Rain Alert: ಕೊಡಗು ಜಿಲ್ಲೆಯಲ್ಲಿ ಸತತ ಎರಡನೇ ದಿನ ವರ್ಷಧಾರೆ; ಈ ಜಿಲ್ಲೆಗಳಲ್ಲೂ ಮಳೆ
ಅಂತೂ ಇಂತೂ ರಾಜ್ಯದಲ್ಲಿ ಮಳೆ ಆರಂಭವಾಗುವ ಲಕ್ಷಣ ಕಾಣಿಸುತ್ತಿದೆ. ಬುಧವಾರ ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾದ ಬಳಿಕ, ಗುರುವಾರ ಕೂಡ ಈ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಜನರಲ್ಲಿ ಸಂತಸ ಮೂಡಿಸಿದೆ.
ಗುರುವಾರ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯ ಹಳೆತಾಲ್ಲೂಕು, ನಾಪೋಕ್ಲು ಮತ್ತು ಕಡಂಗದಲ್ಲಿ ಭಾರಿ ಮಳೆಯಾಗಿದೆ. ಸತತ ಎರಡನೇ ದಿನ ಮಳೆಯಾಗುತ್ತಿರುವುದು ರೈತರಲ್ಲಿ ವಿಶೇಷವಾಗಿ ಕಾಫಿ ಬೆಳೆಗಾರರಲ್ಲಿ ಹೆಚ್ಚಿನ ಸಂತಸ ಮೂಡಿಸಿದೆ.

ಕಾವೇರಿ ಜನ್ಮಸ್ಥಳವಾದ ತಲಕಾವೇರಿಯಲ್ಲಿ ಕೂಡ ಮಳೆಯಾಗುತ್ತಿದ್ದು, ಮಳೆ ಇದೇ ರೀತಿ ಮುಂದುವರಿಯಲಿ ಎಂದು ಇಲ್ಲಿನ ಜನ ಪ್ರಾರ್ಥನೆ ಮಾಡುತ್ತಿದ್ದಾರೆ. ಬಿರು ಬೇಸಿಗೆಯಿಂದ ಕಂಗಾಲಾಗಿದ್ದ ರೈತರಲ್ಲಿ ಮಳೆ ಸ್ವಲ್ಪ ಸಮಾಧಾನ ತರಿಸಿದೆ.
#ಹಳೇತಾಲ್ಲೂಕುವಿನಲ್ಲಿ_ಮತ್ತೆ_ಇಂದು_ವರುಣನ_ಸಿಂಚನ pic.twitter.com/xOuowkt8sO
— Coorgthekashmirofkarnataka (@Coorgthekashmir) April 4, 2024
ಚಾಮರಾಜನಗರ ಮತ್ತು ಗುಂಡ್ಲುಪೇಟೆ ಪ್ರದೇಶದಲ್ಲಿ ಕೂಡ ಮೋಡ ಕವಿದ ವಾತಾವರಣ ಇದ್ದು, ಗುರುವಾರ ರಾತ್ರಿ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ.
#ನಾಪೋಕ್ಲುವಿನಲ್ಲಿ_ಮಳೆ 🌦️ pic.twitter.com/zO24c93cx5
— Coorgthekashmirofkarnataka (@Coorgthekashmir) April 4, 2024
ಏಪ್ರಿಲ್ ಎರಡನೇ ವಾರದಲ್ಲಿ ಮಳೆ
ರಾಜ್ಯದಲ್ಲಿ ಏಪ್ರಿಲ್ ಎರಡನೇ ವಾರದ ಬಳಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ. ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ, ಮಲೆನಾಡಿನ ಪ್ರದೇಶಗಳು ಮತ್ತು ಉತ್ತರ ಒಳನಾಡಿನಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಿದೆ.
ಯುಗಾದಿ ಹಬ್ಬದ ಬಳಿಕ ರಾಜ್ಯದ ಹಲವು ಕಡೆಗಳಲ್ಲಿ ವರ್ಷದ ಮೊದಲ ಮಳೆಯನ್ನು ನಿರೀಕ್ಷೆ ಮಾಡಬಹುದು.
ಬೆಂಗಳೂರಿನಲ್ಲೂ ಮಳೆ ಸಾಧ್ಯತೆ
ಇನ್ನು ಬಿಸಿಲಿನ ಹೊಡೆತಕ್ಕೆ ಬಳಲಿರುವ ಬೆಂಗಳೂರು ಜನತೆಗೂ ಗುಡ್‌ನ್ಯೂಸ್ ಸಿಕ್ಕಿದ್ದು, ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲೂ ಕೂಡ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.
ಒಂದು ಕಡೆ ದಾಖಲೆಯ ತಾಪಮಾನ ಮತ್ತು ನೀರಿನ ಕೊರತೆಯಿಂದ ಈಗಾಗಲೇ ಬೆಂಗಳೂರಿಗರು ತತ್ತರಿಸಿದ್ದಾರೆ. ಸದಾ ಕೂಲ್ ಕೂಲ್ ಆಗಿರುತ್ತಿದ್ದ ಸಿಲಿಕಾನ್ ಸಿಟಿ ಈಗ ಹೆಚ್ಚಿನ ತಾಪಮಾನದಿಂದ ತತ್ತರಿಸಿದೆ. ಒಂದೆರಡು ಹದ ಮಳೆಯಾದರೆ ವಾತಾವರಣ ಕೂಡ ತಂಪಾಗುವ ಸಾಧ್ಯತೆ ಇದ್ದು, ಸದ್ಯ ಮಳೆ ಬಂದ್ರೆ ಸಾಕಪ್ಪಾ ಎನ್ನುವಂತಾಗಿದೆ.
ಹವಾಮಾನ ಇಲಾಖೆಯ ವರದಿಯಂತೆ ಏಪ್ರಿಲ್ 13 ಅಥವಾ 14 ರ ಬಳಿಕ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮುನ್ಸೂಚನೆಯಂತೆ ಮೊದಲು ಮಳೆಯಾದರೆ ಸಾಕಾಗಿದೆ.












Click it and Unblock the Notifications