ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಲಂಚದ ಆರೋಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಬೆಂಗಳೂರು, ಜನವರಿ 16: ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಕರ್ನಾಟಕ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷರು ಮಾಡಿರುವ ಲಂಚದ ಆರೋಪದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದ ಕುರಿತು ಪರಿಶೀಲಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷರು, ಅವರ ಆಡಿಯೊವನ್ನು ಬಿಡುಗಡೆ ಮಾಡಿದ್ದಾರೆ.
ಮಂಜುನಾಥ ಎಂಬ ಗುತ್ತಿಗೆದಾರರ ಬಳಿ ಶಾಸಕ ತಿಪ್ಪಾರೆಡ್ಡಿ ಲಂಚ ಕೇಳಿರುವ ಮಾತುಗಳು ಆ ಆಡಿಯೊದಲ್ಲಿ ಇದೆ.

ಬಿಜೆಪಿ ಶಾಸಕರು ಹಾಗೂ ಸಚಿವರ ವಿರುದ್ಧ ಲಂಚದ ಆರೋಪಗಳು ಕೇಳಿಬಂದಿವೆ. ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಲು ಗುತ್ತಿಗೆದಾರರ ಸಂಘ ನಿರ್ಧರಿಸಿದ್ದಾರೆ. ಕರ್ನಾಟಕ ರಾಜ್ಯದ ಅನೇಕ ಸಚಿವರು ಹಾಗೂ ಶಾಸಕರು ಲಂಚ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.
ಮೊದಲಿನಿಂದಲೂ ನಾವು ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇವೆ. ನೂರಾರು ಪತ್ರಗಳನ್ನು ಬರೆದರೂ ಮುಖ್ಯಮಂತ್ರಿ ನಮಗೆ ಸ್ಪಂದಿಸಿಲ್ಲ. ಸರ್ಕಾರದಲ್ಲಿರುವ ಬಿಜೆಪಿ ಸಚಿವರು ಹಾಗೂ ಶಾಸಕರು ನಮ್ಮಿಂದ ನಲವತ್ತು ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂದು ಗುತ್ತಿದಾರರು ತಿಳಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಸರ್ಕಾರವು ಬಾಕಿ ಇರುವ 25 ಸಾವಿರ ಕೋಟಿ ರೂಪಾಯಿ ಹಣವನ್ನು ಗುತ್ತಿಗೆದಾರರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

25 ಸಾವಿರ ಕೋಟಿ ಬಾಕಿ ಹಣದಲ್ಲಿ ಲೋಕಪಯೋಗಿ ಇಲಾಖೆಯು 4 ಸಾವಿರ ಕೋಟಿ ರೂಪಾಯಿಯನ್ನು ಗುತ್ತಿಗೆದಾರರಿಗೆ ನೀಡಬೇಕು. ಬೃಹತ್ ಮತ್ತು ಸಣ್ಣ ನೀರಾವರಿ ಇಲಾಕೆಯು ಎಂಟು ಸಾವಿರ ಕೋಟಿ ರೂಪಾಯಿ ನೀಡಬೇಕು. ಬೆಂಗಳೂರಿನ ಬಿಬಿಎಂಪಿಯು ಒಂದು ಸಾವಿರ ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಇದರ ವಿರುದ್ಧ ಪ್ರತಿಭಟನೆ ನಡೆಸಲು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರಾಜ್ಯದಾದ್ಯಂತ 25 ಸಾವಿರ ಜನ ಗುತ್ತಿಗೆದಾರರು ಈ ಪ್ರತಿಭಟನೆಯಲ್ಲಿ ಸೇರಲಿದ್ದಾರೆ ಎಂದು ಕೆಂಪಣ್ಣ ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಬೆಳಗಾವಿ ಗುತ್ತಿಗೆದಾರರಾಗಿದ್ದ ಸಂತೋಷ್ ಪಾಟೀಲ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿವಾದ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.












Click it and Unblock the Notifications