Gruhalakshmi Scheme: 3 ತಿಂಗಳ ಗೃಹಲಕ್ಷ್ಮಿ ಬಾಕಿ ಹಣದ ಬಗ್ಗೆ ಜೆಡಿಎಸ್ ಗಂಭೀರ ಆರೋಪ
ಎರಡನೇ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಗಂಭೀರ ಆರೋಪ ಮಾಡಿದೆ. ಕಾಂಗ್ರೆಸ್ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಸಕಾಲಕ್ಕೆ ಹಣ ಬರುತ್ತಿಲ್ಲ ಎಂದು ದೂರುತ್ತಿದ್ದಾರೆ. ಸರ್ಕಾರ ಕೂಡ ಹಣ ಬರುತ್ತೆ, ಬರುತ್ತೆ ಎಂದು ದಿನ ದೂಡುತ್ತಿದೆ. ಇದೇ ವಿಚಾರವಾಗಿ ಜೆಡಿಎಸ್ ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಗೃಹಲಕ್ಷ್ಮಿಯರು ಕಾಂಗ್ರೆಸ್ ನಂಬಿ ಮೋಸ ಹೋಗಿದ್ದಾರೆ ಎಂದು ಆರೋಪ ಮಾಡಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ, ಅದೆಷ್ಟು ಅಂತ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುತ್ತೀರಿ? ನಿಮಗೆ ಆತ್ಮಸಾಕ್ಷಿ ಇಲ್ಲವೇ? ಎಂದು ಪ್ರಶ್ನಿಸಿದೆ. ಮೇ ತಿಂಗಳ ಮೊದಲ ವಾರದಲ್ಲಿ 3 ತಿಂಗಳ ಗೃಹ ಲಕ್ಷ್ಮಿ ಹಣವನ್ನು ಮಹಿಳೆಯರ ಖಾತೆಗಳಿಗೆ ಜಮಾ ಮಾಡುತ್ತೇವೆ ಎಂದು ತಾವೇ ಹೇಳಿದ್ದೀರಿ. ಆದರೆ ಮೇ ತಿಂಗಳ ಮೂರನೇ ವಾರ ಕಳೆಯುತ್ತಾ ಬಂದಿದೆ. ಮೂರ್ನಾಲ್ಕು ತಿಂಗಳ ಗೃಹಲಕ್ಷ್ಮಿ ಬಾಕಿ ಹಣ ಇನ್ನೂ ಯಾರಿಗೂ ತಲುಪಿಲ್ಲ. ವಚನ ಭ್ರಷ್ಟ ಕಾಂಗ್ರೆಸ್ ಸರ್ಕಾರ ಸರಿಯಾದ ಸಮಯಕ್ಕೆ ಗ್ಯಾರಂಟಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದೆ.

ಜನವರಿ ತಿಂಗಳ ನಂತರ ಇಲ್ಲಿವರೆಗೆ ಗೃಹಲಕ್ಷ್ಮಿ ಸಹಾಯಧನ ಫಲಾನುಭವಿಗಳ ಖಾತೆಗೆ ಬಂದಿಲ್ಲ. ಗೃಹಲಕ್ಷ್ಮಿ ಯೋಜನೆ ಆರಂಭವಾದ ಕೆಲ ತಿಂಗಳು ಸಕಾಲಕ್ಕೆ ಸಹಾಯಧನ ಜಮೆಯಾಗಿತ್ತು. ಆಗ ಕೊಟ್ಟ ಮಾತಿನಂತೆ ಕಾಂಗ್ರೆಸ್ ಪ್ರತಿ ತಿಂಗಳು ಹಣ ಹಾಕುತ್ತಿದೆ ಎಂದು ಯಜಮಾನಿಯರು ಖುಷಿಪಟ್ಟಿದ್ದರು. ಇತ್ತೀಚಿನ ತಿಂಗಳುಗಳಿಂದ ಖಾತೆಗಳಿಗೆ ಹಣ ಬರುವುದು ವಿಳಂಬವಾಗಿದ್ದು, ಮಹಿಳೆಯರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಹಣವನ್ನೇ ಮಹಿಳೆಯರು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದರು. ಈಗ ಹಣ ಬರದೇ ಇರುವುದರಿಂದ ಕಂಗಾಲಾಗಿದ್ದಾರೆ. ಈ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶೀಘ್ರದಲ್ಲೇ ಹಣ ಜಮೆಯಾಗುತ್ತೆ ಎಂದಿದ್ದರು. ಆದರೆ ಅದು ನಿಜವಾಗಲಿಲ್ಲ.
