Karnataka CM: ಮುಖ್ಯ ಮಂತ್ರಿ ಬದಲಿಸಿದಾಗೆಲ್ಲ ಆಡಳಿತ ವಿರೋಧಿ ಅಲೆ ಅಬ್ಬರ; ಈ ಬಾರಿಯೂ ಬಿಜೆಪಿಗೆ ಸೋಲು ಅನಿವಾರ್ಯವಾ!?
ಬೆಂಗಳೂರು,ಏಪ್ರಿಲ್ 17: ರಾಜ್ಯ ವಿಧಾನಸಭಾ ಚುನಾವಣಾ ಅಬ್ಬರ ಜೋರಾಗಿದೆ. ಚುನಾವಣೆಯಲ್ಲಿ ಈ ಬಾರಿ ಸರ್ಕಾರ ರಚನೆಗೆ ರಾಜಕೀಯ ಪಕ್ಷಗಳು ಹಲವು ತಂತ್ರಗಾರಿಕೆಯನ್ನ ನಡೆಸಿವೆ. ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಬಿಜೆಪಿಗೆ ಹಲವು ಸಮೀಕ್ಷೆಗಳಲ್ಲಿ ದೊಡ್ಡ ಅಘಾತವಾಗಿದೆ.
ಈಗಾಗಲೇ ಹಲವು ರಾಜಕೀಯ ವಿಮರ್ಶಕರುಗಳಿಂದ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿದ್ದು, ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಧಿಕಾರಕ್ಕಾಗಿ ಹಲವು ತಂತ್ರ ಹಾಗೂ ತಂತ್ರಗಾರಿಕೆಯನ್ನ ನಡೆಸುತ್ತಿವೆ.

ಇನ್ನೂ ನಾನೇ ಕಿಂಗ್ ಮೇಕರ್ ಎಂದಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯಿಂದ ಸಾಕಷ್ಟು ಚರ್ಚೆಗಳು ಶುರುವಾಗಿದ್ದು, ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್ ನ ದೆಹಲಿ ನಾಯಕರು ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇತ್ತ ಹಿಂದಿನ ಇತಿಹಾಸವನ್ನ ಗಮನಿಸಿದರೇ ಈ ಬಾರಿಯೂ ಇಬ್ಬರು ಮುಖ್ಯಮಂತ್ರಿಗಳನ್ನ ಬದಲಾವಣೆ ಮಾಡಿರುವ ಬಿಜೆಪಿಗೆ ಅಧಿಕಾರಕ್ಕೆ ಬರುವುದು ಡೌಟ್ ಎನ್ನುವ ಚರ್ಚೆ ಶುರುವಾಗಿದೆ.
ಇತ್ತ ಕಳೆದ 45 ವರ್ಷಗಳ ಕಾಂಗ್ರೆಸ್ ರಾಜ್ಯ ರಾಜಕೀಯ ಇತಿಹಾಸ ಗಮನಿಸಿದರೆ, ಯಾವ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೋ ಆಗೆಲ್ಲ ಆ ಪಕ್ಷ ಅಧಿಕಾರ ಕಳೆದುಕೊಂಡಿರುವುದನ್ನ ಗಮನಿಸಬಹುದಾಗಿದೆ.
1978 ರಲ್ಲಿ ಕಾಂಗ್ರೆಸ್ ಪಕ್ಷದ ನಿರಂತರ ಆಡಳಿತ ತುಂಡಾದಾಗ ದೇವರಾಜ ಅರಸು ಮುಖ್ಯಮಂತ್ರಿಯಾದರು. 5 ವರ್ಷಗಳಲ್ಲಿ ದೇವರಾಜ ಅರಸು ಮತ್ತು ಗುಂಡೂರಾವ್ ಮುಖ್ಯಮಂತ್ರಿಯಾದರು. ನಂತರ ನಡೆದ 1983ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಚುನಾವಣೆಯಲ್ಲಿ ಜನತಾ ಪಾರ್ಟಿ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ರಚನೆಯಾಯಿತು. ರಾಮಕೃಷ್ಣ ಹೆಗಡೆ ಸಿಎಂ ಆದರು. ಅರ್ಧದಲ್ಲಿ ರಾಜೀನಾಮೆ ನೀಡಿದ ಕಾರಣ 1985ರಲ್ಲಿ ಮತ್ತೆ ಚುನಾವಣೆ ನಡೆದು ಜನತಾ ಪಾರ್ಟಿ ಸ್ವಂತ ಬಲದಲ್ಲಿ ಅಧಿಕಾರಕ್ಕೇರಿತು. ಎರಡನೇ ಬಾರಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು.
ನಂತರ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದ ಕಾರಣ 1988ರಲ್ಲಿ ಎಸ್.ಆರ್. ಬೊಮ್ಮಾಯಿ ಉತ್ತಾರಾಧಿಕಾರಿಯಾದರು. ನಂತರ ಬೊಮ್ಮಾಯಿ ಸರಕಾರ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದ್ದು ಇತಿಹಾಸ. ಇದಾದ ಬಳಿಕ 1989ರಲ್ಲಿ ಚುನಾವಣೆ ನಡೆದಾಗ ಜನತಾ ದಳ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಬಹುಮತ ಪಡೆಯಿತು.
ಇನ್ನೂ ಮತ್ತೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪರ್ವ ಶುರುವಾಯಿತು. 1989 ರಿಂದ 1994ರ ನಡುವೆ ಕಾಂಗ್ರೆಸ್‌ನಿಂದ ವೀರೇಂದ್ರ ಪಾಟೀಲ್, ಎಸ್.ಬಂಗಾರಪ್ಪ ಮತ್ತು ಎಂ.ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದರು. ಬಳಿಕ ನಡೆದ ಚುನಾವಣೆ ಯಲ್ಲಿ ಕಾಂಗ್ರೆಸ್ ಅಧಿಕಾರವನ್ನ ಕಳೆದುಕೊಂಡು, ಜನತಾ ದಳ ಅಧಿಕಾರವನ್ನ ಪಡೆದು ಎಚ್.ಡಿ.ದೇವೇಗೌಡರು 1994ರಲ್ಲಿ ಮುಖ್ಯಮಂತ್ರಿಯಾದರು.
