ಸಿದ್ದರಾಮಯ್ಯ ನಂತರ ರಾಜ್ಯದ ಮುಖ್ಯಮಂತ್ರಿ ಆಗ್ತಾರಾ ಆರ್.ವಿ ದೇಶಪಾಂಡೆ..?
ಬೆಂಗಳೂರು, ಸೆಪ್ಟೆಂಬರ್ 03: ಮೊದಲಿನಿಂದಲೂ ಸಿಎಂ ಆಕಾಂಕ್ಷಿಗಳು ಹೆಚ್ಚಿದ್ದ ಕಾಂಗ್ರೆಸ್ ಪಕ್ಷದಲ್ಲಿ ಈಗ ಕುರ್ಚಿ ಕಚ್ಚಾಟ ಹೆಚ್ಚಾದಂತೆ ಕಾಣಿಸುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಅತ್ತ ಈ ಪ್ರಕರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಕಾನೂನು ಹೋರಾಟ ನಡೆಸುತ್ತಿದ್ದರೆ, ಇತ್ತ ಮುಂದಿನ ಸಿಎಂ ಯಾರಾಗುತ್ತಾರೆ ಎನ್ನುವ ಲೆಕ್ಕಾಚಾರ ಕೂಡ ಒಳಗೊಳಗೆ ಶುರುವಾಗಿದೆ.
ಮೊದಲಿನಿಂದಲೂ ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಒಂದೆಡೆಯಾದರೆ, ಪಕ್ಷದಲ್ಲಿ ಹಿರಿಯ ನಾಯಕರೆನಿಸಿಕೊಂಡವರ ಚಿತ್ತವೂ ಸಿಎಂ ಕುರ್ಚಿಯ ಮೇಲಿದೆ. ಸಿದ್ದರಾಮಯ್ಯ ಈ ಪ್ರಕರಣದಿಂದ ಹೊರಬಂದು ಮುಖ್ಯಮಂತ್ರಿಯಾಗಿ ಐದು ವರ್ಷವೂ ಅಧಿಕಾರ ಪೂರೈಸಿದರೆ ಒಳ್ಳೆಯದು ಎನ್ನುತ್ತಿರುವ ಕಾಂಗ್ರೆಸ್ ಹಿರಿಯ ನಾಯಕರೇ, ಒಂದು ವೇಳೆ ಸಿದ್ದರಾಮಯ್ಯ ಕೆಳಗಿಳಿದರೆ ಮುಂದಿನ ಮುಖ್ಯಮಂತ್ರಿಯಾಗಲು ನಾನೇ ಅರ್ಹ ಎನ್ನುವ ಸಿದ್ಧತೆಯಲ್ಲಿದ್ದಂತೆ ಕಾಣುತ್ತಿದೆ.

ಇತ್ತೀಚಿಗಷ್ಟೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಡುವೆ ನಡೆದ ಗೌಪ್ಯ ಸಭೆ ಈ ಅನುಮಾನಕ್ಕೆ ಪುಷ್ಠಿಕೊಟ್ಟಿದೆ. ಇತ್ತ ಪಕ್ಷದ ಹಿರಿಯ ನಾಯಕ ಆರ್.ವಿ ದೇಶಪಾಂಡೆ ನಾನೇ ಮುಂದಿನ ಮುಖ್ಯಮಂತ್ರಿಯಾಗುತ್ತೇನೆ ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ. ಈ ಬಗ್ಗೆ ಬಹಿರಂಗವಾಗಿ ಹೇಳಿಕೆಗಳನ್ನು ಕೂಡ ನೀಡಿದ್ದಾರೆ.
ಆರ್.ವಿ ದೇಶಪಾಂಡೆ ಹೇಳಿದ್ದೇನು..?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣದಲ್ಲಿ ಸಿದ್ದರಾಮಯ್ಯ ತಪ್ಪೇ ಮಾಡಿಲ್ಲ ಎನ್ನುತ್ತಿರುವ ಆರ್.ವಿ ದೇಶಪಾಂಡೆ, ಅವಕಾಶ ಸಿಕ್ಕರೆ ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನೇ ಸಿಎಂ ಆಗುವೆ ಎನ್ನುವ ಹೇಳಿಕೆ ನೀಡಿದ್ದಾರೆ. ಇತ್ತೀಚಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಚಿವ ಆಗಿ ದಣಿದಿದ್ದೇನೆ. ಇನ್ನೇನಿದ್ದರು ಮುಖ್ಯಮಂತ್ರಿ ಆಗಬೇಕು ಅಷ್ಟೆ. ನನಗೆ ಆಸೆ ಇದೆ, ನಿಮ್ಮಂತ ಜನರಿಗೂ ಆಸೆ ಇದೆ ಎಂದರು.

ನಾನು ಸಿದ್ದರಾಮಯ್ಯಗಿಂತ ಎರಡು ವರ್ಷ ವಯಸ್ಸಿನಲ್ಲಿ ದೊಡ್ಡವನು. ಹೈಕಮಾಂಡ್ ಅವಕಾಶ ಕೊಟ್ಟರೂ ಕೂಡ, ಸಿದ್ದರಾಮಯ್ಯ ಅನುಮತಿ ಕೊಡಬೇಕು. ಆದರೆ ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿಎಂ ಬದಲಾವಣೆ ಕುರಿತು ನನಗೆ ಗೊತ್ತಿಲ್ಲದೇ ಯಾವ ಚರ್ಚೆ ನಡೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದರು.
ಆರ್.ವಿ ದೇಶಪಾಂಡೆ ಹೇಳಿಕೆಗೆ ಸಿದ್ದರಾಮಯ್ಯ ಉತ್ತರವೇನು..?
ಈ ಹೇಳಿಕೆ ಹೊಸ ಚರ್ಚೆ ಹುಟ್ಟು ಹಾಕಿದ್ದು, ಪಕ್ಷದಲ್ಲಿ ಹಿರಿಯ ನಾಯಕ, ಮಾಜಿ ಸಚಿವ ಆರ್.ವಿ ದೇಶಪಾಂಡೆ ಕೂಡ ಸಿಎಂ ರೇಸ್‌ನಲ್ಲಿದ್ದಾರೆ ಎನ್ನುವುದು ಈ ಹೇಳಿಕೆಯಿಂದ ತಿಳಿದು ಬಂದಿದೆ. ಇನ್ನು ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಸಿಎಂ ಆಗುತ್ತೇನೆ ಎನ್ನುವ ದೇಶಪಾಂಡೆ ಅವರ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಶಾಸಕರು ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ನಾನು ಹೇಗೆ ಸಿಎಂ ಮಾಡಲಿ ಎಂದು ಸಿದ್ದರಾಮಯ್ಯ ನಕ್ಕು ಉತ್ತರಿಸಿದ್ದಾರೆ.












Click it and Unblock the Notifications