ರಾತ್ರಿ ಟೆನ್ನಿಸ್ ಆಡಲು ಏಕೆ ಹೋಗಬೇಕಿತ್ತು? ಪರಂ ಪ್ರಶ್ನೆ!
ಬೆಂಗಳೂರು, ನವೆಂಬರ್ 12 : "ಅಷ್ಟು ರಾತ್ರಿಯಲ್ಲಿ (ರಾತ್ರಿ 10ಕ್ಕೆ) ಮಹಿಳೆ ಟೆನ್ನಿಸ್ ಆಡಲು ಏಕೆ ಹೋಗಬೇಕಿತ್ತು?" ಇಂಥ ಬೇಜವಾಬ್ದಾರಿಯುತವಾಗಿ ಮಾತನಾಡಿ ವಿವಾದದ ಸುಳಿಗೆ ಸಿಲುಕಿದವರು ಹೊಸದಾಗಿ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಡಾ. ಜಿ. ಪರಮೇಶ್ವರ್!
ಕಬ್ಬನ್ ಪಾರ್ಕಿನಲ್ಲಿ ಬುಧವಾರ ರಾತ್ರಿ 30 ವರ್ಷದ ಮಹಿಳೆಯ ಮೇಲೆ ಇಬ್ಬರು ಭದ್ರತಾ ಸಿಬ್ಬಂದಿಯಿಂದ ಸಾಮೂಹಿಕ ಅತ್ಯಾಚಾರವಾದ ನಂತರ, ಈ ಪ್ರಕರಣದ ಬಗ್ಗೆ ಮಾಧ್ಯಮ ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿ ನುಣುಚಿಕೊಳ್ಳಲು ಯತ್ನಿಸಿದ್ದಾರೆ.
ಕಬ್ಬನ್ ಪಾರ್ಕಿನಲ್ಲಿರುವ ಕರ್ನಾಟಕ ಲಾನ್ ಟೆನ್ನಿಸ್ ಅಸೋಸಿಯೇಷನ್‌ಗೆ ಸದಸ್ಯತ್ವಕ್ಕಾಗಿ ಹೋಗಿದ್ದಾಗ, ಪರಿಸ್ಥಿತಿಯ ದುರ್ಲಾಭ ಪಡೆದ ಸೆಕ್ಯೂರಿಟಿ ಗಾರ್ಡ್‌ಗಳು ತುಮಕೂರಿನ ಮೂಲದವಳಾದ 30 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದರು. ಆರೋಪಿಗಳನ್ನು ಬಂಧಿಸಲಾಗಿದೆ. [ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿಯನ್ನೂ ತೋಡುತ್ತಿಲ್ಲ ಸರಕಾರ]

ರಾಜ್ಯದ ಜನತೆಗೆ, ಅದರಲ್ಲೂ ಮಹಿಳೆಯರಿಗೆ ಭದ್ರತೆ ನೀಡುವ ಜವಾಬ್ದಾರಿಯುತವಾದ ಸ್ಥಾನದಲ್ಲಿರುವ ಗೃಹ ಸಚಿವರಿಂದ ರಾಜ್ಯದ ಜನತೆ ಇಂತಹ ಪ್ರತಿಕ್ರಿಯೆ ನಿರೀಕ್ಷಿಸಲಿರಲಿಲ್ಲ. ರಾಜ್ಯದ ರಾಜಕಾರಣಿಗಳಿದರೂ ಏನಾಗಿದೆ? ಕಳೆದ ಒಂದು ತಿಂಗಳಲ್ಲಿ ಮೂರನೇ ಬಾರಿ ರಾಜಕಾರಣಿಯೊಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆದಾಗ ಇಂತಹ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. [ಕಬ್ಬನ್ ಪಾರ್ಕ್ ಬಳಿ ಗ್ಯಾಂಗ್ ರೇಪ್, ಇಬ್ಬರ ಬಂಧನ]
ಅಕ್ಟೋಬರ್ 8ರಂದು 22 ವರ್ಷದ ಬಿಪಿಓ ಉದ್ಯೋಗಿಯ ಮೇಲೆ ಟೆಂಪೋ ಟ್ರಾವೆಲರ್ ನಲ್ಲಿ ಲೈಂಗಿಕ ದೌರ್ಜನ್ಯ ನಡೆದ ನಂತರ ಆಗಿನ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದರು. [ಗೃಹ ಸಚಿವರಾಗಿ ಕೆಜೆ ಜಾರ್ಜ್ ಎಡವಿರುವುದು ಎಲ್ಲೆಲ್ಲಿ?]
