ವಿಪಕ್ಷ ನಾಯಕನ ಸ್ಥಾನಕ್ಕೆ ಯಾರು ಅರ್ಹರು? ಎಂಬಿ ಪಾಟೀಲರಿಂದ ಅಭಿಪ್ರಾಯ ಸಂಗ್ರಹ- ರಾಜ್ಯ ರಾಜಕಾರಣದಲ್ಲೊಂದು ವಿಚಿತ್ರ ಬೆಳವಣಿಗೆ
ಬೆಂಗಳೂರು, ಆಗಸ್ಟ್ 10: ಕರ್ನಾಟಕ ವಿಧಾನಸಭೆ ಚುನಾವಣೆಗಳಾಗಿ ಮೂರು ತಿಂಗಳು ಕಳೆದಿದ್ದರೂ ವಿರೋಧ ಪಕ್ಷದ ನಾಯಕನ ಸ್ಥಾನವಿನ್ನೂ ಖಾಲಿ ಉಳಿದಿದೆ. ಬಿಜೆಪಿಯಲ್ಲಿ ಹೈಕಮಾಂಡ್ ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿರುವುದಕ್ಕೆ ಕಾಂಗ್ರೆಸ್ ಲೇವಡಿ ಮಾಡುತ್ತಲೇ ಇದೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ವಿಪಕ್ಷ ನಾಯಕನ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ವಿಚಿತ್ರ ಬೆಳವಣಿಗೆಗೆ ಕಾರಣವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಎಂಬಿ ಪಾಟೀಲ್, 'ಬಿಜೆಪಿ ಸ್ವಂತವಾಗಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸ್ಥಿತಿಯಲ್ಲಿಲ್ಲ ಎಂದು ನಾನು ಭಾವಿಸುತ್ತೇನೆ. ಸಾರ್ವಜನಿಕ ಅಭಿಪ್ರಾಯವು ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಅರ್ಹ ಯಾರು?' ಎಂದು ಕೇಳಿದ್ದಾರೆ.

ಜನಾಭಿಪ್ರಾಯ ಸಂಗ್ರಹಕ್ಕಾಗಿ ನಾಲ್ಕು ಆಯ್ಕೆಗಳನ್ನು ಕೊಟ್ಟಿದ್ದಾರೆ. ಮೊದಲ ಆಯ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಎರಡನೇ ಆಯ್ಕೆ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ, ಮೂರನೇ ಆಯ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ನಾಲ್ಕನೇ ಆಯ್ಕೆ ಈ ಮೇಲೆ ಹೆಸರಿಸಿದವರಲ್ಲಿ ಯಾರೂ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಬಂದಿರುವ ಪ್ರಕ್ರಿಯೆಗಳ ಪ್ರಕಾರ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೇ 28.4, ಎಚ್‌ಡಿ ಕುಮಾರಸ್ವಾಮಿ ಅವರಿಗೆ ಶೇ 27.2, ಬಸವರಾಜ ಬೊಮ್ಮಾಯಿ ಅವರಿಗೆ ಶೇ 12.8 ಹಾಗೂ ನಾಲ್ಕನೇ ಆಯ್ಕೆಗೆ ಶೇ 31.5 ರಷ್ಟು ಮತಗಳು ಬಿದ್ದಿವೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರದ ಬಿಜೆಪಿ ಶಾಸಕರು ಹಾಗೂ ಮಾಜಿ ಕೇಂದ್ರ ಸಚಿವರು. ಅವರು ಹಿಂದುತ್ವ ಪ್ರಬಲ ಪ್ರತಿಪಾದಕರು. ಈ ಹಿನ್ನೆಲೆಯಲ್ಲಿ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡವಂತೆ ಒತ್ತಾಯಗಳು ಕೇಳಿಬಂದಿದೆ. ಆದರೆ, ಯತ್ನಾಳ್ ಅವರು ಈ ಹಿಂದೆ ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ವಿರುದ್ಧ ವ್ಯಾಪಕ ವಾಗ್ದಾಳಿ ನಡೆಸಿದ್ದರು. ಇದು ಯತ್ನಾಳ್ ಹಾದಿಗೆ ಕಂಟಕವಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಸಂಪ್ರದಾಯದಂತೆ ಮಾಜಿ ಮುಖ್ಯಮಂತ್ರಿಗಳನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡುವುದು ರೂಢಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ವಿಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಬೇಕೆನ್ನುವುದು ಪಕ್ಷದ ಕೆಲ ನಾಯಕರ ಅಭಿಪ್ರಾಯವಾಗಿದೆ. ಬೊಮ್ಮಾಯಿ ಅವರು ಲಿಂಗಾಯತ ನಾಯಕರು ಹಾಗೂ ಯಡಿಯೂರಪ್ಪನವರ ಆಪ್ತರಾಗಿದ್ದಾರೆ.
ಜೆಡಿಎಸ್ ಪಕ್ಷದ ಎಚ್‌ಡಿ ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದೆ. ಕುಮಾರಸ್ವಾಮಿ ಅವರು ಈಗ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಆದರೆ, ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಅವರನ್ನು ವಿಪಕ್ಷ ನಾಯಕನನ್ನಾಗಿ ಮಾಡುವುದಕ್ಕೆ ಬಿಜೆಪಿ ನಾಯಕರು ಒಪ್ಪುವುದು ದೂರದ ಮಾತು ಎಂದು ಹೇಳಲಾಗುತ್ತಿದೆ.

ಕಳೆದ ವಾರ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ವಿಪಕ್ಷ ಸ್ಥಾನದ ನಾಯಕನನ್ನು ಬೇಗ ಆಯ್ಕೆ ಮಾಡಿ, ಪಕ್ಷಕ್ಕೆ ಆಗುತ್ತಿರುವ ಮುಜುಗರವನ್ನು ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗ ಬಿಜೆಪಿ ನಾಯಕತ್ವ ಯಾವ ರೀತಿಯ ನಡೆಯನ್ನು ಅನುಸರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications