World Blood Donor Day 2023: ಯಾರೆಲ್ಲ ರಕ್ತದಾನ ಮಾಡಬಹುದು?, ವೃದ್ಯರ ಸಲಹೆಗಳು ಏನು?, ಇಲ್ಲಿದೆ ವಿವರ
ಕರ್ನಾಟಕ, ಜೂನ್, 09: ಪ್ರತಿ ವರ್ಷವೂ ಜೂನ್ 14ನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ರಕ್ತದ ಮಹತ್ವವೇನು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇವತ್ತಿನ ದಿನಗಳಲ್ಲಿ ರಕ್ತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಮುಂದೆ ಬರುತ್ತಿರುವುದು ಖುಷಿಯ ವಿಚಾರವೇ ಆಗಿದೆ. ಆದರೂ ಕೆಲವೊಂದು ತಪ್ಪು ಕಲ್ಪನೆಗಳು ಕೆಲವರು ರಕ್ತದಾನ ಮಾಡಲು ಹಿಂಜರಿಯುವಂತಾಗಿದೆ.
ರಕ್ತದಾನ ಮಹಾದಾನವಾಗಿದ್ದು, ಅದೊಂದು ಪುಣ್ಯದ ಕಾರ್ಯ ಎಂದರೂ ತಪ್ಪಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಗಾಯಾಳುಗಳು ರಕ್ತ ದೊರೆಯದೆ ಪ್ರಾಣವನ್ನೇ ಕಳೆದುಕೊಂಡ ನಿದರ್ಶನಗಳಿವೆ. ಆದ್ದರಿಂದ ರಕ್ತದಾನ ಮಾಡುವುದರ ಹಿಂದೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವ ಕೆಲಸವನ್ನು ಮಾಡುವುದು ಅಗತ್ಯವಾಗಿದೆ. ಇಷ್ಟಕ್ಕೂ ರಕ್ತದಾನ ಮಾಡುವುದರ ಬಗ್ಗೆ ಮತ್ತು ರಕ್ತವನ್ನು ಪಡೆದುಕೊಳ್ಳುವುದರ ಕುರಿತಂತೆ ಹಲವು ರೀತಿಯ ಆಧಾರರಹಿತ ಮಾತುಗಳು ಜನವಲಯದಲ್ಲಿದೆ. ಅವು ಸಂಪೂರ್ಣ ಅಂತೆಕಂತೆ ಸುದ್ದಿಗಳು. ಅವುಗಳನ್ನೇ ನಂಬುವ ಕೆಲವರು ರಕ್ತದಾನ ಮಾಡಲು ಹಿಂಜರಿಯುತ್ತಾರೆ.

ಇವತ್ತು ನಾವು ರಕ್ತದಾನ ಮಾಡುವ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳು ಮತ್ತು ಅಂತೆ ಕಂತೆಗಳ ಬಗ್ಗೆ ವೈದ್ಯಕೀಯ ವಲಯ ಏನು ಹೇಳುತ್ತದೆ ಎಂಬುದರ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹೇಳಲೇ ಬೇಕಾಗುತ್ತದೆ. ಈ ವಿಚಾರದಲ್ಲಿ ತಜ್ಞರು ಹೇಳುವುದೇನು? ಯಾರು ರಕ್ತದಾನ ಮಾಡಬಹುದು? ಯಾರು ರಕ್ತದಾನ ಮಾಡಬಾರದು ಎಂಬಿತ್ಯಾದಿ ವಿಚಾರಗಳನ್ನು ಇಲ್ಲಿ ನೋಡಬಹುದಾಗಿದೆ.
ಯಾರೆಲ್ಲ ರಕ್ತದಾನ ಮಾಡಬಹುದು?