ಇನ್ನೂ 1994 ರಿಂದ 1999 ರ ಅವಧಿಯಲ್ಲಿ ಜೆಡಿಎಸ್ ಪಕ್ಷದಿಂದ ಎಚ್ ಡಿ ದೇವೇಗೌಡರು ಹಾಗೂ ಜೆ ಎಚ್ ಪಾಟೀಲ್ ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿ ಬದಲಾವಣೆ ಮಾಡಿದ ನಂತರದ ಚುನಾವಣೆಯಲ್ಲಿ ಅಂದರೆ 1999 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರವನ್ನ ಕಳೆದುಕೊಂಡಿತು. 1999 ರಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿ, ಕಾಂಗ್ರೆಸ್ ನಿಂದ ಎಸ್. ಎಂ ಕೃಷ್ಣ ಮುಖ್ಯಮಂತ್ರಿಯಾದರು
1999 ರಲ್ಲಿ ಎಸ್ ಎಂ ಕೃಷ್ಣ ಪೂರ್ಣ ಅವದಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನ ಪೂರ್ಣಗೊಳಿಸಿದರು. ನಂತರ 2004 ರಲ್ಲಿ ಮತ್ತೆ ಕಾಂಗ್ರೆಸ್ ಗೆ ಬಹುಮತ ಬಾರದಿದ್ದರೂ ಜೆಡಿಎಸ್ ಬೆಂಬಲದಿಂದ ಧರಂ ಸಿಂಗ್ ಮುಖ್ಯಮಂತ್ರಿಯಾದರು.
ಇನ್ನೂ 2004 ರಿಂದ 2007 ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಇಬ್ಬರು ಮುಖ್ಯಮಂತ್ರಿ ಗಳು ಆಡಳಿತ ನಡೆಸಿದರು. 20-20 ಸರಕಾರದ ಆಶಯ ನೆಲಕಚ್ಚಿ ಕೊನೆಯ 7 ದಿನ ಬಿಜೆಪಿ ಪಕ್ಷದಿಂದ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದರೂ, ಅವರು ಸಹ ಅಧಿಕಾರ ನಡೆಸಲು ಅವಕಾಶ ಸಿಗಲಿಲ್ಲ. ನಂತರ ಸರ್ಕಾರ ಪತನಗೊಂಡು 7 ತಿಂಗಳು ರಾಷ್ಟ್ರಪತಿ ಆಳ್ವಿಕೆ ಆರಂಭವಾಯಿತು.
2004 ರಿಂದ 2007 ರಲ್ಲಿ ಎರಡು ಸಿಎಂಗಳನ್ನು ಕೊಟ್ಟ ಕಾಂಗ್ರೆಸ್ ಮತ್ತು ಜೆಡಿಎಸ್ 2008 ರ ಚುನಾವಣಾಯಲ್ಲಿ ಸೋಲು ಅನುಭವಿಸಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಇತ್ತ 2008ರಿಂದ 2013ರ ಅವಧಿ ರ ಯಲ್ಲಿ ಬಿಜೆಪಿಯಿಂದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆದರು. ನಂತರ 2013ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು.
ಇನ್ನೂ 2018 ರ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಎರಡು ದಿನಗಳ ಕಾಲ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದರೂ ನಂತರ ಅವರು ಸಂಖ್ಯಾಬಲದ ಕೊರತೆಯಿಂದಾಗಿ ರಾಜೀನಾಮೆ ನೀಡಿದರು. ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನ ಸ್ಥಾಪಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಿಂದ 14 ತಿಂಗಳ ಕಾಲ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.
ನಂತರ ಮೈತ್ರಿ ಸರ್ಕಾರದ ಪತನದ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳ ಕಾಲ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು. ಇದೀಗ ಸತತ ಒಂದು ವರ್ಷಗಳಿಂದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದು, 2018 ರಿಂದ 2023 ರ ವರೆಗೆ ಒಟ್ಟು ನಾಲ್ಕು ಜನ ಮುಖ್ಯಮಂತ್ರಿಯಾಗಿ ಅಧಿಕಾರವನ್ನ ನಡೆಸಿದ್ದಾರೆ. ಬಿಜೆಪಿ ಪಕ್ಷದಿಂದ ಇಬ್ಬರು ಮುಖ್ಯಮಂತ್ರಿಯಾಗಿರುವುದರಿಂದ ಈ ಬಾರಿಯೂ ಬಿಜೆಪಿ ಪಕ್ಷಕ್ಕೆ ಸೋಲು ಅನಿರ್ವಾರ್ಯವಾ ಎಂಬ ಪ್ರಶ್ನೆ ಉದ್ಬವವಾಗಿದೆ.
ಅಲ್ಲದೇ ಸದ್ಯದ ರಾಜ್ಯ ರಾಜಕೀಯ ಬೆಳವಣಿಯನ್ನ ಗಮನಿಸಿದರೇ ರಾಜ್ಯದಲ್ಲಿ ಬಹುಮತದಿಂದ ಯಾವ ಪಕ್ಷವೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಲಾಗಿದ್ದು, ಈ ಬಾರಿಯೂ 2018 ರಂದು ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದರೂ ಆಶ್ಚರ್ಯವಿಲ್ಲ.












Click it and Unblock the Notifications