ಮುಜರಾಯಿ ಹುಂಡಿ ಹಣ: ಜನರಿಗೆ ಕಾಡುತ್ತಿದ್ದ ಸಂಶಯ, ಹೈಕೋರ್ಟಿಗೂ ಪ್ರಶ್ನೆಯಾಗಿ ಕಾಡಿತು!
ಬೆಂಗಳೂರು, ಸೆ 25: ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿಗಳ (ಮುಜರಾಯಿ) ವ್ಯಾಪ್ತಿಯ ದೇವಾಲಯಗಳಿಂದ ಸರಕಾರಕ್ಕೆ ಬರುವ ಕೋಟ್ಯಾಂತರ ರೂಪಾಯಿ ಹಣವನ್ನು, ಇತರ ಕೋಮಿನ ಕಲ್ಯಾಣಕ್ಕಾಗಿ ಮತ್ತು ಸರಕಾರದ ಇತರ ಕೆಲಸಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎನ್ನುವ ಬಿಸಿಬಿಸಿ ಚರ್ಚೆ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.
ಈಗ, ಜನಸಾಮಾನ್ಯರ ಈ ಸಂಶಯಕ್ಕೆ ಇಂಬು ನೀಡುವಂತೆ, ರಾಜ್ಯ ಉಚ್ಚ ನ್ಯಾಯಾಲಯವೂ ಕರ್ನಾಟಕ ಸರಕಾರದ ನಿರ್ಧಾರವನ್ನು ಪ್ರಶ್ನಿಸಿದ್ದು, ಸರಿಯಾಗಿ ಪೂರ್ವತಯಾರಿ ಮಾಡಿಕೊಂಡು ಬುಧವಾರ (ಸೆ 26) ಮತ್ತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸರಕಾರದ ಪರ ವಕೀಲರಿಗೆ ಆದೇಶ ನೀಡಿದೆ.
ಕೊಡಗು ಸಂತ್ರಸ್ತರಿಗೆ ಮುಜರಾಯಿ ವ್ಯಾಪ್ತಿಯಲ್ಲಿನ 81 ದೇವಾಲಯಗಳ ಮೂಲಕ ಪರಿಹಾರ ಧನ ವರ್ಗಾವಣೆ ಮಾಡುವಂತೆ, ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ, ಸೂಕ್ತ ವಿವರಣೆ ನೀಡುವಂತೆ, ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಬೆಂಗಳೂರಿನ ಇಬ್ಬರು ಈ ಸಂಬಂಧ, ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಸಿಜೆ ದಿನೇಶ್ ಮಹೇಶ್ವರಿ ಮತ್ತು ನ್ಯಾ. ಪಂಡಿತ್ ಅವರಿದ್ದ ವಿಭಾಗೀಯ ಪೀಠ, ಇತರ ಧರ್ಮಗಳ ಪೂಜಾಸ್ಥಳಗಳ ದುಡ್ಡು ಬೇಡವೇ, ಬರೀ ದೇವಾಲಯದ ಹಣವನ್ನು ಮಾತ್ರ ಯಾಕೆ ಆಯ್ದುಕೊಂಡಿದ್ದೀರಿ ಎನ್ನುವ ಪ್ರಶ್ನೆಯನ್ನು ಸರಕಾರದ ಪರ ವಕೀಲರಿಗೆ ಕೇಳಿದ್ದಾರೆ.
ದೇವಾಲಯದ ಹಣವನ್ನು ಪರಿಹಾರಕ್ಕೆ ಬಳಸುವುದಕ್ಕೆ ಹಲವರು ಒಪ್ಪುವುದಿಲ್ಲ, ನಮ್ಮ ತೀರ್ಪಿನಿಂದ ಇನ್ನಷ್ಟು ಸಮಸ್ಯೆಯಾಗಬಾರದು. ಹಣ ವರ್ಗಾವಣೆ ಮಾಡುವಂತೆ, ಸರಕಾರ ಯಾವ ಕಾನೂನಿನ ಆಧಾರದ ಮೇಲೆ ಆದೇಶ ಹೊರಡಿಸಿದೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಪರಿಹಾರ ನಿಧಿಗೆ ದೇವಾಲಯಗಳಲ್ಲಿ ಪ್ರತ್ಯೇಕ ಕೌಂಟರ್ ತೆಗೆದರೆ ಅದಕ್ಕೆ ಎಲ್ಲರೂ ಸಮ್ಮತಿಸಬಹುದು, ಅದು ಬಿಟ್ಟು ಹಿಂದೂ ದೇವಾಲಯಗಳನ್ನು ಮಾತ್ರ ಸರಕಾರ ಆಯ್ಕೆ ಮಾಡಿಕೊಂಡಿರುವ ನಿರ್ಧಾರ ಹಲವು ಅನುಮಾನಗಳಿಗೆ ಎಡೆಮಾಡಿ ಕೊಡುತ್ತದೆ. ಹಾಗಾಗಿ, ಮೇಲ್ನೋಟಕ್ಕೆ ಇದು ಸರಿಯಾದ ಕ್ರಮ ಅಲ್ಲ ಎನ್ನುವುದು ನಮ್ಮ ಅಭಿಪ್ರಾಯ ಎಂದು ಮೌಕಿಕವಾಗಿ ಸಿಜೆ, ಸರಕಾರದ ವಕೀಲರಿಗೆ ತಿಳಿಸಿದ್ದಾರೆ.












Click it and Unblock the Notifications