"ಕೇವಲ ಇಬ್ಬರು ಅತ್ಯಾಚಾರವೆಸಗಿದರೆ ಗ್ಯಾಂಗ್ ರೇಪ್ ಹೇಗಾಗುತ್ತದೆ? ಗ್ಯಾಂಗ್ ರೇಪ್ ಅಂತ ಹೇಳಬೇಕಾದರೆ ಕನಿಷ್ಠ ಮೂರರಿಂದ ನಾಲ್ಕು ಜನರಾದರೂ ಅತ್ಯಾಚಾರ ಎಸಗಿರಬೇಕಿಲ್ಲವೆ?" ಎಂದು ನಾಚಿಕೆಗೇಡಿನ ಹೇಳಿಕೆ ನೀಡಿ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದರು.
ನಂತರ, ಇದಕ್ಕಿಂತಲೂ ಮೂರ್ಖತನದ ಹೇಳಿಕೆ ನೀಡಿದ್ದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ. ಮಹಿಳೆಯರ ಮೇಲೆ ಇಷ್ಟೆಲ್ಲ ದಬ್ಬಾಳಿಕೆಗಳು ನಡೆಯುತ್ತಿದ್ದರೂ ವಿರೋಧ ಪಕ್ಷ ಏಕೆ ಪ್ರತಿಭಟಿಸುತ್ತಿಲ್ಲ ಎಂದು ಮಹಿಳಾ ಪತ್ರಕರ್ತ ಕೇಳಿದ ಪ್ರಶ್ನೆಗೆ, "ಅಲ್ಲಮ್ಮ, ನಿನ್ನನ್ನು ಯಾರಾದರೂ ಎಳೆದುಕೊಂಡು ಹೋಗಿ ರೇಪ್ ಮಾಡಿದರೆ, ಅದಕ್ಕೆ ನಾನೇನು ಮಾಡಲಿಕ್ಕಾಗತ್ತೆ?" ಎಂದು ನಾಲಿಗೆಯನ್ನು ಹರಿಯಬಿಟ್ಟಿದ್ದರು. [ನಿನ್ನನ್ನು ಯಾವನೋ ರೇಪ್ ಮಾಡಿದ್ರೆ ನಾ ಏನ್ ಮಾಡಕಾಗುತ್ತೆ: ಈಶ್ವರಪ್ಪ]
ಈಗ ಇವರಿಬ್ಬರ ಸಾಲಿಗೆ, ಸಜ್ಜನ ರಾಜಕಾರಣಿ ಎಂದೇ ಹೆಸರು ಗಳಿಸಿರುವ ಡಾ. ಜಿ. ಪರಮೇಶ್ವರ್ ಸೇರಿಕೊಂಡಿದ್ದಾರೆ. ಮೇಲಿಂದ ಮೇಲೆ ಅತ್ಯಾಚಾರಗಳು ನಡೆಯುತ್ತಿರುವ ಸಂದರ್ಭದಲ್ಲಿ ಬಿರುಗಾಳಿ ಎಬ್ಬಿಸುವಂಥ ಹೇಳಿಕೆ ನೀಡಿದ್ದಾರೆ ಗೃಹ ಸಚಿವರು. ಇದಕ್ಕೆ ಮುಖ್ಯಮಂತ್ರಿಗಳು ಏನೆನ್ನುತ್ತಾರೋ?












Click it and Unblock the Notifications