ಮೋದಿ ನಾಟಕ ಬಹಳ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ!
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿಗೆ ಭದ್ರಾವತಿಯ VISL ಕಾರ್ಖಾನೆಗೆ ಏಕೆ ಹೋಗಲಾಗಲಿಲ್ಲ? ಎಂದು ಕರ್ನಾಟಕ ಕಾಂಗ್ರೆಸ್ ಕೇಳಿದೆ.
ಶಿವಮೊಗ್ಗ, ಫೆಬ್ರವರಿ 27; ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿ ಅವರು ಬೆಳಗಾವಿಗೆ ತೆರಳಿದ್ದಾರೆ. ಮೋದಿ ಶಿವಮೊಗ್ಗ ಭೇಟಿ ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೊಗಳಿದ ರೀತಿ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.
ಕರ್ನಾಟಕ ಕಾಂಗ್ರೆಸ್ ಮೋದಿ ಶಿವಮೊಗ್ಗ ಭೇಟಿ ಬಗ್ಗೆ ಸರಣಿ ಟ್ವೀಟ್ ಮಾಡಿದೆ. '2008ರಲ್ಲಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದ ಶಿವಮೊಗ್ಗ ವಿಮಾನ ನಿಲ್ದಾಣದ ಟೇಪ್ ಕಟ್ ಮಾಡಿ ನನ್ನದೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ @narendramodi ಅವರೇ, ಅಲ್ಲೇ ಸಮೀಪದಲ್ಲಿರುವ ಭದ್ರಾವತಿಯ VISL ಕಾರ್ಖಾನೆಗೆ ಭೇಟಿ ನೀಡಲು ಭಯವೇಕೆ?, ಕರ್ನಾಟಕದ ಹೆಗ್ಗುರುತನ್ನು ಅಳಿಸುತ್ತಿರುವುದರಿಂದ ಅಲ್ಲಿಗೆ ಹೋಗಲು ಅಳುಕಾಗುತ್ತಿದೆಯೇ?' ಎಂದು ಕೇಳಿದೆ.

'ಇದೇ BSY ಸಿಎಂ ಆಗಿದ್ದಾಗ ಕರ್ನಾಟಕದ ನೆರೆ ಸಂಕಷ್ಟದ ಬಗ್ಗೆ ಹೇಳಿಕೊಳ್ಳಲು ಹಲವು ಬಾರಿ ಅಲೆದಾಡಿದರೂ ಪ್ರಧಾನಿ ಕಚೇರಿ ಒಳಗೂ ಬಿಟ್ಟುಕೊಳ್ಳಲಿಲ್ಲ. ಮೋದಿ ಬೆಂಗಳೂರಿಗೇ ಬಂದಿದ್ದರೂ BSY ಮುಖವನ್ನೂ ನೋಡದೆ ವಾಪಸ್ ತೆರಳಿದ್ದರು. ಈಗ ಚುನಾವಣೆಗಾಗಿ BSY ಸ್ತುತಿ ಮಾಡುತ್ತಿರುವ @narendramodi ಅವರ ನಾಟಕ ಬಹಳ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ!' ಎಂದು ಟೀಕೆ ಮಾಡಿದೆ.
ಬೊಮ್ಮಾಯಿ ಹೆಸರು ಹೇಳಲಿಲ್ಲ; ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, 'ಮೊನ್ನೆ ಅಮಿತ್ ಶಾ ಬೊಮ್ಮಾಯಿ ಮೇಲೆ ಭರವಸೆ ಇಡಿ ಎನ್ನಲಿಲ್ಲ. ಇಂದು ಶಿವಮೊಗ್ಗದಲ್ಲಿ ಪ್ರಧಾನಿ ಒಮ್ಮೆಯೂ ಬೊಮ್ಮಾಯಿಯವರ ಹೆಸರು ಹೇಳಲಿಲ್ಲ. ಇದು ಬಿಜೆಪಿಯಲ್ಲಿ @BSBommai ಅವರ ನಾಣ್ಯದ ಚಲಾವಣೆ ಮುಗಿದಿದೆ ಎಂದರ್ಥವಲ್ಲವೇ @BJP4Karnataka?. ಬಿಜೆಪಿಯಲ್ಲಿ ಇನ್ನೇನಿದ್ದರೂ ಜೋಶಿ, ಸಂತೋಷ್ ಅವರದ್ದೇ ಆಟ ಎಂಬುದರ ಮುನ್ಸೂಚನೆಯಲ್ಲವೇ ಇದು!?' ಎಂದು ಬಿಜೆಪಿಯನ್ನು ಕೇಳಿದೆ.

ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್, 'ಕುವೆಂಪು ಅವರನ್ನು ಎಲ್ಲಾ ಬಗೆಯಲ್ಲೂ ಅವಮಾನಿಸುತ್ತಿದೆ ಬಿಜೆಪಿ. ಪಠ್ಯದಲ್ಲಿ ಅವಮಾನಿಸಿದ್ದಾಯ್ತು, ಈಗ ಕನ್ನಡದ ಒಂದೇ ಒಂದು ಪದಕ್ಕೆ ಜಾಗವಿಲ್ಲದೆ, ಕೇವಲ ಹಿಂದಿ, ಇಂಗ್ಲಿಷ್ ರಾರಾಜಿಸುವ ಶಿವಮೊಗ್ಗದ ಏರ್ಪೋರ್ಟ್‌ಗೆ ಕುವೆಂಪು ಹೆಸರಿಟ್ಟು ಅವಮಾನಿಸಿದೆ. @narendramodi ಅವರೇ ವಿಮಾನ ನಿಲ್ದಾಣದಲ್ಲಿ ಕನ್ನಡವಿರಬಾರದು ಎಂಬುದು ನಿಮ್ಮ ಆಜ್ಞೆಯೇ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
'ಅಲ್ಪನಿಗೆ ಐಶ್ವರ್ಯ ಸಿಕ್ಕರೆ, ಬೆಳದಿಂಗಳಲ್ಲಿ ಕೊಡೆ ಹಿಡಿಯುತ್ತಾನೆ- ಹಳೆ ಗಾದೆ!. ಅಧಿಕಾರಕ್ಕಾಗಿ ಹಗಲಿನಲ್ಲೂ ಟಾರ್ಚ್ ಹಾಕ್ತಾರೆ - ಹೊಸ ಗಾದೆ!. BSY ಅವರ ಅಧಿಕಾರ ಎಂಬ ಬ್ಯಾಟರಿ ಕಿತ್ತುಹಾಕಿ ಈಗ ಹಗಲಿನಲ್ಲೇ ಮೊಬೈಲ್ ಟಾರ್ಚ್ ಹಾಕುವುದೇಕೆ @narendramodi ಅವರೇ?. BSY ಸುರಿಸಿದ್ದ ಕಣ್ಣೀರು ಹುಡುಕುವುದಕ್ಕಾ ಅಥವಾ ಸಂತೋಷ ಹುಡುಕುವುದಕ್ಕಾ?' ಎಂದು ಕಾಂಗ್ರೆಸ್ ಕೇಳಿದೆ.
ಕಾಂಗ್ರೆಸ್ ಈ ಟ್ವೀಟ್ ಮಾಡುವುದಕ್ಕೂ ಕಾರಣವಿದೆ. ಪ್ರಧಾನಿ ಮೋದಿ ಶಿವಮೊಗ್ಗದಲ್ಲಿ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಾಗ, ಜನರಿಗೆ ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿ ಬಿ. ಎಸ್. ಯಡಿಯೂರಪ್ಪಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಲು ಹೇಳಿದರು. ಇಂದು ಯಡಿಯೂರಪ್ಪ ಜನ್ಮದಿನವಾಗಿದೆ. ಅವರು ವಿಧಾನಸಭೆಯಲ್ಲಿ ವಿದಾಯದ ಭಾಷಣ ಮಾಡಿದರು. ಇದು ಎಲ್ಲರಿಗೂ ಪ್ರೇರಣೆ ನೀಡುವಂಥದ್ದಾಗಿದ್ದೆ. 50 ವರ್ಷಗಳಿಂದ ಯಡಿಯೂರಪ್ಪನವರು ಜನಸೇವೆಯಲ್ಲಿದ್ದಾರೆ ಎಂದು ಮೋದಿ ಬಣ್ಣಿಸಿದರು.
ವಿಐಎಸ್‌ಎಲ್ ಉಳಿವಿಗೆ ಮನವಿ; ಭದ್ರಾವತಿಯ ವಿಐಎಸ್‌ಎಲ್ ಉಳಿವಿಗೆ ಪ್ರಧಾನಿ ಮೋದಿಗೆ ಮನವಿ ಮಾಡುತ್ತೇವೆ ಎಂದು ಗುತ್ತಿಗೆ ಕಾರ್ಮಿಕರು ಶನಿವಾರ ಘೋಷಣೆ ಮಾಡಿದ್ದರು. ಸೋಮವಾರ ಶಿವಮೊಗ್ಗಕ್ಕೆ ಮೋದಿ ಭೇಟಿ ಹಿನ್ನಲೆ ಈ ಘೋಷಣೆ ಮಾಡಲಾಗಿತ್ತು. ಆದರೆ ಭಾನುವಾರ ಬೆಳಗ್ಗೆಯಿಂದಲೇ ಕಾರ್ಖನೆ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.
ಜಿಲ್ಲಾಡಳಿತದ ಸೂಚನೆ ಹಿನ್ನಲೆಯಲ್ಲಿ ಮೋದಿ ಭೇಟಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಭದ್ರಾವತಿ ತಾಲೂಕು ಆಡಳಿತ ಕಾರ್ಮಿಕರಿಗೆ ತಿಳಿಸಿತ್ತು. ಇದಕ್ಕೆ ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಕಾಂಗ್ರೆಸ್ ವಿಐಎಸ್‌ಎಲ್ ವಿಚಾರ ಮುಂದಿಟ್ಟುಕೊಂಡು ಬಿಜೆಪಿ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.












Click it and Unblock the Notifications