ಸಿದ್ದರಾಮಯ್ಯ ಹೇಳಿದ್ದೇನು?
ಗೃಹಲಕ್ಷ್ಮು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮೂರು ತಿಂಗಳಿನಿಂದ ಹಣ ವರ್ಗಾವಣೆ ಆಗಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ನಮ್ಮ ಯಾವುದೇ ಗ್ಯಾರಂಟಿ ಯೋಜನೆಗಳಿಗೆ ಹಣಕಾಸಿನ ಕೊರತೆ ಇಲ್ಲ. ಕಳೆದ ಬಜೆಟ್ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿತ್ತು. ಈ ಬಜೆಟ್‌ನಲ್ಲಿ 50 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಹಾಗಾಗಿ ಗ್ಯಾರಂಟಿಗಳಿಗೆ ಯಾವುದೇ ಹಣಕಾಸಿನ ತೊಂದರೆ ಇಲ್ಲ ಎಂದಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಯಾವಾಗ ಬಿಡುಗಡೆಯಾಗುತ್ತೆ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಡಲೇ ಇಲ್ಲ.

ಅದ್ಧೂರಿ ಕಾಂಗ್ರೆಸ್ ಸಮಾವೇಶಕ್ಕೆ ಸಿದ್ಧತೆ
ರಾಜ್ಯ ಸರ್ಕಾರವು ಯಶಸ್ವಿ 2 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಅದ್ಧೂರಿಯಾಗಿ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಭರ್ಜರಿ ತಯಾರಿ ನಡೆದಿದೆ. ಇಂದು ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾರ್ಯಕ್ರಮದ ಸ್ಥಳ ಪರಿಶೀಲಿಸಿದರು. ವಿಜಯನಗರ ಜಿಲ್ಲೆಯ 71,000 ರೈತರನ್ನು ಪೋಡಿ ಮುಕ್ತರನ್ನಾಗಿ ಮಾಡಿದ್ದು, ಇದು ನಮ್ಮ ಸಾಧನೆ. ಸರ್ಕಾರದ ಸಾಧನೆಗಳನ್ನು ಸಂಭ್ರಮಿಸಲು, ಸರ್ವರನ್ನೂ ಸಾಧನಾ ಸಮಾವೇಶದಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಆಹ್ವಾನಿಸುತ್ತಿದ್ದೇವೆ. ಪ್ರತಿ ತಾಲ್ಲೂಕಿನಿಂದಲೂ ಪ್ರತಿನಿಧಿಗಳು ಬರಬೇಕು. ಮೂರು ಲಕ್ಷಕ್ಕೂ ಹೆಚ್ಚು ಜನರು ಈ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಸಾಧನಾ ಸಮಾವೇಶವನ್ನು ವಿಜಯನಗರದ ಹೊಸಪೇಟೆಯಲ್ಲಿ ಮೇ 20 ರಂದು ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ಸುಮಾರು ಮೂರು ಲಕ್ಷ ಜನ ಆಗಮಿಸುವ ಸಾಧ್ಯತೆಯಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ರೀತಿಯ ಹಣದ ಕೊರತೆಯಿಲ್ಲ. ಕಳೆದ ವರ್ಷದಂತೆ ಈ ಸಾಲಿನ ಬಜೆಟ್ ನಲ್ಲಿಯೂ ಗ್ಯಾರಂಟಿಗಳಿಗೆ ಹಣ ಮೀಸಲಿಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು ಬೃಹತ್ ಆಗಿ ಬೆಳೆದಿದ್ದು ವಿಭಾಗಗಳನ್ನು ರಚಿಸಬೇಕೆಂದು ಬಿಜೆಪಿ ಸರ್ಕಾರದ ನಗರಾಭಿವೃದ್ಧಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು ಕೂಡ ಯೋಜಿಸಿದ್ದರು. ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನ ನೆಲೆಸಿದ್ದು, ಈ ನಗರದ ಆಡಳಿತವನ್ನು ಒಂದು ಮಹಾನಗರ ಪಾಲಿಕೆ ನಿರ್ವಹಿಸುವುದು ಕಷ್ಟಸಾಧ್ಯ. ಆದ್ದರಿಂದ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ಮಹಾನಗರಕ್ಕೆ ಮೂರು ಅಥವಾ ಹೆಚ್ಚು ಮಹಾನಗರ ಪಾಲಿಕೆಗಳನ್ನು ರಚಿಸಬೇಕೆಂಬ ಚಿಂತನೆಯಿಂದ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್.ಪಾಟೀಲ್, ಸಿದ್ದಯ್ಯ ಅವರನ್ನೊಳಗೊಂಡ ಸಮಿತಿ ರಚಿಸಲಾಗಿತ್ತು. ಆದ್ದರಿಂದ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ ಈ ಚಿಂತನೆಯನ್ನು ಕಾರ್ಯರೂಪಕ್ಕೆ ತರುತ್ತಿದೆ ಎಂದು ಹೇಳಿದ್ದಾರೆ.
