ಕಾಂತರಾಜು ವರದಿ ಕಳ್ಳತನ ಆಗಿದ್ದರೆ ಯಾರು ಕಳ್ಳರು? ಸಿದ್ದರಾಮಯ್ಯನವರೇ? ಡಿ.ಕೆ.ಶಿವಕುಮಾರರೇ?
ಬೆಂಗಳೂರು, ನವೆಂಬರ್ 24: ಕಾಂತರಾಜು ವರದಿ ಕಳ್ಳತನ ಆಗಿದ್ದರೆ ಕಳ್ಳರನ್ನು ಯಾರು ಹಿಡಿಯಬೇಕು? ಮೊದಲು ವರದಿ ಕೊಡಲು ಬಂದಾಗ ಬೇಡ ಎಂದಿದ್ದಾಗಿ ಸಿದ್ದರಾಮಯ್ಯ ಹೇಳಿದ್ದರು. ಈಗ ಮೂಲಪ್ರತಿ ಕಳವಾದ ಬಗ್ಗೆ ಜಯಪ್ರಕಾಶ್ ಹೆಗ್ಡೆ ಅವರು ತಿಳಿಸಿದ್ದಾರೆ. ಕಳ್ಳರು ಯಾರು? ಸಿದ್ದರಾಮಯ್ಯನವರೇ? ಡಿ.ಕೆ.ಶಿವಕುಮಾರರೇ? ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮೊದಲು ಅವರನ್ನು ಹಿಡಿಯಲಿ ಎಂದು ಆಗ್ರಹಿಸಿದರು. ಮೊದಲು ವರದಿ ಕೊಡಲು ಬಂದಾಗ ಬೇಡ ಎಂದಿದ್ದಾಗಿ ಸಿದ್ದರಾಮಯ್ಯ ಹೇಳಿದ್ದರು. ಈಗ ಮೂಲಪ್ರತಿ ಕಳವಾದ ಬಗ್ಗೆ ಜಯಪ್ರಕಾಶ್ ಹೆಗ್ಡೆ ಅವರು ತಿಳಿಸಿದ್ದಾರೆ. ಮೊದಲು ಕಳ್ಳನನ್ನು ಹುಡುಕಿ ಕೊಡಿ ಎಂದು ಆಗ್ರಹಿಸಿದರು.

ಕಾಂತರಾಜು ಆಯೋಗದ ವರದಿ ನೀಡುವಾಗ ಎಲ್ಲರ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿಲ್ಲ. ಅದು ಜಾತಿಗಣತಿ ಅಲ್ಲ. ಜಾತಿಗಣತಿ ಮಾಡಲು ಸೆನ್ಸಸ್ ಡಿಪಾರ್ಟ್‍ಮೆಂಟ್ ಹೊರತುಪಡಿಸಿ ಬೇರೆ ಯಾರಿಗೂ ಅಧಿಕಾರ ಇಲ್ಲ. ಅದು ಸಮೀಕ್ಷೆ ಮಾತ್ರ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆದಿದ್ದರೆ ಅದಕ್ಕೆ ಮೌಲ್ಯವಿದೆ. ಆದರೆ, ಎಲ್ಲರ ವಿರೋಧದ ಮಧ್ಯದಲ್ಲಿ ಇಂಥ ವರದಿ ಬೇಕಿಲ್ಲ. ಎಲ್ಲರೂ ಒಪ್ಪುವ, ಮೆಚ್ಚುವ ರೀತಿಯಲ್ಲಿ ವರದಿ ಬಂದರೆ ನಮ್ಮ ಅಭ್ಯಂತರವಿಲ್ಲ. ಬಿಜೆಪಿ ಅದರ ವಿರೋಧ ಇದೆ ಎಂದಲ್ಲ ಎಂದು ತಿಳಿಸಿದರು.
ಇದು ಜಾತಿ ಗಣತಿಯಲ್ಲ. ಇದು ಜಾತಿ ಜಾತಿಗಳ ನಡುವಿನ ಕಿತಾಪತಿ ಎಂದು ಆಕ್ಷೇಪ ಸೂಚಿಸಿದರು. ಇದನ್ನು ಸದ್ಯಕ್ಕೆ ಕೈಬಿಡಿ. ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ಸರಿದೂಗಿಸಿ ಎಂದು ಸಲಹೆ ನೀಡಿದರು. ಸರ್ವಪಕ್ಷಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಿ ಎಂದು ತಿಳಿಸಿದರು.

ಜಮೀರ್ ಅಹ್ಮದ್ ಅವರ ಹೇಳಿಕೆಯನ್ನು ಖಂಡಿಸಿ ಮತ್ತು ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲು ಒತ್ತಾಯಿಸಿ ಎಸ್‍ಸಿ ಮೋರ್ಚಾ ವತಿಯಿಂದ ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಲಾಗುವುದು. ಡಿಸೆಂಬರ್ 2, 3 ಅಥವಾ ಸದನ ನಡೆಯುವಾಗಲೇ 4 ರಂದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಸಚಿವ ಜಮೀರ್ ಅಹ್ಮದ್ ಅವರು ಮಂತ್ರಿಯಾಗಿ ಮುಂದುವರಿಯಲು ಯೋಗ್ಯರಲ್ಲ. ಆ ಕಾರಣದಿಂದ ಅವರು ಬೆಳಗಾವಿಯಲ್ಲಿ ನಡೆಯುವ ಸದನಕ್ಕೆ ಅವರು ಹಾಜರಾಗಬಾರದು ಎಂದು ಆಗ್ರಹಿಸಿದರು.
ಡಾ. ಅಂಬೇಡ್ಕರ್‍ರವರು, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಕಪ್ಪುಚುಕ್ಕಿ ಇಡುವ ರೀತಿಯಲ್ಲಿ ಜಮೀರ್ ಅಹ್ಮದ್ ಅವರು ಮಾತನಾಡಿದ್ದಾರೆ. ಇದನ್ನು ಇಂದಿನ ಎಸ್‍ಸಿ ಮೋರ್ಚಾ ರಾಜ್ಯ ವಿಶೇಷ ಸಭೆಯು ಖಂಡಿಸಿದೆ ಎಂದು ತಿಳಿಸಿದರು. ಸ್ಪೀಕರ್ ಸ್ಥಾನ ಎಂಬುದು ಸಾಂವಿಧಾನಿಕ ಸ್ಥಾನ. ಆ ಸ್ಥಾನಕ್ಕೆ ಪ್ರತಿಯೊಬ್ಬರೂ ಗೌರವ ಕೊಡಬೇಕಾಗುತ್ತದೆ; ಅದು ವ್ಯಕ್ತಿಗೆ ಕೊಡುವ ಗೌರವವಲ್ಲ. ಜಮೀರ್ ಅವರು ಈ ಸ್ಥಾನವನ್ನು ಧರ್ಮಕ್ಕೆ ಅಂಟಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಜಮೀರ್ ಅವರನ್ನು ಆ ಸ್ಥಾನದಿಂದ ವಜಾ ಮಾಡಲು ಆಗ್ರಹಿಸಿದರು.












Click it and Unblock the Notifications