• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯೇಂದ್ರನಿಗೆ ರಾಜಕೀಯ ನೆಲೆ ಕಲ್ಪಿಸುವಲ್ಲಿ 'ರಾಜಾಹುಲಿ' ಸಕ್ಸಸ್ ಆಗ್ತಾರಾ?

|
Google Oneindia Kannada News

ಬೆಂಗಳೂರು, ಆ. 26: ರಾಜ್ಯದಲ್ಲಿ ಪ್ರಮುಖ ನಾಯಕರೆಲ್ಲರೂ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದುಕೊಂಡೇ ತಮ್ಮ ಮಕ್ಕಳಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡುವಲ್ಲಿ ಯಶಸ್ವಿಯಾದರು. ಆದರೆ ಯಡಿಯೂರಪ್ಪ ಮೂರು ಬಾರಿ ಸಿಎಂ ಆದರೂ ತಮ್ಮ ಮುದ್ದಿನ ಮಗ ವಿಜಯೇಂದ್ರನಿಗೆ ಇನ್ನೂ ರಾಜಕೀಯವಾಗಿ ನೆಲೆ ಕಟ್ಟುಕೊಡುವಲ್ಲಿ ಸಫಲವಾಗಿಲ್ಲ. ಚುನಾವಣಾ ರಾಜಕಾರಣದಿಂದ ಇನ್ನೇನು ದೂರ ಸರಿದ ಮಾತನ್ನಾಡಿದ ಕೂಡಲೇ ಯಡಿಯೂರಪ್ಪ ಅವರನ್ನು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿರಲು ಉನ್ನತ ಸ್ಥಾನ ನೀಡಲಾಗಿದೆ. ಚುನಾವಣಾ ರಾಜಕೀಯದಿಂದ ಯಡಿಯೂರಪ್ಪ ದೂರವಾದರೂ ಸಹ ತಮ್ಮ ಪ್ರಭಾವ ಬಳಸಿ ಪುತ್ರನಿಗೆ ಹೊಸ ರಾಜಕೀಯ ಭವಿಷ್ಯ ಕಟ್ಟಿಕೊಡುವಲ್ಲಿ ಯಶಸ್ವಿಯಾಗುತ್ತಾರಾ? ಇಲ್ಲವೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಯಡಿಯೂರಪ್ಪ ಬಳಕೆಯಾಗುತ್ತಾರಾ? ಎಂಬ ಪ್ರಶ್ನೆ ಯಡಿಯೂರಪ್ಪ ಅವರ ರಾಜಕಾರಣ ಬಲ್ಲವರನ್ನು ಕಾಡುತ್ತಿದೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದುಕೊಂಡೇ ಪುತ್ರ ಎಚ್‌.ಡಿ. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಎಚ್‌.ಡಿ.ರೇವಣ್ಣ ಅವರಿಗೂ ರಾಜಕೀಯ ನೆಲೆ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾದರು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ರಾಜಕಾರಣವೇ ಬೇಡ ಎಂದು ದೂರ ಸರಿದಿದ್ದ ಯತೀಂದ್ರ ಅವರಿಗೆ ರಾಜಕೀಯ ನೆಲೆ ಕಟ್ಟುಕೊಡುವಲ್ಲಿ ಯಶಸ್ವಿಯಾದರು. ಇನ್ನು ಮಲ್ಲಿಕಾರ್ಜುನ ಖರ್ಗೆ ವಿಚಾರಕ್ಕೆ ಬಂದ್ರೆ, ಸಿಎಂ ಆಗದಿದ್ದರೂ ಮಗನಿಗೆ ಆರಂಭದಲ್ಲಿಯೇ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಸ್ಥಾನ ಕಲ್ಪಿಸಿಕೊಟ್ಟರು. ಕಾಂಗ್ರೆಸ್ ನಲ್ಲಿ ಎರಡನೇ ತಲೆಮಾರಿನ ನಾಯಕರಲ್ಲಿ ಅಗ್ರ ಸ್ಥಾನದಲ್ಲಿ ಪ್ರಿಯಾಂಕ್ ಖರ್ಗೆ ನಿಲ್ಲುವ ಹಂತಕ್ಕೆ ಮಾಡುವಲ್ಲಿ ಯಶಸ್ವಿಯಾದರು. ಆದರೆ ಯಡಿಯೂರಪ್ಪ ವಿಚಾರದಲ್ಲಿ ಇದು ಈವರೆಗೂ ಸಾಧ್ಯವಾಗಲಿಲ್ಲ.

ಬಿ.ಎಸ್. ಯಡಿಯೂರಪ್ಪ ತಮ್ಮ ಒಬ್ಬ ಪುತ್ರ ರಾಘವೇಂದ್ರ ಅವರನ್ನು ಸಂಸದರನ್ನಾಗಿ ಮಾಡಿ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿದರು. ಆದರೆ ತಮ್ಮ ಮುದ್ದಿನ ಪುತ್ರ ವಿಜಯೇಂದ್ರನಿಗೆ ರಾಜ್ಯ ರಾಜಕಾರಣದಲ್ಲಿ ನೆಲೆ ಕಲ್ಪಿಸಿಕೊಡಲು ಇನ್ನೂ ಸಾಧ್ಯವಾಗಿಲ್ಲ. ಅನೇಕ ಸಲ ಸಿಎಂ ಆದರೂ ಪುತ್ರನನ್ನು ಶಾಸಕನನ್ನಾಗಿ ಮಾಡಿ ಉನ್ನತ ಜವಾಬ್ಧಾರಿ ಕಲ್ಪಿಸಿಕೊಡಲಾಗಲಿಲ್ಲ. ಪಕ್ಷದಲ್ಲಿ ಉಪಾಧ್ಯಕ್ಷ ಸ್ಥಾನ ಸಿಕ್ಕಿದರೂ ಶಾಸಕನಾಗಿ ಅಥವಾ ಸಚಿವನಾಗಿ ವಿಧಾನಸೌಧ ಪ್ರವೇಶಿಸುವ ಅವಕಾಶ ಕಲ್ಪಿಸಲಾಗಿಲ್ಲ. ಆ ಕೊರಗು ಯಡಿಯೂರಪ್ಪ ಅವರನ್ನು ಬಿಟ್ಟಿರಲಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತನ್ನ ಪುತ್ರನಿಗೆ ತನ್ನ ಕ್ಷೇತ್ರ ಬಿಟ್ಟುಕೊಟ್ಟಾದರೂ ರಾಜಕೀಯ ನೆಲೆ ಕಲ್ಪಿಸಿಕೊಡುವ ಮಾತುಗಳನ್ನಾಡಿದರು. ಕೇಂದ್ರ ನಾಯಕರಿಂದ ತಿರಸ್ಕಾರಕ್ಕೆ ಒಳಗಾಗಿದ್ದ ಯಡಿಯೂರಪ್ಪ ಅವರ ಹತಾಷೆ ಮಾತುಗಳು ಕೇಂದ್ರ ನಾಯಕರಿಗೆ ಮರ್ಮಾಘಾತ ನೀಡಿತ್ತು.

ರಾಷ್ಟ್ರ ರಾಜಕಾರಣಕ್ಕೆ 'ರಾಜಾಹುಲಿ':

ಬಿ.ಎಸ್. ಯಡಿಯೂರಪ್ಪ ಅಂದಕೊಂಡಿದ್ದನ್ನು ಸಾಧಿಸದೇ ಬಿಡುವ ವ್ಯಕ್ತಿತ್ವವಲ್ಲ. ಅಧಿಕಾರ ಚುಕ್ಕಾಣಿ ಹಿಡಿಯುವ ಹಠಕ್ಕೆ ಬಿದ್ದು ಆಪರೇಷನ್ ಕಮಲ ಮೂಲಕವೇ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಸಾಹಸಿಗ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಿಜೆಪಿ ಕೇಂದ್ರ ವರಿಷ್ಠರು ಕೆಳಗೆ ಇಳಿಸಿದ ಕೆಲವೇ ದಿನದಲ್ಲಿ ಚುನಾವಣಾ ರಾಜಕೀಯದಿಂದ ದೂರ ಸರಿಯುವ ಮಾತುಗಳನ್ನು ಬಹಿರಂಗವಾಗಿ ಹೇಳಿಕೋಂಡಿದ್ದರು. ತನ್ನ ಕ್ಷೇತ್ರವನ್ನು ಪುತ್ರ ವಿಜಯೇಂದ್ರ ಅವರಿಎಗ ಬಿಟ್ಟು ಕೊಡುವುದಾಗಿ ಘೋಷಣೆ ಮಾಡಿದ್ದರು. ಯಡಿಯೂರಪ್ಪ ಈ ಸಂದೇಶದ ಹಿಂದೆ ದೊಡ್ಡ ಉದ್ದೇಶವಿತ್ತು. ನಾನು ಚುನಾವಣಾ ರಾಜಕೀಯದಿಂದ ದೂರ ಇರುತ್ತೇನೆ. ಆದ್ರೆ ನನ್ನ ಕ್ಷೇತ್ರವನ್ನಾದರೂ ಬಿಟ್ಟು ನನ್ನ ಪುತ್ರನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡುತ್ತೇನೆ ಎಂಬ ಸಂದೇಶ ರವಾನಿಸಿದ್ದು ಸುಳ್ಳಲ್ಲ.

ಯಡಿಯೂರಪ್ಪ ಮಾರ್ಗದರ್ಶನ, ಪರಿಶ್ರಮ ಇಲ್ಲದೇ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲ್ಲ ಎಂಬ ಸತ್ಯ ಅಷ್ಟರಲ್ಲಿ ಕೇಂದ್ರ ವರಿಷ್ಠರಿಗೆ ಗೊತ್ತಾಗಿತ್ತು. ಯಡಿಯೂರಪ್ಪ ಅವರನ್ನು ಬಿಟ್ಟು ಚುನಾವಣೆ ಎದುರಿಸಿದರೆ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚುವುದು ಖಚಿತ ಎಂಬುದನ್ನು ಅರಿತ ನಾಯಕರು ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುಣಾವಣಾ ಸಮಿತಿ ಸದಸ್ಯ ಸ್ಥಾನವನ್ನು ಯಡಿಯೂರಪ್ಪ ಅವರಿಗೆ ಕಲ್ಪಿಸಿಕೊಟ್ಟಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಂಡೇ ಪುತ್ರನ ರಾಜಕೀಯ ಜೀವನ ಕಲ್ಪಿಸಿಕೊಡಲು ಯಡಿಯೂರಪ್ಪ ಅವರಿಗೆ ಬಹುದೊಡ್ಡ ಅವಕಾಶ ಸಿಕ್ಕಿದಂತಾಗಿದೆ.

Will BS Yediyurappa succeed in creating a political base for his son BY Vijayendra?

ಯಡಿಯೂರಪ್ಪಗೆ ಇದೀಗ ಹೆಚ್ಚು ಮಹತ್ವ:

ಕೇಂದ್ರ ಬಿಜೆಪಿ ನಾಯಕರಿಗೆ ಕರ್ನಾಟಕದಲ್ಲಿ ಕಮಲ ಅರಳಿ ಮರಳಿ ಅಧಿಕಾರ ಪಡೆಯಬೇಕು. ಹೀಗಾಗಿ ಯಡಿಯೂರಪ್ಪ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಎಳೆದು ಉನ್ನತ ಸ್ಥಾನ ನೀಡಲಾಗಿದೆ. ಇದರ ಭಾಗವಾಗಿಯೇ ಯಡಿಯೂರಪ್ಪ ಶುಕ್ರವಾರ ದೆಹಲಿ ಪ್ರಯಾಣ ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿದ್ದ ವೇಳೆ ಯಡಿಯೂರಪ್ಪ ಭೇಟಿಗೆ ಅವಕಾಶ ಕೊಡದ ಅಮಿತ್ ಶಾ, ನರೇಂದ್ರ ಮೋದಿ, ರಾಜನಾಥ್ ಸಿಂಗ್ ಎಲ್ಲರನ್ನು ಭೇಟಿಯಾಗಲು ಯಡಿಯೂರಪ್ಪ ಅವರಿಗೆ ಕಾಲಾವಕಾಶ ಕೊಟ್ಟಿದ್ದಾರೆ! ಯಡಿಯೂರಪ್ಪ ಅವರ ಸಲಹೆ, ಸೂಚನೆ ಮೇರೆಗೆ ಬಿಜೆಪಿ ವರಿಷ್ಠರು ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಪ್ಲಾನ್ ರೂಪಿಸಿದ್ದಾರೆ. ಹೀಗಾಗಿ ಸಿಎಂ ಆಗಿದ್ದ ವೇಳೆ ಸಿಗದ ಮಹತ್ವ ಯಡಿಯೂರಪ್ಪ ಅವರಿಗೆ ಇದೀಗ ಹೆಚ್ಚು ಮಹತ್ವ ಸಿಕ್ಕಿದೆ.

ಯಡಿಯೂರಪ್ಪ ಚುನಾವಣಾ ರಾಜಕಾರಣದಿಂದ ದೂರ ಸರಿದ ಬಳಿಕ ಚುನಾವಣಾ ತಂತ್ರ ರೂಪಿಸುವಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಹಾಕುವ ಪರಿಶ್ರಮದ ಫಲ ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕೆ ಹೊಸ ದಿಕ್ಕನ್ನೇ ನೀಡಬಹುದು. ಯಡಿಯೂರಪ್ಪ ಅವರಿಗೆ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ಅಯ್ಕೆ ಮಾಡಿರುವುದಕ್ಕೆ ಯಡಿಯೂರಪ್ಪ ಬೆಂಬಲಿಗರಿಗೆ ಸಂತಸ ಉಂಟು ಮಾಡಿದೆ. ಆದ್ರೆ ಯಡಿಯೂರಪ್ಪ ಎಷ್ಟು ಜಾಣ್ಮೆ ತೋರಿ ಮಗ ವಿಜಯೇಂದ್ರನಿಗೆ ರಾಜಕೀಯ ನೆಲೆ ಕಲ್ಪಿಸುವಲ್ಲಿ ಯಶಸ್ವಿಯಾಗುತ್ತಾರಾ ಎಂಬುದು ಯಕ್ಷ ಪ್ರಶ್ನೆ.

English summary
Will BS Yediyurappa succeed in creating a political base for his son BY Vijayendra? after he moved to National politics. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X