Government employee; NPS ರದ್ದು, 7ನೇ ವೇತನ ಆಯೋಗಕ್ಕೆ ಕೊಟ್ಟ ವಿವರ
ಬೆಂಗಳೂರು, ಅಕ್ಟೋಬರ್ 16; ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂದು ಕರ್ನಾಟಕ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ವರದಿಯೊಂದನ್ನು ಸಲ್ಲಿಕೆ ಮಾಡಿದೆ. ಈ ವರದಿಯಲ್ಲಿ ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಬೇಕು ಎಂದು ಕಾರಣಗಳ ಸಹಿತ ವಿವರಣೆ ನೀಡಲಾಗಿದೆ.
ವರದಿಯಲ್ಲಿ ಷೇರು ಮಾರುಕಟ್ಟೆ ನಿರ್ಧರಿತ National Pension System (NPS) ಯೋಜನೆಯನ್ನು ರದ್ದುಪಡಿಸಿ, ಈ ಹಿಂದೆ ಇದ್ದಂತೆ ನಿಶ್ಚಿತ ಪೆನ್‌ಷನ್ ಯೋಜನೆಯನ್ನು (Defined Pension Scheme) ಜಾರಿಗೆ ತರುವಂತೆ ಸರ್ಕಾರಕ್ಕೆ 7ನೇ ವೇತನ ಆಯೋಗದ ವರದಿಯಲ್ಲಿ ಶಿಫಾರಸು ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಸರ್ಕಾರವು ತನ್ನ ಖಾಯಂ ನೌಕರರಲ್ಲಿ ಪೆನ್ಷನ್ ಸಹಿತ ನೌಕರರು Defined Pension Scheme ನಡಿಯಲ್ಲಿ ಹಾಗೂ ನೌಕರರ ವಂತಿಗೆಯಿಂದ ರೂಪಿಸಿದ NPS ಅಡಿಯಲ್ಲಿ ಬರುವ ನೌಕರರು ಎಂಬ ಎರಡು ವರ್ಗಗಳನ್ನು 1/4/2006ರಿಂದ ಈಚೆಗೆ ನೇಮಕವಾದ ನೌಕರರಲ್ಲಿ ಸೃಷ್ಟಿಸಿದೆ ಎಂದು ವರದಿ ಹೇಳಿದೆ.
ಎನ್‌ಪಿಎಸ್ ರದ್ದು ಏಕೆ ವಿವರಣೆ; ನೌಕರರ ಇಳಿವಯಸ್ಸಿನ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ರೂಪಿಸಿದ ನಿಶ್ಚಿತ ಪಿಂಚಣಿಯನ್ನು ಕೇಂದ್ರ ಸರ್ಕಾರವು ದಿನಾಂಕ 01/01/2004 ರ ನಂತರ ಹಾಗೂ ನಮ್ಮ ರಾಜ್ಯ ಸರ್ಕಾರವು ದಿನಾಂಕ 01/04/2006 ರ ನಂತರ ಸರ್ಕಾರಿ ಸೇವೆಗೆ ನೇಮಕಗೊಳ್ಳುವ ನೌಕರರಿಗೆ ನಿಶ್ಚಿತ ಪಿಂಚಣಿ (Defined Pension Scheme) ಪದ್ಧತಿಯನ್ನು ರದ್ದು ಮಾಡಿತು.
ನೂತನ ಪಿಂಚಣಿ ಯೋಜನೆಯಡಿ ನೌಕರರಿಗೆ ಪಿಂಚಣಿ ನೀಡುವ ಉದ್ದೇಶಕ್ಕಾಗಿ ನೌಕರನ ವೇತನದಿಂದ ಶೇ 10ರಷ್ಟನ್ನು ಕಟಾವುಗೊಳಿಸುತ್ತಿದೆ ಹಾಗೂ ಸರ್ಕಾರವು ಅದಕ್ಕೆ ಸಮಾನವಾದ ಮೊತ್ತವನ್ನು ವಂತಿಗೆ ರೂಪದಲ್ಲಿ ನೀಡುತ್ತದೆ. ಹಾಗೆ ಶೇಖರಣೆಗೊಳ್ಳುವ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಸಂಸ್ಥೆಗಳ ಮೂಲಕ ಷೇರು ಪೇಟೆಯಲ್ಲಿ ತೊಡಗಿಸಲಾಗುತ್ತದೆ.
30-35 ವರ್ಷಗಳ ಸೇವೆಯ ನಂತರ ಅದರಿಂದ ಬಂದ ಲಾಭದಲ್ಲಿ ಈ ಹಣವನ್ನು ಉಪಯೋಗಿಸಿದ ಕಂಪನಿಗಳು ನೌಕರರಿಗೆ ಪಿಂಚಣಿಯನ್ನು ನೀಡುತ್ತವೆ. ಇದಕ್ಕಾಗಿ ಯಾವುದೇ ನಿರ್ದಿಷ್ಟ ಕಾನೂನುಗಳನ್ನು ರಚಿಸದೆ. ನೌಕರರ ಹಾಗೂ ಸರ್ಕಾರವು ತೊಡಗಿಸಿದ ಹಣಕ್ಕೆ ಯಾವುದೇ ಭದ್ರತೆ ನೀಡದೆ, ಈ ಹೊಸ ಪಿಂಚಣಿ ಯೋಜನೆಯನ್ನು ಘೋಷಿಸಲಾಗಿದೆ ಎಂದು ತಿಳಿಸಿದೆ.