ಮೊದಲಿಗೆ ಹೇಳಬೇಕೆಂದರ 18 ರಿಂದ 60 ವರ್ಷದೊಳಗಿನ 45 ಕೆ.ಜಿ.ಗಿಂತಲೂ ಹೆಚ್ಚು ತೂಕವಿರುವ, 12.5ಗ್ರಾಂ.ಗಿಂತಲೂ ಹೆಚ್ಚು ಹಿಮೋಗ್ಲೋಬಿನ್ ಅಂಶ ಹೊಂದಿರುವ ಎಲ್ಲ ಆರೋಗ್ಯವಂತರೂ ರಕ್ತದಾನ ಮಾಡಬಹುದಾಗಿದೆ. ದೇಶದಲ್ಲಿ ಪ್ರತಿ 2 ಸೆಕೆಂಡಿಗೆ ಒಬ್ಬ ರೋಗಿಗೆ ರಕ್ತದ ಅವಶ್ಯಕತೆ ಇರುವುದಾಗಿ ಸಮೀಕ್ಷೆಯೊಂದು ಹೇಳಿದೆ. ನಮ್ಮ ದೇಶದಲ್ಲಿ ರಕ್ತದ ಬೇಡಿಕೆ ಸುಮಾರು 4 ಕೋಟಿ ಯೂನಿಟ್‍ಗಳಾಗಿದ್ದು, ಕೇವಲ 5 ಲಕ್ಷ ಯೂನಿಟ್‍ಗಳಷ್ಟು ಮಾತ್ರ ರಕ್ತದ ಪೂರೈಕೆಯಾಗುತ್ತಿದೆ ಎಂಬುದು ವಿಷಾದದ ಸಂಗತಿಯಾಗಿದೆ.
ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಾಸರಿ 5.5 ರಿಂದ 6 ಲೀಟರ್‌ನಷ್ಟು ರಕ್ತ ಇರುತ್ತದೆ. ರಕ್ತ ಕೊಡುವ ವ್ಯಕ್ತಿ(ದಾನಿ)ಯಿಂದ ಕೇವಲ 350 ಮಿಲಿಯಷ್ಟೇ ರಕ್ತವನ್ನು ತೆಗೆದುಕೊಳ್ಳುವುದರಿಂದ ಯಾವುದೇ ಅಪಾಯವಾಗುವುದಿಲ್ಲ. ಆದ್ದರಿಂದ ಎಲ್ಲ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ನಿರಾತಂಕವಾಗಿ ರಕ್ತದಾನ ಮಾಡಬಹುದು. ಸಾಮಾನ್ಯವಾಗಿ ದಾನಿಯಿಂದ ಪಡೆದ ರಕ್ತವನ್ನು 35 ದಿನಗಳವರೆಗೆ ಅದು ಯಾವುದೇ ರೀತಿಯಲ್ಲಿಯೂ ಹಾಳಾಗದಂತೆ ವಿಶೇಷ ರೆಫ್ರಿಜಿರೇಟರ್‌ಗಳಲ್ಲಿ ಶೇಖರಿಸಿಟ್ಟು ಉಪಯೋಗಿಸಲಾಗುತ್ತದೆ.
ಇವರೆಲ್ಲ ರಕ್ತದಾನ ಮಾಡುವಂತಿಲ್ಲ
18 ವರ್ಷಕ್ಕಿಂತ ಕಡಿಮೆ ಇರುವ ಲಿವರ್, ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವವರು, ಗರ್ಭಿಣಿಯರು, ಋತುಸ್ರಾವದಲ್ಲಿರುವ ಮಹಿಳೆಯರು, ಮಗುವಿಗೆ ಹಾಲುಣಿಸುವ ತಾಯಂದಿರು, ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾದವರು, ಒಂದು ವರ್ಷದವರೆಗೆ ರಕ್ತ ವರ್ಗಾವಣೆ ಮಾಡಿಸಿಕೊಂಡವರು, ಆರು ತಿಂಗಳವರೆಗೆ ಯಾವುದಾದರೂ ಕಾಯಿಲೆಯ ವಿರುದ್ಧ ಲಸಿಕೆಗಳನ್ನು ತೆಗೆದುಕೊಂಡವರು ಮುಂದಿನ 6 ತಿಂಗಳವರೆಗೆ ರಕ್ತದಾನ ಮಾಡಬಾರದು.
ಇನ್ನು ರಕ್ತದಾನ ಮಾಡಿದ ವ್ಯಕ್ತಿಗೆ ಹೆಚ್ಚೆಂದರೆ ಒಂದು ತಾಸಿನ ವಿಶ್ರಾಂತಿ ಸಾಕಾಗುತ್ತದೆ. ಜೊತೆಗೆ ಯಾವುದೇ ರೀತಿಯ ಔಷಧದ ಅಗತ್ಯವಿರುವುದಿಲ್ಲ. ವ್ಯಕ್ತಿಯು ರಕ್ತದಾನ ಮಾಡಿದ ಆ ದಿನ ನೀರನ್ನು ಹೆಚ್ಚಾಗಿ ಕುಡಿಯಬೇಕು. ರಕ್ತದಾನದ ಕೆಲವು ತಾಸುಗಳೊಳಗಾಗಿ ದಾನಿಯ ದೇಹದಲ್ಲಿ ಹೊಸ ರಕ್ತಕಣಗಳನ್ನು ಉತ್ವಾದಿಸಲು ಪ್ರಾರಂಭಿಸುತ್ತದೆ. ಮುಂದಿನ ಮೂರು ತಿಂಗಳೊಳಗಾಗಿ ದಾನಿಯ ದೇಹದಲ್ಲಿ ಮರು ರಕ್ತ ತಯಾರಾಗುತ್ತದೆ.
ರೋಗ ತಗಲುವ ಭಯ ಬೇಡ
ಇನ್ನು ರಕ್ತ ವರ್ಗಾವಣೆಯಿಂದ ಯಾವುದಾದರೂ ರೋಗ ಅಥವಾ ಸೋಂಕು ತಗಲುತ್ತದೆ ಎಂಬ ಭಯವೂ ಕೆಲವರಲ್ಲಿದೆ. ರಕ್ತದಾನ ಮಾಡುವ ದಾನಿಯಿಂದ ಸ್ವೀಕರಿಸಿದ ರಕ್ತವನ್ನು ರಕ್ತನಿಧಿಗಳಲ್ಲಿ ಹೆಪಟೈಟಿಸ್ ಬಿ.ಹೆಪಟೈಟಿಸ್ ಸಿ.ಎಚ್‍ಐವಿ, ಮಲೇರಿಯಾ, ಸಿಫಿಲಿಸ್ ಮುಂತಾದ ಸೂಕ್ಷ್ಮಾಣುಗಳಿಗಾಗಿ ಪರೀಕ್ಷಿಸಿ. ರೋಗಾಣುಗಳಿಂದ ಮುಕ್ತವಾದ ರಕ್ತವನ್ನು ಮಾತ್ರವೇ ಅವಶ್ಯಕತೆ ಇರುವರಿಗೆ ವರ್ಗಾಯಿಸಲಾಗುತ್ತದೆ.
ದಾನಿಯಿಂದ ರಕ್ತವನ್ನು ಸ್ವೀಕರಿಸುವಾಗಲೂ ಸಂಸ್ಕರಿಸಿದ ಶುದ್ಧವಾದ ಉಪಕರಣಗಳನ್ನು ಬಳಸಲಾಗುತ್ತದೆ. ಹಾಗಾಗಿ ರಕ್ತದಾನ ಪ್ರಕ್ರಿಯೆಯಲ್ಲಿ ದಾನಿಗಾಗಲೀ, ರಕ್ತ ವಗಾವಣೆ ಮಾಡಿಸಿಕೊಂಡವರಿಗಾಗಲಿ ಸೋಂಕಿನ ಭಯ ಬೇಡ. ಯಾವುದೇ ಭಯ ಆತಂಕಗಳಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯೂ ಸ್ವಇಚ್ಛೆಯಿಂದ ರಕ್ತದಾನವನ್ನು ಮಾಡಬಹುದಾಗಿದೆ.
ರಕ್ತದಾನಿಗಳದ್ದು ಸ್ಮರಣೀಯ ಕಾರ್ಯ
ಒಟ್ಟಾರೆಯಾಗಿ ರಕ್ತದಾನದ ಬಗ್ಗೆ ಅರಿತು ಮತ್ತು ಇಲ್ಲಸಲ್ಲದ ಕೆಲವು ಆಧಾರ ರಹಿತ ಮಾತುಗಳಿಗೆ ಸೊಪ್ಪು ಹಾಕದೆ ಆರೋಗ್ಯವಂತರು ರಕ್ತದಾನ ಮಾಡಿದ್ದೇ ಆದರೆ ರಕ್ತದ ಬೇಡಿಕೆಯನ್ನು ನೀಗಿಸಬಹುದು. ಅಲ್ಲದೇ ಇದರೊಂದಿಗೆ, ಒಂದು ಜೀವವನ್ನು ಉಳಿಸಿದ ಪುಣ್ಯವನ್ನು ಕಟ್ಟಿಕೊಳ್ಳಬಹುದಾಗಿದೆ. ಇದೆಲ್ಲದರ ನಡುವೆ ಈಗಾಗಲೇ ನಮ್ಮ ನಿಮ್ಮ ನಡುವೆ ಹಲವು ಮಂದಿ ರಕ್ತದಾನಿಗಳಿದ್ದು, ಅವರೆಲ್ಲರ ಕಾರ್ಯವನ್ನು ಈ ವೇಳೆ ನಾವು ಸ್ಮರಿಸುವುದು ಅಗತ್ಯವಾಗಿದೆ.












Click it and Unblock the Notifications