ಗಂಗಾವತಿ ಉಪಚುನಾವಣೆಗೆ ಅಭ್ಯರ್ಥಿ ಯಾರು?
ಗಂಗಾವತಿ ಶಾಸಕರಾಗಿದ್ದ ಜನಾರ್ಧನ ರೆಡ್ಡಿ ಅವರಿಗೆ ನ್ಯಾಯಾಲಯವು ಏಳು ವರ್ಷಗಳ ಶಿಕ್ಷೆಗೆ ಗುರಿಪಡಿಸಿದ್ದು, ಸಂವಿಧಾನದ ನಿಯಮದಂತೆ ಅವರು ಅನರ್ಹರಾಗುತ್ತಾರೆ. ಹಾಗಾಗಿ ಈ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದರೆ ಯಾರು ಅಭ್ಯರ್ಥಿಯಾಗುತ್ತಾರೆ ಎಂದು ಪಕ್ಷ ತೀರ್ಮಾನಿಸುತ್ತದೆ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
ಗಂಗಾವತಿ ವಿಧಾನಸಭೆಯ ಉಪಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಪ್ರಜಾಪ್ರಭುತ್ವದಲ್ಲಿ ಟೀಕಿಸುವುದು ಸಹಜ, ಆದರೆ ನಮ್ಮ ಸರ್ಕಾರದ ಸಾಧನೆ, ನಮ್ಮ ಬದ್ಧತೆಯ ಬಗ್ಗೆ ಜನರಿಗೆ ತಿಳಿಯುತ್ತದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನಾರ್ಧನ ರೆಡ್ಡಿ ಗೆಲ್ಲಲು ನಾನು ಸಹಾಯ ಮಾಡಿದ್ದೆ ಎನ್ನುವುದು ದೊಡ್ಡ ಸುಳ್ಳು. ಜನಾರ್ಧನ ರೆಡ್ಡಿ ಬಿಜೆಪಿ ಪಕ್ಷದವರಾಗಿದ್ದು, ಅವರಿಗೆ ಸಹಾಯ ಮಾಡಲು ಹೇಗೆ ಸಾಧ್ಯ? ನಾನು ನನ್ನ ರಾಜಕೀಯ ಜೀವನದುದ್ದಕ್ಕೂ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಿದ್ದಾಂತವನ್ನು ವಿರೋಧಿಸುತ್ತಾ ಬಂದವನು, ಈವರೆಗೆ ಸೈದ್ಧಾಂತಿಕವಾಗಿ ರಾಜಿಮಾಡಿಕೊಂಡವನಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾನು 2008-2013ರವರೆಗೆ ವಿರೋಧ ಪಕ್ಷದ ನಾಯಕನಾಗಿದ್ದಾಗ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರ ಅಕ್ರಮ ಗಣಿಗಾರಿಕೆಯ ವರದಿ ಆಧರಿಸಿ, ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದೆ. ಅಂದು ಬಿಜೆಪಿ ಸರ್ಕಾರ ನನ್ನ ಪಾದಯಾತ್ರೆಯನ್ನು ವಿರೋಧಿಸಿತ್ತು. ಅಂದು ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸಿದ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಶಿಕ್ಷೆಯಾಗಬೇಕು ಹಾಗೂ ಅಕ್ರಮ ಗಣಿಗಾರಿಕೆ ನಿಲ್ಲಬೇಕು ಎಂದು ಸಿಎಂ ಆಗ್ರಹಿಸಿದ್ದಾರೆ.












Click it and Unblock the Notifications