Rayanna- Bose Statue: ಸರ್ಕಾರಿ ಕಾಲೇಜುಗಳಲ್ಲಿ ರಾಯಣ್ಣ-ಬೋಸ್ ಪ್ರತಿಮೆ ಸ್ಥಾಪನೆಗೆ ಆದೇಶ: ಬೊಮ್ಮಾಯಿ
ಯುವ ಪೀಳಿಗೆಗೆ ಸ್ವಾತಂತ್ರ್ಯಕ್ಕಾಗಿ ಯಾರು ನಿಜವಾಗಿಯೂ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ತಿಳಿಯಬೇಕು. ಮಕ್ಕಳಿಗೆ ಪ್ರೇರಣೆ ನೀಡುವ ಶಕ್ತಿಗಳನ್ನು ಗುರುತಿಸುವ ಕೆಲಸವಾಗಬೇಕು. ಈ ಸಂಬಂಧ ರಾಜ್ಯ ಸರ್ಕಾರ ಪ್ರಮುಖ ಆದೇಶ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು, ಜನವರಿ 26: ಯುವ ಪೀಳಿಗೆಗೆ ಸ್ವಾತಂತ್ರ್ಯಕ್ಕಾಗಿ ಯಾರು ನಿಜವಾಗಿಯೂ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ತಿಳಿಯಬೇಕು. ಮಕ್ಕಳಿಗೆ ಪ್ರೇರಣೆ ನೀಡುವ ಶಕ್ತಿಗಳನ್ನು ಗುರುತಿಸುವ ಕೆಲಸವಾಗಬೇಕು. ಈ ಕಾರಣಕ್ಕಾಗಿ ಪ್ರತಿ ಸರ್ಕಾರಿ ಕಾಲೇಜಿನಲ್ಲಿ ಸಂಗೊಳ್ಳಿ ರಾಯಣ್ಣನ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್‌ರ ಪ್ರತಿಮೆ ಸ್ಥಾಪನೆಗೆ ಆದೇಶಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ಖೋಡೆ ವೃತ್ತದಲ್ಲಿ ಬಿಬಿಎಂಪಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ (ರಿ) ವತಿಯಿಂದ ಗುರುವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 192ನೇ ಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿದರು. ರಾಯಣ್ಣನ ಭಾವಚಿತ್ರ ಮತ್ತು ಪುತ್ಥಳಿಗೆ ಪುಪ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಮುಂದಿನ ಯುವಶಕ್ತಿಗೆ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರ ಪ್ರೇರಣೆ ದೊರೆಯಬೇಕು. ಈ ಸದುದ್ದೇಶದಿಂದ ಸರ್ಕಾರಿ ಕಾಲೇಜುಗಳಲ್ಲಿ ರಾಯಣ್ಣ ಹಾಗೂ ಬೋಸ್‌ರ ಪ್ರತಿಮೆ ಸ್ಥಾಪನೆಯಾಗಬೇಕು. ಅಲ್ದಲೇ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರಿಡುವ ಬಗ್ಗೆ ಆ ಭಾಗದ ನಾಯಕರನ್ನು ವಿಶ್ವಾಸಕ್ಕೆ ಪಡೆದು ತೀರ್ಮಾನ ಮಾಡಲಾಗುವುದು ಎಂದು ಅವರು ಹೇಳಿದರು.

ಸ್ವಾತಂತ್ರ್ಯ, ಮಹನೀಯರ ಹೋರಾಟ ಸ್ಮರಿಸಿದ ಸಿಎಂ
ಸಂಗೊಳ್ಳಿ ರಾಯಣ್ಣನ ಸ್ಫೂರ್ತಿ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೂ ಭಾರತ ಸುರಕ್ಷಿತವಾಗಿ ಇರಲಿದೆ. ಸಂಗೊಳ್ಳಿ ರಾಯಣ್ಣ ಮಾಡಿದ ಕಾರ್ಯಗಳಲ್ಲಿ ಒಂದೆರಡನ್ನಾದರೂ ನಾವು ಮಾಡಬೇಕು. ನೀವು ಒಬ್ಬ ಸಂಗೊಳ್ಳಿ ರಾಯಣ್ಣನ ನ್ನು ನೇಣಿಗೆ ಹಾಕಿದರೆ ಪ್ರತಿ ಮನೆಯಲ್ಲಿ ಒಬ್ಬ ಸಂಗೊಳ್ಳಿ ರಾಯಣ್ಣ ಹುಟ್ಟುತ್ತಾನೆ ಎಂದಿದ್ದರು. ಸ್ವತಂತ್ರದ ಮೊದಲನೇ ಸ್ವಾತಂತ್ರ್ಯ ಹೋರಾಟಕ್ಕೂ 40 ವರ್ಷ ಮುನ್ನವೇ ದೇಶದ ಮೊದಲ ಸ್ವಾತಂತ್ರ್ಯ ಹೋರಾಟ ಮಾಡಿದ್ದು ಕಿತ್ತೂರು ರಾಣಿ ಚೆನ್ನಮ್ಮ. ಅವರೆಲ್ಲರೂ ಹೋರಾಟ ಮಾಡಿರದಿದ್ದರೆ, ಇಷ್ಟು ಬೇಗ ಸ್ವಾತಂತ್ರ್ಯ ಲಭಿಸುತ್ತಿರಲಿಲ್ಲ ಎಂದು ಇತಿಹಾಸ ಸ್ಮರಿಸಿದರು.

ಸಂಗೊಳ್ಳಿ ರಾಯಣ್ಣ ವಸತಿ ಶಾಲೆ
ರಾಯಣ್ಣ ನಮ್ಮೊಂದಿಗೆ ಜೀವಂತವಿದ್ದಾರೆ. ಅವರ ಸಾಹಸ , ಶೌರ್ಯ, ಧೈರ್ಯ, ದೇಶಭಕ್ತಿಗಳ ವಿಚಾರದಲ್ಲಿ ಪ್ರೇರಣಾ ಶಕ್ತಿಯಾಗಿದ್ದಾರೆ. ಸಂಗೊಳ್ಳಿ ರಾಯಣ್ಣ ಸ್ಮರಣೆಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದ್ದು, ಬೆಂಗಳೂರಿನ ರೈಲು ನಿಲ್ದಾಣಕ್ಕೆ ಅವರ ಹೆಸರು, ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡುವುದು ಬಹಳ ಯೋಗ್ಯ ಕೆಲಸ ವಾಗಿದೆ. 184 ಕೋಟಿ ರೂ.ಗಳ ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣ ವಸತಿ ಶಾಲೆಯನ್ನು ನಿರ್ಮಿಸಲಾಗುತ್ತಿದೆ.

ರಾಯಣ್ಣ ಶಾಲೆಯಲ್ಲಿ ಸೇನಾನಿಗಳಿಗೆ ತರಬೇತಿ
ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ನಮ್ಮ ಮನವಿಯ ಮೇರೆಗೆ ರಕ್ಷಣಾ ಶಾಲೆ ನೀಡಿ ಈಗಾಗಲೇ ಶಾಲೆ ಪ್ರಾರಂಭವಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳಾಗಲಿವೆ. ಸಂಗೊಳ್ಳಿ ರಾಯಣ್ಣನ ಹೆಸರಿನ ಶಾಲೆಯಲ್ಲಿ ಸೇನಾನಿಗಳಿಗೆ ತರಬೇತಿ ನೀಡಲಾಗುತ್ತಿದೆ. ನಂದಗಡದಲ್ಲಿ ಸ್ಮಾರಕ, ರಾಕ್ ಗಾರ್ಡನ್, ವಸ್ತು ಸಂಗ್ರಹಾಲಯ ನಿರ್ಮಾಣವಾಗುತ್ತಿದೆ. ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿದೆ ಎಂದು ವಿವರಿಸಿದರು.

ಆಗಸ್ಟ್ 15- ಜನವರಿ 26: ವಿಶೇಷ ದಿನಗಳು
ಕ್ರಾಂತಿವೀರ ಸಂಗೊಳ್ಳಿ ಅಪ್ರತಿಮ ದೇಶಭಕ್ತ, ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭಾರತದ ಸ್ವತಂತ್ರ ಹೋರಾಟದ ಕಹಳೆಯನ್ನು ಕಿತ್ತೂರು ರಾಣಿ ಚನ್ನಮ್ಮನೊಂದಿಗೆ ಊದಿದ ಮಹಾಸೇನಾನಿ. ಇವರ ಸ್ಮರಣೆಯನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯ. ಅವರು ಹುಟ್ಟಿದ್ದು ಆಗಸ್ಟ್ 15, ಅವರನ್ನು ನೇಣಿಗೇರಿಸಿದ್ದು, ಜನವರಿ 26ರಂದು. ಇತಿಹಾಸದಲ್ಲೇ ಈ ಎರಡು ದಿನ ಕಾಕತಾಲೀಯ ಮತ್ತು ವಿಶೇಷ ದಿನ ಎಂದರು.
ಸಮಾರಂಭದಲ್ಲಿ ಸಣ್ಣ ಕೈಗಾರಿಕೆ ಸಚಿವ ಎಂ.ಟಿ. ಬಿ. ನಾಗರಾಜ್, ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಾಜಿ ಶಾಸಕ ವಾಟಾಳ್ ನಾಗರಾಜ್, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications