Cauvery dispute: ಯಾರ ಭಯಕ್ಕೆ ನೀರು ಬಿಟ್ರಿ?- ರಾಜ್ಯ ಸರ್ಕಾರದ ವಿರುದ್ಧ ಸಿಟಿ ರವಿ ಕಿಡಿ
ಬೆಂಗಳೂರು ಸೆಪ್ಟೆಂಬರ್ 21: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಸಿಟಿ ರವಿ, ಯಾರ ಭಯಕ್ಕೆ ನೀರು ಬಿಟ್ರಿ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಕಾವೇರಿ ನೀರು ತಮಿಳುನಾಡಿಗೆ ಬಿಡದಿರಲು ಒತ್ತಾಯ ಹಾಗೂ ಹೋರಾಟದ ನಡುವೆ ಸುಪ್ರೀಂ ಕೋರ್ಟ್ ಇಂದು 5ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಟಿ ರವಿ, 'ಸುಪ್ರೀಂ ಕೋರ್ಟ್ ತೀರ್ಪು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾವೇರಿ ನೀರಿನ ವಿಷಯದಲ್ಲಿ ರಾಜಕಾರಣ ಮಾಡುವ ದುರುದ್ದೇಶ ನಮಗಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದ ವೈಫಲ್ಯ ಎತ್ತಿ ಹಿಡಿಯುವುದು ನಮಗೆ ಅನಿವಾರ್ಯವಾಗಿದೆ' ಎಂದು ಹೇಳಿದರು.

'ಇವರು (ಕಾಂಗ್ರೆಸ್) ಮುಂಚಿವಾಗಿ ನೀರು ಬಿಡುವ ಮೂಲಕ ತಮ್ಮ ಉದಾರತೆ ಪ್ರದರ್ಶನ ಮಾಡಿದರು. ಯಾರ ಭಯಕ್ಕೆ ನೀವು ನೀರು ಬಿಟ್ರಿ? ಅದರ ಪರಿಣಾಮ ನಾವು ಮಳೆ ನೀರು ಕೊರತೆಯನ್ನು ಎದುರಿಸುತ್ತಿದ್ದೇವೆ. ಕಾವೇರಿ ಕಬಿನಿ ಡ್ಯಾಂ ಖಾಲಿ ಆಗಿವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಮ್ಮ ನೆರವಿಗೆ ಬರಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲು ನಮಗೆ ನ್ಯಾಯ ಸಿಗಲಿಲ್ಲ. ನೀರು ಬಿಡುವ ಆದೇಶ ನೀಡಿದೆ' ಎಂದು ರಾಜ್ಯದ ಸರ್ಕಾರದ ವಿರುದ್ಧ ಆರೋಪ ಮಾಡಿದರು.
ಇತ್ತ ರಾಜ್ಯದಲ್ಲಿ ರೈತರು ಬೀದಿಗಿಳಿದು ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿದ್ದಾರೆ. ಈಗಾಗಲೆ ರಾಜ್ಯದಲ್ಲಿ ಬರದಿಂದಾಗಿ ಸಂಕಷ್ಟದಲ್ಲಿರುವ ರೈತರ ತಾಳ್ಮೆ ಕಟ್ಟೆ ಒಡೆದು ಹೋಗಿದೆ. ಮಂಡ್ಯ ಮತ್ತು ಮೈಸೂರಿನಲ್ಲಿ ರೈತರು ನೀರು ಬಿಡಲು ಆಗುವುದಿಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ. ಜೊತೆಗೆ ಬೆಂಗಳೂರಿನಲ್ಲೂ ಕನ್ನಡ ಪರ ಹೋರಾಟಗಾರರು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಇತ್ತ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ರಾಜ್ಯದಲ್ಲಿ ವಿರೋಧ ಹೆಚ್ಚಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ತುರ್ತು ಸಭೆ ಕರೆದಿದ್ದಾರೆ.
'ಕಾಂಗ್ರೆಸ್ ಸರ್ಕಾರಕ್ಕೆ ರೈತರ ಹಿತಾಸಕ್ತಿ ಮುಖ್ಯವಾಗಿಲ್ಲ'
ಕಾವೇರಿ ಜಲ ವಿವಾದದಲ್ಲಿ ಸುಪ್ರೀಂ ಕೋರ್ಟ್ ನಲ್ಲಿಯಾದರೂ ತಮ್ಮ ಪರ ತೀರ್ಪು ಬರಬಹುದೆಂದು ನಿರೀಕ್ಷಿಸಿದ್ದ ಕರ್ನಾಟಕಕ್ಕೆ ಇಂದು ಬಿಗ್ ಶಾಕ್ ಎದುರಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶದಂತೆ ತಮಿಳು ನಾಡಿಗೆ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಸಿಡಬ್ಲ್ಯುಎಂಎ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಸುಪ್ರೀಂ ತೀರ್ಪಿನ ಬಳಿಕ ಮೈಸೂರು ಅರಮನೆಯ ಬಳಿಯಿರುವ ಕಾಡಾ ಕಚೇರಿ, ಮಂಡ್ಯದಲ್ಲಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ತೀವ್ರ ಪ್ರತಿಭಟನೆ ಮುಂದುವರೆಸಿವೆ. ಸುಪ್ರೀಂ ಕೋರ್ಟ್ ಮುಂದೆ ಕರ್ನಾಟಕ ಸರ್ಕಾರ ಸಮರ್ಥವಾದ ಮಂಡಿಸಿಲ್ಲ, ಕಾಂಗ್ರೆಸ್ ಸರ್ಕಾರಕ್ಕೆ ರೈತರ ಹಿತಾಸಕ್ತಿ ಮುಖ್ಯವಾಗಿಲ್ಲ ಎಂದು ಆರೋಪಿಸಿ ತೀವ್ರ ಪ್ರತಿಭಟನೆಯಲ್ಲಿ ತೋಡಗಿದ್ದಾರೆ. ಇದರಿಂದಾಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಕಾವೇರಿಗಾಗಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ, ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.












Click it and Unblock the Notifications