ಸದರಿ NPS ಯೋಜನೆಯಲ್ಲಿ ನೌಕರರು ತೊಡಗಿಸುವ ಶೇಕಡ 10 ರಷ್ಟು ನಿಶ್ಚಿತವಾಗಿದೆ. ಆದರೆ ನಿವೃತ್ತಿಯ ನಂತರ ನೌಕರನಿಗೆ ದೊರಕಬೇಕಾದ ಪೆನ್ಷನ್ ಮೊತ್ತ ನಿಶ್ಚಿತವಾಗಿರುವುದಿಲ್ಲ ಹಾಗೂ ಸರ್ಕಾರದ ಶೇ.10 ರಷ್ಟು ಹಣ ಸದರಿ ಕಾಯಿದೆಯನ್ವಯ ನೌಕರರ ವಂತಿಗೆ ಹಣಕ್ಕೆ ಯಾವುದೇ ಕನಿಷ್ಠ ಭದ್ರತೆಯನ್ನು ನೀಡಿರುವುದಿಲ್ಲ. ಇದು ನೌಕರರ ಸಂಧ್ಯಾಕಾಲದ ಜೀವನವನ್ನು ಆಭದ್ರತೆಗೆ ತಳ್ಳಲು ಕಾರಣವಾಗುತ್ತದೆ. ಅಲ್ಲದೇ ನೂತನ ಪಿಂಚಣಿ ವ್ಯವಸ್ಥೆಯು ಸರ್ಕಾರ ಹಾಗೂ ಸರ್ಕಾರಿ ನೌಕರರ ನಡುವೆ ಇರುವ ಸಂಬಂಧವನ್ನು ದೂರ ಮಾಡುತ್ತದೆ. ಅಲ್ಲದೇ, ಸರ್ಕಾರಿ ಸೇವೆಗೆ ಕೌಶಲಯುಕ್ತ ಯುವಶಕ್ತಿಯನ್ನು ಆಕರ್ಷಿಸಲು ವಿಫಲವಾಗುತ್ತದೆ ಎಂದು ವಿವರಿಸಲಾಗಿದೆ.
ಈಗಾಗಲೇ ಫ್ರಾನ್ಸ್, ಸ್ಪೇನ್, ಗ್ರೀಸ್, ಡೆನ್ಮರ್ಕ್, ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಇದೇ ರೀತಿ ಷೇರು ಮಾರುಕಟ್ಟೆಯಲ್ಲಿ ನೌಕರರ ಹಾಗೂ ಜನ ಸಾಮಾನ್ಯರ ಹಣವನ್ನು ಹೂಡಿದ ಕಂಪನಿಗಳು 2008ರಲ್ಲಿ ಜಗತ್ತಿನ ಆರ್ಥಿಕ ಕುಸಿತದಿಂದಾಗಿ ನಷ್ಟ ಅನುಭವಿಸಿ ದಿವಾಳಿಯೆದ್ದು ಹೋಗಿವೆ. ಇದರಿಂದಾಗಿ ಅಲ್ಲಿನ ನೌಕರರು ಪಿಂಚಣಿ ಹಣ, ವಿಮೆ ಹಣ ಹಾಗೂ ಉಳಿತಾಯದ ಎಲ್ಲ ಹಣವನ್ನು ಸಂಪೂರ್ಣವಾಗಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.
ಇದೆಲ್ಲವನ್ನು ತಿಳಿದಿದ್ದರೂ ಸಹ ನಮ್ಮ ಸರ್ಕಾರಗಳು ತಮ್ಮ ನೌಕರರನ್ನು ಅನಿಶ್ಚಿತ ಸ್ಥಿತಿಗೆ ನೂಕುತ್ತಿರುವುದು ಒಂದು ವಿಪರ್ಯಾಸದ ಸಂಗತಿಯಾಗಿದೆ. ಹಿಂದೆ ಈ ವಿಷಯವಾಗಿ ಯಶವಂತ ಸಿನ್ಹಾ ನೇತೃತ್ವದ Parliamentary Standing Committee on Finance 2011 ರಲ್ಲಿ ಕೆಲವು ಸಲಹೆಗಳನ್ನು ನೀಡಿತ್ತು ಎಂದು ವರದಿಯಲ್ಲಿ ಉಲ್ಳೇಖಿಸಲಾಗಿದೆ.
* NPS ಯೋಜನೆಯಡಿಯಲ್ಲಿ ನೌಕರನು ತೊಡಗಿಸಿದ ಹಣಕ್ಕೆ ನಿಶ್ಚಿತ ಮೊಬಲಗು ಹಾಗೂ ಪೆನ್ಷನ್ ಬಗ್ಗೆ ಖಚಿತತೆ ಇರುವುದಿಲ್ಲ. ಸದರಿ NPS ನಲ್ಲಿ FDI ಕೇವಲ ಶೇ 26 ನಿಗದಿಪಡಿಸಲು ಸಲಹೆ ನೀಡಲಾಗಿತ್ತು. ಈಗ ಶೇಕಡ 100 ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ.
* NPS ಯೋಜನೆಯಡಿಯಲ್ಲಿ ನೌಕರನು ಇತರೆ ನಿವೃತ್ತ ನೌಕರರು ಪಡೆಯುವಂತೆ ಪೆನ್ಷನ್ ಮೊಬಲಗನ್ನು ಪಡೆಯುವಂತಿರಬೇಕು.
* ಪೆನ್ಷನ್ ಫಂಡ್ ಹಣಕ್ಕೆ Employees Provident Fund Scheme ನಲ್ಲಿ ನೀಡುವ ಬಡ್ಡಿ ದರಕ್ಕೆ ಕಡಿಮೆ ಇಲ್ಲದಂತೆ ಉಪಧನವನ್ನು ನೀಡಬೇಕೆಂದು ಸಲಹೆ ನೀಡಿದ್ದರು.
* ದೇಶದ ಸರ್ವೋಚ್ಚ ನ್ಯಾಯಾಲಯವು ಪಿಂಚಣಿ ಎಂಬುವುದು ನೌಕರರಿಗೆ ನೀಡುವ ಭಿಕ್ಷೆಯಲ್ಲ. ನೌಕರರು ದೀರ್ಘಾವಧಿಗೆ ಮಾಡಿದ ಸೇವೆ ಹಾಗೂ ಸದರಿ ಸೇವಾವಧಿಯಲ್ಲಿ ನೌಕರರ ಶ್ರಮಕ್ಕೆ ಮಾರುಕಟ್ಟೆ ದರಕ್ಕಿಂತ ಕಡಿಮೆ ವೇತನ ನೀಡಿ ಉಳಿದ ಮೊತ್ತವನ್ನು ಪಿಂಚಣಿಯ ರೂಪದಲ್ಲಿ ಇಳಿವಯಸ್ಸಿನ ಸಾಮಾಜಿಕ-ಆರ್ಥಿಕ ಭದ್ರತೆಗಾಗಿ ನೀಡುವಂತಹುದ್ದಾಗಿದೆ. ಇದನ್ನು 'Deferred Wages' ಎಂದು ಅರ್ಥೈಸಲಾಗಿದೆ. 'ಪಿಂಚಣಿ' ಎಂಬುವುದು ನೌಕರರು ಮಾಡಿದ ಸರ್ಕಾರಿ ಸೇವೆಗಾಗಿ, ಇಳಿ ವಯಸ್ಸಿನಲ್ಲಿ ನೌಕರರ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ನೀಡುವ ಹಕ್ಕಿನಂಶದ ಹಣವೆಂದು ಪರಿಗಣಿಸುವಂತೆ ಹೇಳಿದೆ.
* ಕೇಂದ್ರ ಸರ್ಕಾರದ 5ನೇ ವೇತನ ಆಯೋಗವು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಉಚ್ಚರಿಸಿ 'ಪಿಂಚಣಿ ಎಂಬುವುದು ನೌಕರರಿಗೆ ನ್ಯಾಯಬದ್ಧವಾಗಿ ಬರಬೇಕಾದ, ಹಿಂದಕ್ಕೆ ಪಡೆಯಲಾರದ ಹಾಗೂ ಕಾನೂನು ರೀತಿಯ ಹಕ್ಕಾಗಿದೆ' ಎಂದು ತಿಳಿಸಿದೆ.
ಇಂತಹ ಪಿಂಚಣಿಯನ್ನು ಸೇವೆಯಲ್ಲಿರುವ ನೌಕರರ ವೇತನ ಪರಿಷ್ಕರಿಸಿದಂತೆ ಆಗಾಗ್ಗೆ ಪರಿಷ್ಕರಿಸಿ, ನಿಗದಿ ಮಾಡಬೇಕೆಂದು ಶಿಫಾರಸ್ಸು ಮಾಡಲಾಗಿತ್ತು. ಇವೆಲ್ಲವುಗಳನ್ನು ಧಿಕ್ಕರಿಸಲಾಗಿದೆ. ಇದರಲ್ಲಿ ನೌಕರರ ಹಣಕ್ಕೆ 30-35 ವರ್ಷಗಳ ಸೇವೆಯ ನಂತರ ಸಿಗಬೇಕಾದ ಪೆನ್ಷ್‌ಗೆ ಯಾವುದೇ ಭದ್ರತೆ ಹಾಗೂ ನಿಶ್ಚಿತ ಪೆನ್ಷ್‌ನ್ ಇಲ್ಲದಂತಾಗಿದೆ. ಆದಕಾರಣ, ನೌಕರರ ಸಂಘಟನೆಗಳು ನೀಡಿದ ಕಾರಣಗಳನ್ನು NPS ರದ್ದು ಪಡಿಸುವಂತೆ ಒತ್ತಾಯಿಸಲಾಗಿದೆ.












Click it and Unblock the Notifications