ಮಹತ್ಯೆ ವೈಯಕ್ತಿಕ ವಿಷಯವಾಗಿದ್ದರೂ ಸಹ ಸಾರ್ವಜನಿಕ ಆರೋಗ್ಯದ ಪ್ರಮುಖ ಸಮಸ್ಯೆ. ಒಟ್ಟಾರೆಯಾಗಿ ಆತ್ಮಹತ್ಯೆಗೆ ಮಾನಸಿಕ ಮತ್ತು ದೈಹಿಕ ಕಾಯಿಲೆಯನ್ನು ಒಳಗೊಂಡಂತೆ, ದುಷ್ಚಟಗಳು, ಹಿಂಸೆ, ಭಾವನಾತ್ಮಕ ಯಾತನೆ, ನಿರುದ್ಯೋಗ, ಸಾಲಬಾಧೆ, ಕೆಲಸದ ಒತ್ತಡ, ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಸಾಮಾಜಿಕ ಕಳಂಕ, ಮಾನಸಿಕ ಖಿನ್ನತೆ ಮುಂತಾದ ಕಾರಣಗಳಿರಬಹುದು. ಕಾರಣ ಏನೇ ಇದ್ದರೂ ಸಹ ಅಂತಿಮವಾಗಿ ತೊಂದರೆ ಅನುಭವಿಸುವವರು ಸಂಗಾತಿ, ಪೋಷಕರು, ಮಕ್ಕಳು, ಸ್ನೇಹಿತರು, ಸಹೊದ್ಯೋಗಿಗಳು. ಮಾನಸಿಕ ದೌರ್ಬಲ್ಯದ ಒಂದು ಕ್ಷಣ ಮನುಷ್ಯನ ಜೀವನವನ್ನು ಬಲಿತೆಗೆದುಕೊಳ್ಳುತ್ತದೆ.

ಯಾವುದೇ ವ್ಯಕ್ತಿಯು ಮಾನಸಿಕವಾಗಿ ನೊಂದಿದ್ದರೆ ಅವನಲ್ಲಿ ಆತ್ಮವಿಶ್ವಾಸ, ಹೆಚ್ಚಿಸುವ ಕೆಲಸವನ್ನು ಸಮುದಾಯ, ಸ್ನೇಹಿತರು, ಕುಟುಂಬದವರು ಬಂಧುಮಿತ್ರರು, ಮಾಧ್ಯಮ, ಸಂಘಸಂಸ್ಥೆಗಳು ಮಾಡಿದರೆ ಇದನ್ನು ತಡೆಗಟ್ಟಬಹುದು. ಆತ್ಮಹತ್ಯೆಯನ್ನು ತಡೆಗಟ್ಟುವ ದ್ವಾರಪಾಲಕರಾಗಿ ನಾವೆಲ್ಲರೂ ಕೆಲಸಮಾಡುವ ಮೂಲಕ ಬದಲಾವಣೆಯ ರೂವಾರಿಗಳಾಗಬಹುದು.

ಲೇಖಕರು : ಪೂರ್ಣಿಮ ಜಿ.ಆರ್.

ಪ್ರೋಗಾಂ ಆಫೀಸರ್

ಪಬ್ಲಿಕ್ ಅಫೇರ್ಸ್ ಸೆಂಟರ್

English summary
World Suicide Prevention Day 2017 will take place on Sunday, September 10. Need to create awareness about suicide prevention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X